ಧಾರವಾಡ : 61 ಸಾವಿರ ರೈತರಿಗಿಲ್ಲ ಬರ ಪರಿಹಾರ!

KannadaprabhaNewsNetwork | Updated : May 23 2024, 02:13 PM IST

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ 1,68, 669 ರೈತರಿದ್ದಾರೆ. ಇವರಲ್ಲಿ ಬಂದಿರುವುದು 1,06,707 ರೈತರಿಗೆ ಮಾತ್ರ ಬರಪರಿಹಾರಕ್ಕೆ ಅರ್ಹರಾಗಿದ್ದಾರೆ. ಇನ್ನುಳಿದಂತೆ 61ಸಾವಿರಕ್ಕೂ ಅಧಿಕ ರೈತರು ಬರ ಪರಿಹಾರ ಅರ್ಹರಾಗಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:  ಎನ್‌ಡಿಆರ್‌ಎಫ್‌ನಡಿ ಹೆಸರು ನೋಂದಾಯಿಸಿದ ರೈತರಿಗೆ ಸರ್ಕಾರ ಬರ ಪರಿಹಾರ ಜಮಾ ಮಾಡುತ್ತಿದ್ದು, ಯಾರು ಈ ವರೆಗೆ ತಮ್ಮ ಜಮೀನುಗಳ ವಾರ್ಸಾ, ವಾಟ್ನಿ, ಪೋಡಿ ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೋ ಅವರೆಲ್ಲ ಬರ ಪರಿಹಾರದಿಂದ ವಂಚಿತರಾಗಿದ್ದಾರೆ.

ಆಯಾ ಜಮೀನಿಗೆ ಸಂಬಂಧಿಸಿದ ಉತಾರ (ಆರ್‌ಟಿಸಿ)ದಲ್ಲಿ ನಮೂದಾದ ಮಾಲೀಕ ಮಾತ್ರ ಈ ಬರ ಪರಿಹಾರಕ್ಕೆ ಅರ್ಹ. ಅಂಥವರು ಕೃಷಿ ಇಲಾಖೆಯಲ್ಲಿ ಎನ್‌ಡಿಆರ್‌ಎಫ್‌ನಡಿ ಹೆಸರು ನೋಂದಾಯಿಸಿರಬೇಕು. ಅವರ ಉತಾರ, ಆಧಾರ್‌ ಕಾರ್ಡ, ಬ್ಯಾಂಕ್‌ ಖಾತೆ ಹೊಂದಾಣಿಕೆಯಾಗುವುದು ಕೂಡ ಕಡ್ಡಾಯ. ಹೀಗೆ ದಾಖಲೆ ಇರುವ ಎಲ್ಲ ರೈತರಿಗೂ ಬರ ಪರಿಹಾರದ ಮೊತ್ತ ಆಯಾ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಉಳಿದವರಿಗೆ ಆಗಿಲ್ಲ.

2023ರಲ್ಲಿ ರಾಜ್ಯದಲ್ಲಿ ಎಲ್ಲೆಡೆ ಬರ ಆವರಿಸಿದ್ದರಿಂದ ರಾಜ್ಯ ಸರ್ಕಾರ 223 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿತ್ತು. ಅದರಂತೆ ಇದೀಗ ಬಿಡುಗಡೆಯಾಗಿರುವ ಎನ್‌ಡಿಆರ್‌ಎಫ್‌ ಪರಿಹಾರ ಹಣ ಮಾತ್ರ ಎಲ್ಲ ರೈತರಿಗೂ ದೊರೆತಿಲ್ಲ.

ಆಗಿರುವುದೇನು?:

ಧಾರವಾಡ ಜಿಲ್ಲೆಯಲ್ಲಿ 1,68, 669 ರೈತರಿದ್ದು 1,06,707 ರೈತರು ಮಾತ್ರ ಬರ ಪರಿಹಾರಕ್ಕೆ ಅರ್ಹರಾಗಿದ್ದಾರೆ. ಉಳಿದ 61 ಸಾವಿರಕ್ಕೂ ಅಧಿಕ ರೈತರು ಬರ ಪರಿಹಾರ ಪಡೆಯಲು ಅರ್ಹರಾಗಿಲ್ಲ. ಅಂದರೆ ಎಫ್‌ಐಡಿ ಫಾರ್ಮರ್ಸ್‌ ಐಡಿಟೆಂಟಿ ಇದ್ದವರಿಗೆ ಮಾತ್ರ ಪರಿಹಾರ ಕೊಡಲಾಗಿದೆ. ಜತೆಗೆ ಬರ ಇದೆ. ಬಿತ್ತಿದರೂ ಏನು ಫಸಲು ಬರಲ್ಲ ಎಂದುಕೊಂಡು ಬಿತ್ತನೆ ಮಾಡದಿರುವ ಅಥವಾ ಬೆಳೆ ಸರಿಯಾಗಿ ಬರಲಿಲ್ಲವೆಂದು ಮರುಬಿತ್ತನೆ ಮಾಡಿದ್ದ ಬೆಳೆಯನ್ನೇ ಹರಗಿದ (ನಾಶಗೊಳಿಸಿದ) ರೈತರಿಗೆ ಪರಿಹಾರ ಸಿಕ್ಕಿಲ್ಲ.

ಸಮೀಕ್ಷೆ:

ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮೂರು ಇಲಾಖೆಗಳು ಸೇರಿ ಸಮೀಕ್ಷೆ ನಡೆಸಿವೆ. ಯಾರ ಎಫ್‌ಐಡಿ ಇದೆಯೋ, ಆ ಹೊಲದಲ್ಲಿ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆಯೋ ಆ ರೈತರಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,06707 ರೈತರಿಗೆ ₹ 108 ಕೋಟಿಗೂ ಅಧಿಕ ಪರಿಹಾರ ಬಿಡುಗಡೆ ಆಗಿದೆ ಎಂದು ಜಿಲ್ಲಾಡಳಿತದ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಪರಿಹಾರ ಬಿಡುಗಡೆಯಾದ ರೈತರಿಗೆ ಖುಷ್ಕಿ (ಮಳೆಯಾಶ್ರೀತ) ಪ್ರತಿ ಹೆಕ್ಟರ್‌ಗೆ ₹ 8500, ನೀರಾವರಿ ₹ 17 ಸಾವಿರ ಹಾಗೂ ತೋಟಗಾರಿಕೆ ಅಥವಾ ಬಹುವರ್ಷದ ಬೆಳೆಗಳಿಗೆ ಹೆಕ್ಟರ್‌ಗೆ ₹ 22 ಸಾವಿರ ಪರಿಹಾರದ ರೂಪದಲ್ಲಿ ನೀಡಲಾಗುತ್ತಿದೆ.

ಬರ ಪೀಡಿತ ತಾಲೂಕು ಎಂದು ಘೋಷಿಸಿದ ಮೇಲೆ ಆಯಾ ತಾಲೂಕುಗಳಲ್ಲಿರುವ ರೈತರೆಲ್ಲರಿಗೂ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸಮೀಕ್ಷೆ ಎಂದು ರೈತರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಸರ್ಕಾರ. ಎಲ್ಲ ರೈತರಿಗೆ ಬರ ಪರಿಹಾರ ಕೊಡಬೇಕು ಎಂದು ರೈತ ಹೋರಾಟಗಾರ ಶಂಕರಪ್ಪ ಅಂಬಲಿ ಹೇಳಿದರು.

Share this article