ಸದಸ್ಯರ ವಿರೋಧದಿಂದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತಡೆ

KannadaprabhaNewsNetwork |  
Published : Jul 25, 2025, 12:34 AM IST
ಫೋಟೋ : ೨೪ಕೆಎಂಟಿ_ಜೆಯುಎಲ್_ಕೆಪಿ೨ : ಪುರಸಭೆಯ ಸಾಮಾನ್ಯ ಸಭೆ. | Kannada Prabha

ಸಾರಾಂಶ

ಚಿತ್ರಿಗಿ ಗ್ರಾಮದ ಸರ್ವೆ ನಂ.೮೪ರಲ್ಲಿ ಈಗಾಗಲೇ ಒಣಕಸ ವಿಲೇವಾರಿ ಮಾಡಲಾಗುತ್ತಿದೆ.

ಕುಮಟಾ: ಪುರಸಭೆ ಸದಸ್ಯರೊಬ್ಬರಿಂದ ಜನವಸತಿ ನಡುವೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಸಭೆಯಲ್ಲೇ ಕುಳಿತು ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದರಿಂದ ಕಸ ವಿಲೇವಾರಿ ಘಟಕ ಕಾಮಗಾರಿ ಹಿಂದೆಗೆದುಕೊಳ್ಳುವ ಬಗ್ಗೆ ಪುರಸಭೆಯ ಆಡಳಿತ ಮಂಡಳಿ ನಿರ್ಣಯಿಸಿದ ಘಟನೆ ಕುಮಟಾ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ರಾರಾ ಅಣ್ಣಾ ಪೈ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪುರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಮಂಡನೆಯಾದ ವಿಷಯದನ್ವಯ ಹಿಂದಿನ ಸಭೆಯ ನಡಾವಳಿಯನ್ನು ದೃಢೀಕರಿಸುವುದಕ್ಕೆ ತಕರಾರು ವ್ಯಕ್ತಪಡಿಸಿದ ರಾಜೇಶ ಪೈ, ಪುರಸಭೆಯ ಹಿಂದಿನ ಸಾಮಾನ್ಯ ಸಭೆಯಲ್ಲಿ ಚಿತ್ರಿಗಿ ಗ್ರಾಮದಲ್ಲಿ ಒಣಕಸ ವಿಲೇವಾರಿ ಘಟಕ ವಿಸ್ತರಣೆಗೆ ಸದಸ್ಯರ ವಿರೋಧ ದಾಖಲಿಸಿ ಠರಾವು ಮಾಡಿರುವಾಗ ಈಗ ಕಾಮಗಾರಿ ನಡೆಸುತ್ತಿರುವುದಾದರೂ ಹೇಗೆ? ಎಂದು ಪುರಸಭೆ ಸದಸ್ಯ ರಾಜೇಶ ಪೈ ಆಕ್ಷೇಪ ವ್ಯಕ್ತಪಡಿಸಿದರು.

ಚಿತ್ರಿಗಿ ಗ್ರಾಮದ ಸರ್ವೆ ನಂ.೮೪ರಲ್ಲಿ ಈಗಾಗಲೇ ಒಣಕಸ ವಿಲೇವಾರಿ ಮಾಡಲಾಗುತ್ತಿದೆ. ಮತ್ತೊಂದು ನಿರ್ಮಾಣಕ್ಕೆ ಸ್ಥಳೀಯರ ವಿರೋಧವೂ ಇದೆ. ಹೀಗಾಗಿ ಹಿಂದಿನ ಸಭೆಯಲ್ಲಿ ಠರಾವು ಮಾಡಲಾಗಿದೆ. ಈಗ ಮತ್ತೆ ಘಟಕ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದು ಏಕೆ? ಇದರ ಹಿಂದೆ ಯಾರಿದ್ದಾರೆ? ಏನಾದರೂ ವ್ಯವಹಾರ ನಡೆಯಿತೇ? ಏನೇ ಇದ್ದರೂ ಸದ್ಯ ಕಾಮಗಾರಿ ನಿಲ್ಲಿಸಲು ಏನು ಬೇಕೋ ಅದನ್ನು ಮಾಡಲೇಬೇಕು ಎಂದು ಪಟ್ಟು ಹಿಡಿದರು.

ಎಂಜಿನಿಯರ್ ಉಮೇಶ ಮಡಿವಾಳ ಪ್ರತಿಕ್ರಿಯಿಸಿ, ಹಸಿಕಸ ವಿಲೇವಾರಿ ಮಾಡದಿರುವ ಶರತ್ತಿನ ಮೇಲೆ ನಿಕಟಪೂರ್ವ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ ಎಂದರು.

ಅಧ್ಯಕ್ಷೆ ಸುಮತಿ ಭಟ್ ಮಾತನಾಡಿ, ಈ ಜಾಗದಲ್ಲಿ ಒಣಕಸ ಮಾತ್ರ ವಿಲೇವಾರಿಗೆ ಅವಕಾಶ ಕೊಡಲಾಗಿದೆ. ಅಲ್ಲಿ ಹಸಿಕಸ ಹಾಕಿದರೆ ತಕ್ಷಣ ಬಂದು ನಿಲ್ಲಿಸುತ್ತೇನೆ. ಚಿತ್ರಗಿ ನಮ್ಮದೇ ಗ್ರಾಮ. ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಹಾಗೂ ಜನರ ಹಿತ ಪರಿಗಣಿಸಬೇಕಾಗುತ್ತದೆ ಎಂದರು.

ಇದೇ ವಿಷಯವಾಗಿ ತಾಸುಗಟ್ಟಲೇ ಮಾತುಕತೆ ನಡೆದರೂ ಬಗೆಹರಿಯದೇ ಇದ್ದಾಗ, ಅಂತಿಮವಾಗಿ ಪುರಸಭೆ ಅಧ್ಯಕ್ಷೆ ಸುಮತಿ ಭಟ್ ಎದುರು ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಇಟ್ಟ ರಾಜೇಶ ಪೈ, ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಘಟಕ ನಿರ್ಮಾಣ ತಡೆಯಲೇಬೇಕೆಂದು ಹೇಳಿದರು.

ಅಂತಿಮವಾಗಿ ಸಭೆಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ನೀಡಿದ ಅವಕಾಶ ಹಿಂಪಡೆಯುವ ಬಗ್ಗೆ ಎಲ್ಲ ಸದಸ್ಯರ ಸಮ್ಮತಿಯಂತೆ ಠರಾಯಿಸುವ ಬಗ್ಗೆ ಅಧ್ಯಕ್ಷರು ಸೂಚಿಸುವುದರೊಂದಿಗೆ ಬೇರೆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು.

ಕಟ್ಟಡ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ, ಮಹಾಯೋಜನೆಗೆ ಟೆಂಡರ್, ಕಲ್ಸಂಕ ಅಂಗನವಾಡಿಗೆ ಜಾಗ ಮಂಜೂರಿ, ಬೀದೀಪಗಳ ನಿರ್ವಹಣೆ, ಉಚ್ಚ ನ್ಯಾಯಾಲಯದ ಪ್ರಕರಣಗಳಿಗೆ ವಕಲತ್ತಿಗೆ ವಕೀಲರ ನೇಮಕ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ ಹಾಗೂ ಇತರ ಸದಸ್ಯರು, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಇನ್ನಿತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್