ಕಲಬುರಗಿ : ನ್ಯಾಯಾಲಯದ ನಿರ್ದೇಶನದಂತೆ ಸ್ಥಳೀಯ ಆಡಳಿತ ಅನುಮತಿ ನೀಡಿದರೆ, ಸಚಿವ ಪ್ರಿಯಾಂಕ್ ಖರ್ಗೆಯವರ ತವರು, ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ. 2ರಂದು ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಭಾರೀ ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸಿ, ಶಕ್ತಿ ಪ್ರದರ್ಶಿಸಲು ಸ್ಥಳೀಯ ಆರ್‌ಎಸ್‌ಎಸ್ ಕಾರ್ಯರ್ತಕರು ಸಜ್ಜಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಆರ್‌ಎಸ್‌ಎಸ್ ವರ್ಸಸ್ ಸರ್ಕಾರ ಎಂಬಂತಾಗಿರುವ ಪಥ ಸಂಚಲನವನ್ನು ಯಶಸ್ವಿಯಾಗಿ ನಡೆಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಈಗಾಗಲೇ ಸಾಮಾಜಿಕ ಜಾತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
‘ಆಲ್ ಐಸ್ ಆನ್ ಚಿತ್ತಾಪುರ್ (ಎಲ್ಲರ ಕಣ್ಣು ಚಿತ್ತಾಪುರದತ್ತ)’ಎಂಬ ಹ್ಯಾಷ್‌ಟ್ಯಾಗ್ ಮಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಇದನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇದುವರೆಗೆ ವಿದೇಶಗಳಲ್ಲಿ ನಡೆಯುತ್ತಿದ್ದ ಆಲ್ ಐಸ್ ಆನ್ ಅಭಿಯಾನ ಕರ್ನಾಟಕಕ್ಕೂ ಕಾಲಿಟ್ಟಂತಾಗಿದೆ.
ಅವಕಾಶ ನಿರಾಕರಣೆ:
ಭಾನುವಾರದ ಪಥ ಸಂಚಲನದ ವೇಳೆ ಕನಿಷ್ಠ 2 ಸಾವಿರ ಆರ್‌ಎಸ್‌ಎಸ್ ಗಣವೇಷಧಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲು ಮುಂದಾಗಿದ್ದರು. ಆದರೆ, ಕಾನೂನು ಸುವ್ಯವಸ್ಥೆ ರಕ್ಷಣೆ ಮುಂದಿಟ್ಟುಕೊಂಡು ಚಿತ್ತಾಪುರ ತಹಸೀಲ್ದಾರ್ ಅವರು ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್, ನ್ಯಾಯಾಲಯದ ಮೊರೆ ಹೋಗಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ, ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸಲು ಈಗಾಗಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಆರ್‌ಎಸ್‌ಎಸ್ ವತಿಯಿಂದ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಇದೇ ಅ.24ರೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಕಲಬುರಗಿ ಸಂಚಾರಿ ಪೀಠ ಸೂಚನೆ ನೀಡಿದೆ. ಒಂದು ವೇಳೆ, ಕಾನೂನಿನ ಚೌಕಟ್ಟಿನಡಿ ಪಥ ಸಂಚಲನಕ್ಕೆ ಅನುಮತಿ ಸಿಕ್ಕರೆ, ಸುಮಾರು 25 ಸಾವಿರ ಸ್ವಯಂ ಸೇವಕರನ್ನು ಸೇರಿಸಿ, ಶಕ್ತಿ ಪ್ರದರ್ಶಿಸಲು ಸಂಘ ಪರಿವಾರದ ನಾಯಕರು ತೀರ್ಮಾನಿಸಿದ್ದಾರೆ.