ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಮೂಲಕಸೌಕರ್ಯಗಳನ್ನು ಬಲಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಮತ್ತು ಚಂದ್ರಂಪಳ್ಳಿ ಪ್ರಕೃತಿ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಂಚೋಳಿ ವನ್ಯಜೀವಿ ಪ್ರದೇಶ ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಚಂದ್ರಂಪಳ್ಳಿ ಜಲಾಶಯ ಸುತ್ತ ಹಸಿರು ರಮಣೀಯ ದೃಶ್ಯವಾಗಿದೆ ಎಂದರು.
ಕೆಲವೇ ದಿನದಲ್ಲಿ aranyavihaara.Karnataka.gov.in ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಚಾರಣ ಪ್ರಿಯರು ಬುಕ್ಕಿಂಗ್ ಮಾಡಿಕೊಂಡು ಚಾರಣ ಮಾಡಬಹುದಾಗಿದೆ. ಚಂದ್ರಂಪಳ್ಳಿ ನಿಸರ್ಗ ಧಾಮ-ಗೊಟ್ಟಂಗೊಟ್ಟ ಕ್ಯಾಂಪ್ ವರೆಗೆ 9 ಕಿ.ಮೀ. ಚಾರಣವನ್ನು ಮೂರುವರೆ ಗಂಟೆ ಮತ್ತು ಚಂದ್ರಂಪಳ್ಳಿ ನಿಸರ್ಗ ಶಿಬಿರ-ಚಂದ್ರಂಪಳ್ಳಿ ಅರಣ್ಯ ಪ್ರದೇಶದ ಗಡಿಯವರೆಗೆ 4 ಕಿ.ಮೀ. ಚಾರಣವನ್ನು ಒಂದೂವರೆ ಗಂಟೆಯಲ್ಲಿ ಮಾಡಬಹುದಾಗಿದೆ ಎಂದು ತಿಳಿಸಿದರು.ಬೆಳಿಗ್ಗೆ 6 ರಿಂದ 2 ಗಂಟೆ ವರೆಗೆ ಮಾತ್ರ ಚಾರಣಕ್ಕೆ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ. ಕಾಡಿನಲ್ಲಿ ಚಾರಣ ಪ್ರಿಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಲು ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗುತ್ತಿದೆ ಎಂದರು.ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಇದ್ದರು.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹52 ಕೋಟಿ ಜಿಲ್ಲೆಯ ಸನ್ನತ್ತಿ, ನಾಗಾವಿ, ಚಿಂಚೋಳಿ, ದೇವಲ ಗಾಣಗಾಪೂರ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳ ಇಲಾಖೆ ಜೊತೆ ಚರ್ಚಿಸಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿ.ಪಿ.ಆರ್. ಸಿದ್ದಗೊಳ್ಳುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಈ ಪ್ರದೇಶದಲ್ಲಿ ಸುಮಾರು ₹52 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಹೆಚ್ಚಿಸುವ ಕೆಲಸಗಳು ಆರಂಭವಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಮತ್ತು ಚಂದ್ರಂಪಳ್ಳಿ ಪ್ರಕೃತಿ ಚಾರಣಕ್ಕೆ ಚಾಲನೆ ನೀಡಿಡಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.