ಎಲ್ಲರ ಗಮನ ಕ್ರಿಕೆಟ್‌ ಮೇಲೆ-ರಸ್ತೆಗಳು ಖಾಲಿ ಖಾಲಿ

KannadaprabhaNewsNetwork |  
Published : Nov 20, 2023, 12:45 AM IST
ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ಕ್ರಿಕೆಟ್ ಪ್ರೆಮಿಗಳು ಬೃಹತ್ ಪರದೆ ಮೇಲೆ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.  | Kannada Prabha

ಸಾರಾಂಶ

ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಕ್ರಿಕೆಟ್ ಪ್ರೇಮಿ ಸಿದ್ದೇಶ್ ಮತ್ತು ಗೆಳೆಯರು ಬ್ಯಾಟ್, ಬಾಲ್‌ಗಳಿಗೆ ಪೂಜೆ ಸಲ್ಲಿಸಿದರಲ್ಲದೆ, ದೇವಸ್ಥಾನ ಆವರಣದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಭಾರತ ಪರ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಹಾರೈಸಿ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜೆಗಳು ಜರುಗಿದವು.

ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಕ್ರಿಕೆಟ್ ಪ್ರೇಮಿ ಸಿದ್ದೇಶ್ ಮತ್ತು ಗೆಳೆಯರು ಬ್ಯಾಟ್, ಬಾಲ್‌ಗಳಿಗೆ ಪೂಜೆ ಸಲ್ಲಿಸಿದರಲ್ಲದೆ, ದೇವಸ್ಥಾನ ಆವರಣದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಭಾರತ ಪರ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಮಾತನಾಡಿದ ಸಿದ್ದೇಶ್, ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದುಬರಲಿ ಎಂದು ಹಾರೈಸಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಟ್ಯಂತರ ಜನರು ಭಾರತ ಗೆದ್ದು ಬರಲಿ ಎಂದು ಹಾರೈಸುತ್ತಿದ್ದು, ಬಳ್ಳಾರಿಯಲ್ಲಿ ಸಹ ಕ್ರಿಕೆಟ್ ಪ್ರೇಮಿಗಳು ಭಾರತ ಕ್ರಿಕೆಟ್ ತಂಡದ ಪರ ಪೂಜೆ ಸಲ್ಲಿಸಿದ್ದಾರೆ ಎಂದರು.

ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಪ್ಪಗಲ್ ರಸ್ತೆಯ ಮದ್ದಾನೇಶ್ವರ ದೇವಸ್ಥಾನ, ಪಾರ್ವತಿನಗರದ ಅನಾದಿಲಿಂಗೇಶ್ವರ ದೇವಸ್ಥಾನ, ದೊಡ್ಡ ಮಾರುಕಟ್ಟೆ ಬಳಿಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಕ್ರಿಕೆಟ್ ಪ್ರೇಮಿಗಳು ಪೂಜೆ ಸಲ್ಲಿಸಿ, ಭಾರತ ತಂಡಕ್ಕೆ ಹಾರೈಸಿದರು.

ಇಲ್ಲಿನ ವಿಮ್ಸ್ ಮೈದಾನದಲ್ಲಿ ಕ್ರಿಕೆಟ್‌ ಪ್ರೇಮಿಗಳು ಬೆಳಗ್ಗೆ ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು ಭಾರತ ಗೆದ್ದು ಬಾ ಎಂದು ಘೋಷಣೆಗಳನ್ನು ಕೂಗಿದರು. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು ಭಾರತ ತಂಡದ ಟೀಶರ್ಟ್‌ಗಳನ್ನು ತೊಟ್ಟು ಗಮನ ಸೆಳೆದರು.

ಬಿಡಿಎಎ ಸಭಾಂಗಣದಲ್ಲಿ ನೇರ ಪ್ರಸಾರ:

ವಿಶ್ವಕಪ್ ಕ್ರಿಕೆಟ್ ನೇರ ಪ್ರಸಾರ ವೀಕ್ಷಿಸಲು ಜಿಲ್ಲಾಡಳಿತ ನಗರದ ಬಿಡಿಎಎ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಬೃಹತ್ ಎಲ್‌ಇಡಿ ಪರದೆ ಮೇಲೆ ಕ್ರಿಕೆಟ್ ವೀಕ್ಷಿಸಲು ನೂರಾರು ಕ್ರಿಕೆಟ್ ಪ್ರೇಮಿಗಳು ಮಧ್ಯಾಹ್ನದ 2 ಗಂಟೆ ವೇಳೆಗೆ ಮೈದಾನದ ಬಳಿ ಜಮಾಯಿಸಿದ್ದರು. ಸಂಜೆ 5 ಗಂಟೆ ಹೊತ್ತಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಯುವಕರು ಬಿಡಿಎಎ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದರು.

ಭಾರತ ತಂಡದ ಸ್ಕೋರ್ ಕಡಿಮೆಯಾಗುತ್ತಿದ್ದಂತೆಯೇ ಮೈದಾನದಿಂದ ಹೊರಬಂದ ಯುವಕರು ಬೇಸರದಿಂದ ಮನೆಯ ಕಡೆ ಹೆಜ್ಜೆ ಹಾಕುತ್ತಿರುವ ದೃಶ್ಯ ಕಂಡುಬಂತು.

ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು ಬಿಕೋ ಎಂದವು. ಸದಾ ಗ್ರಾಹಕರಿಂದ ತುಂಬಿಕೊಂಡಿರುತ್ತಿದ್ದ ಇಲ್ಲಿನ ಬೆಂಗಳೂರು ರಸ್ತೆ, ಗ್ರಹಾಂ ರಸ್ತೆ, ಬ್ರಾಹ್ಮಣ ಬೀದಿಗಳು ಮಧ್ಯಾಹ್ನ ಬಳಿಕ ಜನರಿಲ್ಲದೆ ಭಣಗುಟ್ಟುತ್ತಿದ್ದವು. ಮಧ್ಯಾಹ್ನದ ಬಳಿಕ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಕೊಂಡಿದ್ದವು.

ಬಾರ್‌ಗಳಲ್ಲಿ ಭರ್ತಿ ಜನ:

ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಕ್ರಿಕೆಟ್ ಪ್ರೇಮಿಗಳು ತುಂಬಿದ್ದರು. ಕ್ರಿಕೆಟ್ ಪ್ರಿಯರಿಗಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರು ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಿದ್ದರು. ಮಧ್ಯಾಹ್ನದಿಂದಲೇ ನಗರದ ಪ್ರತಿಷ್ಠಿತ ಬಾರ್‌ಗಳಲ್ಲಿ ಜನರು ಜಮಾಯಿಸಿದ್ದುದು ಕಂಡುಬಂತು. ಇನ್ನು ಮನೆ ಮನೆಗಳಲ್ಲಿ ವಿಶ್ವಕಪ್ ಕ್ರಿಕೆಟ್ ವೀಕ್ಷಣೆಯಲ್ಲಿ ಜನರು ತಲ್ಲೀನರಾಗಿದ್ದರು. ಮಹಿಳೆಯರು ಹಾಗೂ ಮಕ್ಕಳು ಸಹ ಕ್ರಿಕೆಟ್ ಗುಂಗಿನಲ್ಲಿದ್ದರು.

ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶದಲ್ಲೂ ವಿಶ್ವಕಪ್ ಕ್ರಿಕೆಟ್ ವೀಕ್ಷಣೆಗೆ ಜನರು ಹೆಚ್ಚು ಉತ್ಸುಕರಾಗಿದ್ದರು. ರೈತರು, ಕೃಷಿ ಕಾರ್ಮಿಕರು ಸಹ ಕ್ರಿಕೆಟ್ ನೋಡಲು ಟಿವಿ ಮುಂದೆ ಕುಳಿತು, ಭಾರತ ಗೆದ್ದು ಬರಲಿ ಎಂದು ಶುಭ ಹಾರೈಸುತ್ತಿರುವ ದೃಶ್ಯಗಳು ಕಂಡು ಬಂದವು. ಜಿಲ್ಲೆಯ ಜನರು ಬೆಳಗ್ಗೆಯಿಂದಲೇ ಕ್ರಿಕೆಟ್ ಗುಂಗಿನಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ