ಕಲಾವಿದ ಅಂದಾನಿ ಶಿಷ್ಯರಿಂದ ಬಯಲು ಬೆಳಕು ಕಾರ್‍ಯಕ್ರಮ

KannadaprabhaNewsNetwork | Published : Jul 11, 2024 1:33 AM

ಸಾರಾಂಶ

ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದಲ್ಲಿ ಲಲಿತ ಕಲೆಯ ಪ್ರವೃತ್ತಿಯನ್ನ ಹಸಿರು ಚಿಗುರಿಸಿದವರಲ್ಲಿ ಪ್ರಮುಖರಾಗಿರುವ ಕಲಾವಿದ ಡಾ. ವಿಜಿ ಅಂದಾನಿಯವರಿಗೆ 75 ವರ್ಷ ವಸಂತಗಳು ತುಂಬಿರುವಾಗ ಅವರ ಶಿಷ್ಯವರ್ಗದವರೆಲ್ಲರೂ ಸೇರಿ ಜು.11ರಿಂದ 3 ದಿನಗಳ ಕಾಲ ಕಲಬುರಗಿಯ ಐಡಿಯಲ್‌ ಫೈನ್‌ ಆರ್ಟ್‌ ಕಾಲೇಜಲ್ಲಿ ಹಾಗೂ ವೀರಶೈವ ಕಲ್ಯಾಣ ಮಂಟಪದಲ್ಲಿ ವಜ್ರಮಹೋತ್ಸವ ಸಮಾರಂಭ ಆಯೋಜಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದಲ್ಲಿ ಲಲಿತ ಕಲೆಯ ಪ್ರವೃತ್ತಿಯನ್ನ ಹಸಿರು ಚಿಗುರಿಸಿದವರಲ್ಲಿ ಪ್ರಮುಖರಾಗಿರುವ ಕಲಾವಿದ ಡಾ. ವಿಜಿ ಅಂದಾನಿಯವರಿಗೆ 75 ವರ್ಷ ವಸಂತಗಳು ತುಂಬಿರುವಾಗ ಅವರ ಶಿಷ್ಯವರ್ಗದವರೆಲ್ಲರೂ ಸೇರಿ ಜು.11ರಿಂದ 3 ದಿನಗಳ ಕಾಲ ಕಲಬುರಗಿಯ ಐಡಿಯಲ್‌ ಫೈನ್‌ ಆರ್ಟ್‌ ಕಾಲೇಜಲ್ಲಿ ಹಾಗೂ ವೀರಶೈವ ಕಲ್ಯಾಣ ಮಂಟಪದಲ್ಲಿ ವಜ್ರಮಹೋತ್ಸವ ಸಮಾರಂಭ ಆಯೋಜಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷರು, ನಿವೃತ್ತ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವೇಂದ್ರ, ಹಿರಿಯ ಕಲಾವಿದೆ ಡಾ. ಪೂರ್ಣಿಮಾ, ಡಾ. ಹನುಮಂತ ಮಂತಟ್ಟಿ ಅಂದಾನಿ ಅವರ ಕಲಾ ಸೇವೆಗೆ ಶಿಷ್ಟರೆಲ್ಲರೂ ಸೇರಿಕೊಂಡು ಕೃತಜ್ಞತೆ ಸಲ್ಲಿಸುವುದೇ ಈ ಸಮಾರಂಭದ ಗುರಿ ಎಂದಿದ್ದಾರೆ.

ಕಲಬುರಗಿಯ ಹೊನ್ನ ಕಿರಣಗಿಯವರಾದ ಅಂದಾನಿ ತಮ್ಮಲ್ಲಿನ ಕಲಾವಿದನಿಂದಾಗಿಯೇ ಕಲಬುರಗಿಯನ್ನು ಹೆಸರುವಾಸಿಯಾಗಿದ್ದರು. ಇವರಿಂದ ಕಲೆ ಕಲಿತವರು 5 ಸಾವಿರಕ್ಕೂ ಹೆಚ್ಚು ಮಂದಿ. ಕಲಾವಿದರಾಗಿ ಬದುಕು ಕಟ್ಟುತ್ತಿದ್ದಾರೆ. ಇದಕ್ಕೆಲ್ಲ ಅಂದಾನಿಯವರೇ ಕಾರಣ ಎಂದು ದೇವೇಂದ್ರ ಹೇಳಿದ್ದಾರೆ.

ಕಲಬುರಗಿಯಲ್ಲಿ ಬಿಸಿಲಿಗೂ ಬೆಚ್ಚದೆ ಅಂದಾನಿಯವರು ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆ ಕಟ್ಟಿದವರು. ರಾಜ್ಯದಲ್ಲೇ ಸುಂದರ ವಿನ್ಯಾಸ ಮತ್ತು ವಿಶಾಲವಾದ ಚಿತ್ರಕಲಾ ಮಹಾವಿದ್ಯಾಲಯ ತುಂಬಾ ಪರಿಶ್ರಮದಿಂದ ನಿರ್ಮಿಸಿದ್ದಾರೆ. ಚಿತ್ರಕಲೆಗೆ, ಕಲಾವಿದರಿಗೆ ಸಂಬಂಧಪಟ್ಟ ಸುಮಾರು 15 ಸಾವಿರ ಪುಸ್ತಕ ಭಂಡಾರ ಗ್ರಂಥಾಲಯ ಹೊಂದಿದೆ. ಇಲ್ಲೇ ನೂರಾರು ಮಕ್ಕಳು ಕಲೆ ಕಲಿಯುತ್ತಿದ್ದಾರೆ.

ಮೂರು ದಿವಸಗಳ ಕಾರ್ಯಕ್ರಮದಲ್ಲಿ ಜು.11 ರಂದು ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆಯ ಆವರಣದಲ್ಲಿ ಪ್ರೊ. ವಿ. ಜಿ. ಅಂದಾನಿಯವರ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ ಅಂದಾನಿ ಅವರ ಸ್ವರಚಿಸಿದ 105 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಕಲಾವಿದರು, ಕಲಾಸಕ್ತರು, ಸಾರ್ವಜನಿಕರಿಗೆ ಪ್ರವೇಶ ಉಚಿತ. ಇದಾದ ನಂತರ ಚಿತ್ರಕಲಾ ಶಿಬಿರ ಐವತ್ತು ಕಲಾವಿದರಿಂದ ನಡೆಯಲಿದೆ.

ಖ್ಯಾತರಾದ ಬರೋಡಾದ ಪ್ರೊ. ವಿಜಯ ಬಾಗೋಡಿ, ಮೈಸೂರಿನ ಬಸವರಾಜ ಮುಸಾವಳಗಿ, ವಿರೇಂದ್ರ ಶಹಾ, ಡಾ. ಪೂರ್ಣಿಮಾ ಪಾಟೀಲ, ಪ್ರೊ. ಕೆ. ಎಸ್. ಅಪ್ಪಾಜಯ್ಯ, ದೆಹಲಿಯ ಜಿ. ಆರ್. ಈರಣ್ಣ, ಡಾ.ವಿಜಯ ಹಾಗರಗುಂಡಗಿ ಪಾಲ್ಗೊಳ್ಳುತ್ತಿದ್ದಾರೆ.

ಈ ಕಲಾಶಿಬಿರದಲ್ಲಿ ರಾಜ್ಯ ಮತ್ತು ರಾಷ್ಟ್ರದಿಂದ 50 ಕಲಾವಿದರು ಭಾಗವಹಿಸಿ ಕೃತಿಗಳನ್ನು ರಚಿಸುತ್ತಿದ್ದಾರೆ. ಇವರೆಲ್ಲರೂ ಅಂದಾನಿಯವರ ಶಿಷ್ಯರಾಗಿದ್ದು, ಅಂದು ಸಂಜೆ 5ಕ್ಕೆ ಅಂದಾನಿಯವರ ಕುರಿತು ವಿಚಾರಗೋಷ್ಟಿ ಹಮ್ಮಿಕೊಳ್ಳಲಾಗಿದೆ.

ಜು.12ರಂದು ಫೈನ್‌ ಆರ್ಟ್‌ ಕಾಲೇಜಲ್ಲೇ ಮಕ್ಕಳ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಕಲಬುರಗಿ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಸುಮಾರು 1000ರಿಂದ 1500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 5ನೇ ತರಗತಿಯಿಂದ 7ನೇ ತರಗತಿಯವರೆಗೆ ಒಂದು ಗುಂಪು, 8ನೇ ತರಗತಿಯಿಂದ 10ನೇ ತರಗತಿವರೆಗ ಒಂದು ಗುಂಪು, ಪಿ.ಯು.ಸಿ. ಪ್ರಥಮ, ದ್ವಿತೀಯ ತರಗತಿಯ ವಿದ್ಯಾರ್ಥಿಗಳಿಗಾಗಿ ಒಂದು ಗುಂಪು ಭಾಗವಹಿಸಲಿದ್ದು ಅತ್ಯುತ್ತಮ ಚಿತ್ರಗಳಿಗೆ ಪುರಸ್ಕಾರ ನೀಡಲಾಗುತ್ತಿದೆ.

ಬಯಲ ಬೆಳಕು: ಜು.13ರಂದು ಅಂದಾನಿಯವರಿಂದಲೇ ಕಲಿತು ಖ್ಯಾತರಾದ 75 ಕಲಾವಿದರ ವಿವರಗಳಿರುವ ಹಾಗೂ ಅಂದಾನಿ ಬದುಕಿನ ಮಾಹಿತಿಯ ಬಯಲು ಬೆಳಕು ಕೃತಿ ಲೋಪಾರ್ಪಣೆ ನಡೆಯಲಿದೆ. ವೀರಶೈವ ಕಲ್ಯಣ ಮಂಟಪದಲ್ಲಿನ ಈ ಸಮಾರಂಭಲ್ಲಿ ಸಚಿವ ಡಾ. ಶರಣಪ್ರಕಾಶ ಪಟೀಲ್‌, ಸಂಸದ ರಾದಾಕೃಷ್ಣ ದೊಡ್ಮನಿ, ದಿ. ಪಿವಿಎನ್‌ ಮಗಳು, ಎಂಎಲ್‌ಸಿ ಸುರಭಿ ವಾಣಿ, ಶಾಸಕ ಅಲ್ಲಂಪ್ರಭು ಪಾಟೀಲ್‌, ಎಂ.ಎಸ್. ಮೂರ್ತಿ, ರಾಜಶೇಖರ. ಕೆ. ಪಾಟೀಲ, ಡಾ.ಕಾಶಿನಾಥ ಡಿ. ಹಾಗೂ ಡಾ. ಸತೀಶಕುಮಾರ ಪಿ. ವಲ್ಲೇಪುರೆ ಪಾಲ್ಗೊಳ್ಳುತ್ತಿದ್ದಾರೆಂದು ದೇವೇಂದ್ರ ಹೇಳಿದ್ದಾರೆ.

Share this article