ಕನ್ನಡಪ್ರಭ ವಾರ್ತೆ ಹಾಸನ
ಆಟವಾಡಲು ಹೋಗಿ ನಾಪತ್ತೆ ಆಗಿದ್ದ ೧೨ ವರ್ಷದ ಬಾಲಕ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆ ಮಾಡಿ ನಂತರ ರೈಲು ಅಪಘಾತವೆಂದು ಬಿಂಬಿಸಲು ರೈಲ್ವೆ ಟ್ರ್ಯಾಕ್ ಬಳಿ ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಗರದ ಹೊರವಲಯದ ಬಸವನಹಳ್ಳಿ ಬಳಿ ಈ ಘಟನೆ ನಡೆದಿದೆ.ತಾಲೂಕಿನ ಬಸವನಹಳ್ಳಿ ಬಳಿ ಆಟವಾಡುತ್ತಿದ್ದ ವೇಳೆ ಮಂಗಳವಾರ ಸಂಜೆ ನಾಪತ್ತೆ ಆಗಿದ್ದ ೧೨ ವರ್ಷದ ಬಾಲಕ ಕುಶಾಲ್, ಬುಧವಾರ ಮಧ್ಯಾಹ್ನ ಗ್ರಾಮದ ಹೊರವಲಯದ ರೈಲ್ವೆ ಟ್ರ್ಯಾಕ್‌ನಲ್ಲಿ ಶವವಾಗಿ ಪತ್ತೆ ಆಗಿದ್ದಾನೆ. ಚಿಕ್ಕ ಹೊನ್ನೇನಹಳ್ಳಿ ಗ್ರಾಮದ ವೆಂಕಟೇಶ್ ಹಾಗೂ ರೂಪ ದಂಪತಿ ಮಗನಾಗಿರುವ ಕುಶಾಲ್ ಗೌಡ ಮೃತ ಬಾಲಕನಾಗಿದ್ದು, ಗ್ರಾಮದಲ್ಲಿ ಶಾಲೆ ಮುಗಿಸಿ ಬಂದ ಬಳಿಕ ಕಣ್ಣ ಮುಚ್ಚಾಲೆ ಆಡುತ್ತಿದ್ದ ವೇಳೆ ಬಚ್ಚಿಟ್ಟುಕೊಳ್ಳಲು ಹೋದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದನು. ಬಳಿಕ ಚಿರತೆ ಹೊತ್ತೊಯ್ದ ಶಂಕೆ ವ್ಯಕ್ತಪಡಿಸಿ ಗ್ರಾಮಸ್ಥರು ಹಾಗೂ ರಾತ್ರಿ ಎಲ್ಲಾ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿರಲಿಲ್ಲ.
ಬುಧವಾರದಂದು ಮಧ್ಯಾಹ್ನ ಬಾಲಕನು ರೈಲ್ವೆ ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾಗಿದ್ದು, ಮೊದಲು ಕೊಲೆ ಮಾಡಿ ಟ್ರ್ಯಾಕ್ ಮೇಲೆ ಎಸೆಯುವ ಮೂಲಕ ಇದು ರೈಲು ಅಪಘಾತವೆಂದು ಬಿಂಬಿಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದ ಹಾಸನ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಎಫ್.ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನನ್ನು ನೋಡಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕನನ್ನು ಕೊಲೆ ಮಾಡಿದ ಪಾಪಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.