ಮುಂಡರಗಿ: ಇತ್ತೀಚೆಗೆ ಎಲ್ಲರೂ ತಮ್ಮ ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಅಲ್ಲಿ ಕಲಿತ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದವರು ಉತ್ತಮ ಶಿಕ್ಷಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ವಿಜ್ಞಾನಿ ಸೇರಿದಂತೆ ಅನೇಕ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಸಾಮಾಜಿಕ ಕಾರ್ಯಕರ್ತ ಆನಂದಗೌಡ ಎಚ್. ಪಾಟೀಲ ಹೇಳಿದರು.
ಬಸಾಪುರ ಗ್ರಾಮದ ರೈತ ಮುಖಂಡ ಗಣೇಶ ಭರಮಕ್ಕನವರ್ ಮಾತನಾಡಿ, ಆನಂದಗೌಡ ಪಾಟೀಲ ಚಿಕ್ಕವಯಸ್ಸಿನಲ್ಲಿ ಬಡತನ ಅನುಭವಿಸಿ ಬೆಳೆದು ದೊಡ್ಡವರಾಗಿ ಪ್ರಾಮಾಣಿಕವಾಗಿ ದುಡಿದು ಮೇಲೆ ಬಂದಿದ್ದಾರೆ. ಹೀಗಾಗಿ ಅವರು ಬಡವರಿಗೆ, ಹಿಂದುಳಿದವರಿಗೆ ಸದಾ ಬೆಂಬಲಿಸುತ್ತಾ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಅಲ್ಲಿನ ಮಕ್ಕಳಿಗೆ ಇತರ ಸಹಾಯ, ಸಹಕಾರ ಮಾಡುತ್ತಾ ಬಂದಿದ್ದಾರೆ. ಅವರ ಕಾರ್ಯ ಇತರರಿಗೆ ಮಾದರಿಯಾಗುವಂಥದ್ದು ಎಂದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಆನಂದಗೌಡ ಪಾಟೀಲ ಈ ಹಿಂದೆ ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಶಾಲೆ, ರಾಮೇನಹಳ್ಳಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಿದ್ದು, ಇದೀಗ ಕೆಜಿಎಸ್ ಶಾಲೆ ಕಲಕೇರಿ, ಬಸಾಪುರ ಹಾಗೂ ಬಾಗೇವಾಡಿ ಗ್ರಾಮದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ಯಾಂಟ್, ಟೀ-ಶರ್ಟ್ ನೀಡಿದ್ದಾರೆ. ಇಲಾಖೆ ಪರವಾಗಿ ಅವರ ಅಭಿನಂದಿಸುವೆ ಎಂದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಮಲ್ಲಯ್ಯ ಗೊಂಡಬಾಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶಾಂತಮ್ಮ ಭರಮಕ್ಕನವರ, ಬಿಆರ್‌ಪಿ ಹನುಮರಡ್ಡಿ ಇಟಗಿ, ಭರಮಪ್ಪ ಈರಗಾರ, ಕರಬಸಮ್ಮ ಕೋಡಿಹಳ್ಳಿಮಠ, ಜಗದೀಶಗೌಡ ಪಾಟೀಲ, ಮಹೇಶ ಅರಳಿ, ವೀರಣ್ಣ ತುಪ್ಪದ, ಆರ್.ಎಂ. ತಪ್ಪಡಿ ಉಪಸ್ಥಿತರಿದ್ದರು. ಆನಂತರ ಕಲಕೇರಿ, ಬಾಗೇವಾಡಿ ಶಾಲೆಗಳಲ್ಲಿನ ಮಕ್ಕಳಿಗೆ ಪಾಂಟ್, ಟೀಶರ್ಟ್ ವಿತರಿಸಲಾಯಿತು.