ಕರಾವಳಿಯಲ್ಲಿ ಕಡಲ್ಕೊರೆತದ ಆತಂಕ

KannadaprabhaNewsNetwork |  
Published : Jul 11, 2024, 01:33 AM IST
ಅಂಕೋಲಾ ತಾಲೂಕಿನ ಹಾರವಾಡ ತರಂಗಮೇಟದಲ್ಲಿ ಕಡಲ್ಕೊರೆತ ಉಂಟಾಗಿರುವುದು. | Kannada Prabha

ಸಾರಾಂಶ

ಬಹುತೇಕ ಕಡೆ ತೀರಕ್ಕೆ ಹೊಂದಿಕೊಂಡೇ ಹಲವರ ಮನೆಗಳಿದ್ದು, ರಕ್ಕಸ ಅಲೆಗಳು ಮನೆಯನ್ನೂ ಆಪೋಷನ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಮುದ್ರ ತೀರದಲ್ಲಿ ಕಡಲ್ಕೊರೆತ ಆರಂಭವಾಗಿದ್ದು, ತೀರ ಪ್ರದೇಶದ ನಿವಾಸಿಗಳಲ್ಲಿ ಮನೆ- ಮಠ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ತೀರಕ್ಕೆ ವೇಗದಲ್ಲಿ ಬಂದು ಅಪ್ಪಳಿಸುವ ಅರಬ್ಬಿ ಸಮುದ್ರದ ರಕ್ಕಸ ಅಲೆಗಳಿಂದ ತೀರದಲ್ಲಿದ್ದ ವಿವಿಧ ಬಗೆಯ ಮರಗಳು ಬುಡಸಮೇತ ಕೊಚ್ಚಿಹೋಗಿ ಸಮುದ್ರ ಪಾಲಾಗುತ್ತಿವೆ. ಬಹುತೇಕ ಕಡೆ ತೀರಕ್ಕೆ ಹೊಂದಿಕೊಂಡೇ ಹಲವರ ಮನೆಗಳಿದ್ದು, ರಕ್ಕಸ ಅಲೆಗಳು ಮನೆಯನ್ನೂ ಆಪೋಷನ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಅಂಕೋಲಾ, ಕಾರವಾರ ತಾಲೂಕಿನ ಹಲವೆಡೆ ಕಡಲ್ಕೊರೆತ ಉಂಟಾಗುತ್ತಿದೆ. ಉಳಿದ ತಾಲೂಕುಗಳು ಇದರಿಂದ ಹೊರತಾಗಿಲ್ಲ. ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕಡಲ್ಕೊರೆತ ಈ ಬಾರಿ ಉಂಟಾಗಿದ್ದು, ಅಲೆಗಳ ಅಬ್ಬರಕ್ಕೆ ಬೃಹತ್ ತೆಂಗಿನ ಮರಗಳೇ ಬುಡಮೇಲಾಗಿ ಸಮುದ್ರಪಾಲಾಗುತ್ತಿವೆ. ವಾರದ ಅಂತರದಲ್ಲೇ ನೂರಾರು ಮೀಟರ್ ಪ್ರದೇಶ ಕಡಲ್ಕೊರೆತ ಬಲಿಯಾಗಿದ್ದು, ಹೀಗೆ ಮುಂದುವರಿದಲ್ಲಿ ತೀರಕ್ಕೆ ಸಮೀಪವಿರುವ ಮನೆಗಳು ಸಹ ಕೊಚ್ಚಿಕೊಂಡು ಹೋಗುವ ಆತಂಕ ಎದುರಾಗಿದೆ.

ಕಾರವಾರ ತಾಲೂಕಿನ ಹಲವೆಡೆ ಕೂಡಾ ತೀರ ಪ್ರದೇಶ ಕಡಲ್ಕೊರೆತಕ್ಕೆ ಹೊರತಾಗಿಲ್ಲ. ದೇವಬಾಗ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ಖಾಸಗಿ ರೆಸಾರ್ಟ್‌ಗೆ ಸಾಕಷ್ಟು ಹಾನಿಯಾಗಿದೆ. ಈ ಭಾಗದಲ್ಲಿ ನೂರಾರು ಮರಗಳು ಸಮುದ್ರ ಸೇರಿವೆ. ನಗರದ ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಇರುವ ಖಾಸಗಿ ಹೋಟೆಲ್ ಹಿಂಭಾಗ, ರಾಕ್ ಗಾರ್ಡನ್ ಹಿಂಭಾಗದಲ್ಲಿ ಕಡಲ್ಕೊರೆತ ಉಂಟಾಗಿದೆ. ಅದೃಷ್ಟವಶಾತ್ ಈ ಭಾಗದಲ್ಲಿ ಮನೆಗಳಿಲ್ಲ. ಆದರೆ ರಾಕ್ ಗಾರ್ಡನ್, ಸಭಾಭವನ ಕಾಲೇಜು ಮೊದಲಾದವುಗಳಿದ್ದು, ಇದೇ ರೀತಿ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದ್ದರೆ ಅಪಾಯ ತಪ್ಪಿದ್ದಲ್ಲ.

ಕರಾವಳಿ ಭಾಗದ ಬಹುತೇಕ ತಾಲೂಕಿನಲ್ಲಿ ಕಡಲ್ಕೊರೆತದ ಸಮಸ್ಯೆ ಪ್ರತಿ ಮಳೆಗಾಲದಲ್ಲೂ ಕಾಡುತ್ತಿದ್ದು, ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ