- ಚನ್ನಗಿರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಶಾಸಕ ಬಸವರಾಜ ಶಿವಗಂಗಾ ಭರವಸೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ಸಂಜೆ ಶಾಸಕ ಬಸವರಾಜ ವಿ. ಶಿವಗಂಗಾ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ, ಕಾಲೇಜಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.ಶಾಸಕ ಶಿವಗಂಗಾ ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ಈ ಸರ್ಕಾರಿ ಡಿಗ್ರಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಈ ಕಾಲೇಜಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಉನ್ನತ ಶಿಕ್ಷಣ ಇಲಾಖೆ ವತಿಯಿಂದ ₹2.75 ಕೋಟಿ, ವಿಶೇಷ ಅನುದಾನದಲ್ಲಿ ₹1.80 ಕೋಟಿ ಹಾಗೂ ನಗರೋತ್ಥಾನ ಯೋಜನೆಯಲ್ಲಿ ಆಡಿಟೋರಿಯಂನ ಆಧುನೀಕರಣಕ್ಕೆ ₹9 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ಕಾಲೇಜಿನ ಸಭೆ-ಸಮಾರಂಭ, ವಿಚಾರ ಸಂಕಿರರ್ಣಗಳನ್ನು ನಡೆಸಲು ಆಡಿಟೋರಿಯಂ ಇದೆ. ಈ ಆಡಿಟೋರಿಯಂಗೆ ಮೂಲ ಸೌಲಭ್ಯಗಳ ಕೊರತೆ ಇದೆ. ಅಗತ್ಯ ಸೌಲಭ್ಯಗಳನ್ನು ನೀಡಿ, ಕಾಲೇಜಿನ ಎಲ್ಲ ಸಮಾರಂಭಗಳು ಇದೇ ಆಡಿಟೋರಿಯಂನಲ್ಲಿ ನಡೆಸಲಾಗುವುದು ಎಂದರು.ಈ ಸರ್ಕಾರಿ ಪದವಿ ಕಾಲೇಜನ್ನು ದಾವಣಗೆರೆ ವಿಶ್ವವಿದ್ಯಾಲಯದಲ್ಲಿಯೇ ಮಾದರಿ ಕಾಲೇಜನ್ನಾಗಿ ಮಾಡುವ ಉದ್ದೇಶ ನನ್ನದಾಗಿದೆ. ಖಾಸಗಿ ಕಾಲೇಜುಗಳನ್ನು ಮೀರಿಸುವಂತೆ ಅಭಿವೃದ್ಧಿ ಮಾಡುತ್ತೇನೆ. ಸರ್ಕಾರಿ ಸೌಲಭ್ಯಗಳನ್ನು ಕೊಡಿಸಲು ಬದ್ಧ. ಅವುಗಳ ನಿರ್ವಹಣೆ ಕಾಲೇಜಿನ ಸಿಬ್ಬಂದಿ ಸರಿಯಾಗಿ ಮಾಡಬೇಕು. ಮುಂಬರುವ ಸೋಮವಾರ ಸುಮಾರು ₹5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸಲಾಗುವುದು ಎಂದರು.
ಈ ಸಂದರ್ಭ ಪ್ರಾಚಾರ್ಯ ಅಮೃತೇಶ್ವರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವರಾಜ್, ಜ್ಯೋತಿ ಪ್ರಸಾದ್, ಮಧುಕುಮಾರ್, ಸಂಜು ಪಾಟೀಲ್, ತಾಪಂ ಮಾಜಿ ಸದಸ್ಯ ಶ್ರೀಕಾಂತ್ ಮೊದಲಾದವರು ಹಾಜರಿದ್ದರು.- - -
(ಕೋಟ್) ಚನ್ನಗಿರಿ ತಾಲೂಕಿನಲ್ಲಿಯೇ ಎಸ್‌ಎಸ್‌ಎಸ್ ಸರ್ಕಾರಿ ಕಾಲೇಜು ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಪದವಿ ಮತ್ತು ಸಾತಕೋತ್ತರ ಪದವಿ ಕಾಲೇಜಾಗಿದೆ. ಈ ಕಾಲೇಜಿನಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಕೊಡಿಸಲು ನಾನು ಸಿದ್ಧ.- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ
- - --7ಕೆಸಿಎನ್‌ಜಿ1:
ಚನ್ನಗಿರಿ ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ಸಂಜೆ ಶಾಸಕ ಬಸವರಾಜ ಶಿವಗಂಗಾ ಭೇಟಿ ನೀಡಿ ಮೂಲ ಸೌಲಭ್ಯಗಳ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಿದರು.