ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಸಮಾವೇಶ
ಕನ್ನಡಪ್ರಭ ವಾರ್ತೆ ಕೊಪ್ಪಳಲಿಂಗಾಯತ ಧರ್ಮಕ್ಕೆ ಯಾವುದೇ ಜಾತಿ, ಗಡಿಯ ಹಂಗಿಲ್ಲದ ವಿಶ್ವಧರ್ಮ ಮಾನ್ಯತೆಯ ಶಕ್ತಿಯನ್ನು ಹೊಂದಿದೆ. ಹೀಗಾಗಿ, ಎಲ್ಲ ಒಳಪಂಗಡಗಳನ್ನು ಬದಿಗೊತ್ತಿ, ಬಸವತತ್ವದಡಿ ಒಂದಾಗುವಂತೆ ಜಾಗತೀಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನಕಾರ್ಯದರ್ಶಿ ಡಾ. ಎಸ್. ಎಂ. ಜಾಮದಾರ ಕರೆ ನೀಡಿದ್ದಾರೆ.
ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಘಟಕದಿಂದ ನಡೆದ ಲಿಂಗಾಯತ ಮಹಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.1904ರಲ್ಲಿ ಲಿಂಗಾಯತ ಮಹಾಸಭೆ ಸ್ಥಾಪನೆ ಆಯಿತು. ಆಗ ವಚನ ಸಾಹಿತ್ಯ ತಿಳಿದಿರಲಿಲ್ಲ. 1923ರ ಪೂರ್ವದಲ್ಲಿ ಲಿಂಗಾಯತರಿಗೆ 2010 ವಚನಗಳು ಮಾತ್ರ ಗೊತ್ತಿದ್ದವು. ಆಗ ಶೇ.95ರಷ್ಟು ಲಿಂಗಾಯತ ಜನರು ಅನಕ್ಷರಸ್ಥರಿದ್ದರು. ಆಗ ತುಂಬ ಜನರಿಗೆ ವಚನಗಳೇ ಗೊತ್ತಿರಲಿಲ್ಲ. ಆಗ ಫ.ಗು. ಹಳಕಟ್ಟಿ ಅವರು ವಚನಗಳ ಪ್ರಕಟ ಮಾಡಿದರು. 1964ರ ವರೆಗೂ 20 ಸಾವಿರ ವಚನ ಹುಡುಕಿ ತೆಗೆದರು. ಆಗ ವಚನ ಪ್ರಚಾರ ಆಗಲಿಲ್ಲ. 4 ಲಕ್ಷ ಸಾಲುಗಳ ವಚನಗಳು ಕಳೆದ ಮೂರು ವರ್ಷದಲ್ಲಿ ನಮಗೆ ಲಭಿಸಿವೆ. ಈ ಧರ್ಮ ಸ್ಥಾಪನೆಯಾಗಿ 800 ವರ್ಷ ಗತಿಸಿವೆ. ಈಗ ವಚನಗಳು ಸಿಗಲಾರಂಭಿಸಿವೆ. ವರ್ಗ ಹಾಗೂ ವರ್ಣ ಸಂಘರ್ಷ ನಡೆದವು. ಇದೆಲ್ಲದರ ವಿರುದ್ಧ ಬಸವಣ್ಣ ಹೋರಾಟ ಮಾಡಿದರು. ಈಗ ಕಳೆದ 6 ವರ್ಷಗಳ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾ ಆರಂಭಿಸಿದ್ದು, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು. ಇದು ಕೇವಲ ಒಂದು ವರ್ಷದಲ್ಲಿ ಆಗುತ್ತದೆ ಎನ್ನುವ ಭ್ರಮ ಬೇಡ. ಜೈನ ಧರ್ಮ 65 ವರ್ಷ ಹೋರಾಟ ಮಾಡಿದ ಮೇಲೆ ಸಿಕ್ಕಿದೆ. ಬೌದ್ಧ ಧರ್ಮಕ್ಕೆ 80 ವರ್ಷಗಳ ಹೋರಾಟದ ನಂತರ ದೊರೆತಿದೆ. ಹೀಗಾಗಿ, ಈ ಸುದೀರ್ಘ ಹೋರಾಟಕ್ಕೆ ನಾವು ಅಣಿಯಾಗಬೇಕು ಎಂದರು.
2017ರಲ್ಲಿ ಸಿದ್ದರಾಮಯ್ಯ ಅವರು ಅಕ್ಕಮಹಾದೇವಿ ವಿಶ್ವವಿದ್ಯಾಲಯ ಮಾಡಿದರು. ಸರ್ಕಾರಿ ಕಚೇರಿಯಲ್ಲಿ ಬಸವಣ್ಙ ಭಾವಚಿತ್ರ ಅಳವಡಿಕೆ ಮಾಡಿದರು. ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಾಬೀತು ಮಾಡಲು ಸಾಕಷ್ಟು ದಾಖಲೆಗಳು ನಮ್ಮಲ್ಲಿ ಇವೆ.ಜಾಗತಿಕ ಮಹಾಸಭೆಗೆ ಶರಣ ತತ್ವಕ್ಕೆ ಬದ್ಧವಾಗಿ ಇದ್ದವರನ್ನೇ ಕರೆಯಿರಿ. ವಿರೋಧ ಮಾಡುವವರನ್ನು ಕೈ ಬಿಡಿ ಎಂದರು.
ಚಿಂತಕಿ ಮೀನಾಕ್ಷಿ ಬಾಳಿ ಸ್ತ್ರೀ ಕುಲೋದ್ಧಾರಕ ಬಸವಣ್ಣ ಎಂಬ ವಿಷಯದ ಕುರಿತು ಮಾತನಾಡಿ, ಮಹಿಳೆಯರಿಗೆ ಇಂದು ಸಮಾನತೆ ಬಗ್ಗೆ ಮಾತನಾಡುತ್ತೇವೆ, ಆದರೆ, ಶರಣರು 800 ವರ್ಷಗಳ ಹಿಂದೆಯೆ ನೀಡಿದ್ದಾರೆ ಮತ್ತು ಅದರಂತೆ ನಡೆದುಕೊಂಡು ಅನುಷ್ಠಾನ ಮಾಡಿದ್ದಾರೆ ಎಂದರು.ಜಾಗತಿಕ ಚರಿತ್ರೆ ನೋಡಿದರೆ ಹೆಣ್ಣು ಮಾಯೆ ಎಂದಿದೆ. ಹೆಣ್ಣನ್ನು ಚಂಚಲೆ ಎಂದರು. ಆದರೆ, ಹೆಣ್ಣಿಗೆ ದೊಡ್ಡ ಶಕ್ತಿಯಿದೆ ಎಂದು ಶರಣರು ಹೇಳಿದ್ದಾರೆ. ಸ್ತ್ರೀಗೆ ಧಾರ್ಮಿಕ ಸಮಾನತೆ ಕೊಟ್ಟಿದ್ದು ಬಸಣ್ಣನ ಕಾಲಘಟ್ಟದಲ್ಲಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಹಾಸನದ ಘಟನೆಯಲ್ಲಿ ಹೆಣ್ಣನ್ನು ತುಚ್ಛವಾಗಿ ಕಂಡರು. ಅದರಲ್ಲಿ ಲಿಂಗಾಯತ ಮಹಿಳೆಯರೇ ಇದ್ದಾರೆ ಎನ್ನುವುದು ಗೊತ್ತಿರಲಿ. ಹೆಣ್ಣು ಮಕ್ಕಳ ದೇಹವನ್ನೇ ರಾಜಕಾರಣಕ್ಕೆ ಬಳಕೆ ಮಾಡುವುದು ಅಮಾನವೀಯ ಎಂದರು ಕಿಡಿಕಾರಿದರು.ಸೊಂಡೂರು ವಿರಕ್ತ ಮಠದ ಶ್ರೀ ಪ್ರಭು ಸ್ವಾಮೀಜಿ ಸಮಾವೇಶದ ಸಾನಿಧ್ಯ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ, ಕರಿಯಪ್ಪ ಮೇಟಿ, ವಿಶ್ವನಾಥ ಬಳೊಳ್ಳಿ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ರುದ್ರಮುನಿ ಗಾಳಿ, ಗವಿಸಿದ್ದಪ್ಪ ಕೊಪ್ಪಳ ಸೇರಿ ಇತರರು ಉಪಸ್ಥಿತರಿದ್ದರು.
ಹನುಮೇಶ ಕಲ್ಮಂಗಿ ಸ್ವಾಗತಿಸಿ, ಗವಿಸಿದ್ದಪ್ಪ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು.