ಡೆಂಘೀ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳು ಕೈಜೋಡಿಸಬೇಕು: ಜುಬಿನ್ ಮೊಹಾಪಾತ್ರ

KannadaprabhaNewsNetwork |  
Published : Jul 11, 2024, 01:33 AM IST
ಫೋಟೋ: ೧೦ಪಿಟಿಆರ್-ಡೆಂಗ್ಯೂ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ಡೆಂಗ್ಯೂ ನಿಯಂತ್ರಣ ಮುಂಜಾಗರೂಕತಾ ಸಭೆ, ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಈ ಬಾರಿ ಡೆಂಘೀ ಜ್ವರದ ಬಾಧೆ ಗಂಭೀರವಾಗಿದೆ. ರೋಗ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಪರಿಸರ ಸ್ವಚ್ಛತೆಯಿಂದ ಡೆಂಘೀ ರೋಗವನ್ನು ಶೇ.೯೦ರಷ್ಟು ನಿಯಂತ್ರಿಸಲು ಸಾಧ್ಯವಿದೆ ಎಂದು ಎಸಿ ಜುಬಿನ್‌ ಮಹೋಪಾತ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಾರ್ವಜನಿಕರ ಸುರಕ್ಷತೆ ಸರ್ಕಾರದ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೆ ಎಲ್ಲ ಇಲಾಖೆಗಳಿಗೂ ಜವಾಬ್ದಾರಿ ಇದ್ದು, ಸಾಂಕ್ರಾಮಿಕ ರೋಗ ನಿಯಂತ್ರಣದ ಕ್ರಮದಲ್ಲಿ ಕೈಜೋಡಿಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.

ಅವರು ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ಮಲೇರಿಯಾ ಹಾಗೂ ಡೆಂಘೀ ರೋಗಗಳ ನಿಯಂತ್ರಣ ಕುರಿತು ಬುಧವಾರ ಪುತ್ತೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಮುಂಜಾಗ್ರತಾ ಸಭೆ ಹಾಗೂ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ಮಾತನಾಡಿದರು.

ಈ ಬಾರಿ ಡೆಂಘೀ ಜ್ವರದ ಬಾಧೆ ಗಂಭೀರವಾಗಿದೆ. ರೋಗ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಪರಿಸರ ಸ್ವಚ್ಛತೆಯಿಂದ ಡೆಂಘೀ ರೋಗವನ್ನು ಶೇ.೯೦ರಷ್ಟು ನಿಯಂತ್ರಿಸಲು ಸಾಧ್ಯವಿದೆ ಎಂದರು. ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ನಗರ ಸ್ಥಳೀಯಾಡಳಿತದ ಅಧಿಕಾರಿಗಳು ಈ ಜವಾಬ್ದಾರಿ ವಹಿಸಿಕೊಂಡು ಕಾರ್ಯೋನ್ಮುಖರಾಗಬೇಕು. ಪ್ರತಿದಿನ ತಮ್ಮ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಗೆ ಸಂಬಂಧಿಸಿ ಸಂಬಂಧಿಸಿದ ಕನಿಷ್ಠ ೫ ಫೊಟೋಗಳನ್ನು ತೆಗೆದು ಜಿಪಿಎಸ್ ಮಾಡಬೇಕು. ಈ ತಿಂಗಳ ಕೊನೆಯವರೆಗೆ ಈ ಕಾರ್ಯ ಕಡ್ಡಾಯವಾಗಿ ನಡೆಸಬೇಕು. ಜನರಿಂದ ನಿಯಮಗಳು ಉಲ್ಲಂಘನೆಯಾಗಿರುವುದನ್ನು ಕಂಡರೆ ದಂಡ ಹಾಕುವ ಅಧಿಕಾರ ಬಳಸಿಕೊಳ್ಳಬೇಕು. ಜನರಲ್ಲಿ ಅರಿವು ಮೂಡಿಸುವ, ಅಂಗನವಾಡಿ, ಶಾಲೆಗಳು, ಬಸ್ ನಿಲ್ದಾಣ, ಚರಂಡಿ ಬ್ಲಾಕ್ ವಿಚಾರಗಳಲ್ಲಿ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಪ್ರಾತ್ಯಕ್ಷಿಕೆಯ ಮೂಲಕ ಡಂಘೀ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಲೇರಿಯಾ ಹಾಗೂ ಡೆಂಘೀ ನಿಯಂತ್ರಣಾಧಿಕಾರಿ ನವೀನ್‌ ಚಂದ್ರ ಕುಲಾಲ್, ಡೆಂಘೀ ಒಂದು ಬಾರಿ ಬಂದರೆ ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂತಹ ಬಾಧೆ ನೀಡುತ್ತದೆ. ಪ್ರತಿಯೊಂದು ವಾರ್ಡ್ ಅಥವಾ ಗ್ರಾಮಗಳಲ್ಲಿ ೫ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ ಅದನ್ನು ಡೆಂಘೀ ಪೀಡಿತ ಗ್ರಾಮವಾಗಿ ಘೋಷಿಸಬೇಕೆಂಬ ನಿಯಮವಿದೆ ಎಂದರು

ಡೆಂಘೀಗೆ ಯಾವುದೇ ರೀತಿಯ ನಿಗದಿತ ಚಿಕಿತ್ಸೆ ಇಲ್ಲ. ಸಿಂಟಮ್ಯಾಟಿಕ್ ಟ್ರೀಟ್‌ಮೆಂಟ್ ಮಾತ್ರ ಇದೆ. ಯಾವುದೇ ಹೊಸ ರೀತಿಯ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಬೇಡ. ಆದರೆ ಗರಿಷ್ಠ ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರಿನ ಅಂಶ ಹೆಚ್ಚು ಇರುವ ಆಹಾರ ಸೇವಿಸಬೇಕು. ಕಿವಿ ಫ್ರೂಟ್‌ಗೂ ಡೆಂಘೀ ಜ್ವರ ನಿಯಂತ್ರಣಕ್ಕೂ ಯಾವುದೇ ಸಂಬಂಧವಿಲ್ಲ. ಪಪ್ಪಾಯ ಎಲೆಯ ರಸವನ್ನು ವಿಪರೀತ ಕುಡಿಯುವುದೂ ಅಪಾಯಕಾರಿ. ಡೆಂಘೀ ಜ್ವರ ಬಂದ ಮೇಲೆ ಒಂದು ವಾರ ವಿಶ್ರಾಂತಿ ಅತಿ ಅಗತ್ಯ ಎಂದು ಮಾಹಿತಿ ನೀಡಿದರು. ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿದರು. ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ