ರಾಜ್ಯದಲ್ಲಿ ಕೋಮು ಗಲಭೆ ನಿಗ್ರಹಕ್ಕೆ ಮಸೂದೆ : ಸಿಎಂ

KannadaprabhaNewsNetwork |  
Published : Oct 21, 2025, 01:00 AM IST
ಅಶೋಕ ಜನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

  ಪುತ್ತೂರು :  ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಆ್ಯಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಅಶೋಕ ಜನಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ-ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸುವುದರಲ್ಲಿ ದ.ಕ. ಜಿಲ್ಲೆ ನಂಬರ್ 1 ಆಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಗೆ ದಕ್ಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಮಸೂದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಸಮ ಸಮಾಜ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಉಳ್ಳವರು ಇಲ್ಲದವರಿಗೆ ಹಂಚಬೇಕು. ಇದನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ದಾಸೋಹ ಮೂಲಕ ತಿಳಿಸಿದ್ದು, ಉತ್ಪಾದಿಸಿದ್ದನ್ನು ಹಂಚಿಕೊಂಡು ತಿನ್ನಬೇಕು. ಇದು ಸಮ ಸಮಾಜಕ್ಕೆ ಪೂರಕವಾಗಿದೆ. ನಮ್ಮ ಸರ್ಕಾರದ ಧ್ಯೇಯವೂ ಇದೇ ಆಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಜನಮನ ಕಾರ್ಯಕ್ರಮದ ಮೂಲಕ ಈ ಕಾರ್ಯ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ನಮ್ಮಲ್ಲಿ ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯ ಸಾಕಷ್ಟಿದೆ. ಸಂವಿಧಾನ ಎಲ್ಲರಿಗೂ ಅರ್ಥವಾದಾಗ ಸಮ ಸಮಾಜ ನಿರ್ಮಾಣ ಸಾಧ್ಯವಿದೆ. ಅದಕ್ಕಾಗಿ ಪ್ರತಿಯೊಂದು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಮಾಡಲಾಗುತ್ತಿದೆ ಎಂದರು. ಯಾವುದೇ ಧರ್ಮವೂ ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮವು ಪ್ರತಿಯೊಬ್ಬರನ್ನು ಪ್ರೀತಿಸಲು ತಿಳಿಸುತ್ತದೆ. ನಮ್ಮಲ್ಲಿರುವ ಅಸಮಾನತೆಗಳ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕುವೆಂಪು ಅವರು ಹೇಳುವ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯ ಕುರಿತು ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿದಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯವಿದೆ ಎಂದು ಹೇಳಿದರು.

ಜಿಎಸ್‌ಟಿ ಇಳಿಕೆಯಿಂದ ರಾಜ್ಯಕ್ಕೆ ನಷ್ಟ:

ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಪಕ್ಷಗಳ ಹೇಳಿಕೆಯಲ್ಲಿ ನಿಜವಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಆದರೆ, ಇದರಿಂದಾಗಿ ಸರ್ಕಾರ ದಿವಾಳಿಯಾಗಿಲ್ಲ. ನುಡಿದಂತೆ ನಡೆದ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ನಾನು ಮುಖ್ಯಮಂತ್ರಿಯಾಗಿರುವ ತನಕ ಬಡವರ ಕೆಲಸ ನಿಲ್ಲಿಸುವುದಿಲ್ಲ. ವಿರೋಧ ಪಕ್ಷಗಳು ಇದೀಗ ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆಯುವ ಕೆಲಸ ಮಾಡುತ್ತಿವೆ. ಜಿಎಸ್‌ಟಿ ಜಾರಿಗೊಳಿಸಿ 8 ವರ್ಷಗಳ ಕಾಲ ತೆರಿಗೆ ಸಂಗ್ರಹಿಸಿದ ಕೇಂದ್ರ ಸರ್ಕಾರ, ಇದೀಗ ಇಳಿಕೆ ಮಾಡಿ ಅದನ್ನು ದೀಪಾವಳಿ ಗಿಫ್ಟ್ ಎಂದು ಬಿಂಬಿಸುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 15 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ಹೇಳಿದರು.

ನೂಕುನುಗ್ಗಲು: 11 ಮಂದಿ ಅಸ್ವಸ್ಥ:

ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಶೋಕ ಜನಮನ ವಸ್ತ್ರ, ಪಾತ್ರೆ ವಿತರಣಾ ಸಮಾರಂಭದಲ್ಲಿ ಸಂಜೆ ವೇಳೆ ನೂಕುನುಗ್ಗಲು ಉಂಟಾಗಿ ಹಲವು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಅಶೋಕ ಜನಮನ ಕಾರ್ಯಕ್ರಮಕ್ಕೆ ಸಿಎಂ ಮಧ್ಯಾಹ್ನ 1.20ರ ವೇಳೆ ಆಗಮಿಸಿ, 3.30ರ ಸುಮಾರಿಗೆ ನಿರ್ಗಮಿಸಿದರು. ಬಳಿಕ ಪಾತ್ರೆ ವಿತರಣೆ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು. ಅದಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.

 ಅನ್ನದಾನ ಮತ್ತು ಉಡುಗೊರೆಗಾಗಿ ಜನರು ಮುಗಿಬಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿ 11 ಮಂದಿ ಅಸ್ವಸ್ಥಗೊಂಡರು. ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತಿ ಬಲ್ನಾಡು (53), ಶಬ ಮಾಡಾವು(20), ಅಮೀನಾ ಪಾಟ್ರಕೋಡಿ (56), ಯೋಗಿತಾ (20), ನೇತ್ರಾವತಿ ಇರ್ದೆ (37), ಲೀಲಾವತಿ ಕಡಬ (50), ಕುಸುಮಾ (62), ರತ್ನಾವತಿ ಪೆರಿಗೇರಿ (62), ಸ್ನೇಹಪ್ರಭಾ (41), ಜಸೀಲಾ (30), ಅಫೀಲಾ ಪಾಟ್ರಕ್ಕೋಡಿ (30) ಗಾಯಗೊಂಡವರು. ಇನ್ನೂ ಕೆಲವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.ಕುಡಿಯಲು ನೀರಿರಲಿಲ್ಲ, ಮೈದಾನವೂ ಚಿಕ್ಕದಿತ್ತು!:ಕಾರ್ಯಕ್ರಮದಲ್ಲಿ 75 ಸಾವಿರದಿಂದ 1 ಲಕ್ಷದಷ್ಟು ಮಂದಿ ಪಾಲ್ಗೊಳ್ಳುವ ಬಗ್ಗೆ ಸಂಘಟಕರು ಮೊದಲೇ ತಿಳಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಸಾವಿರಾರು ಮಂದಿ ಸೇರಿದ್ದರು. ಬಾಟಲಿ ನೀರು ವಿತರಿಸದಂತೆ ಪೊಲೀಸರು ಸೂಚನೆ ನೀಡಿದ್ದರಿಂದ ಬೆಳಗ್ಗಿನಿಂದ ಜನರು ಸೇರಿಕೊಂಡಿದ್ದರೂ ಯಾರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಿರಲಿಲ್ಲ. ಮೈದಾನ ಕೂಡ ಚಿಕ್ಕದಿತ್ತು. ಇದು ನೂಕುನುಗ್ಗಲಿಗೆ ಕಅರಣವಾಯಿತು ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ