ರಾಮನಗರ: ಕಳೆದ ಬಾರಿ ಆಯವ್ಯಯದಲ್ಲಿ ಜಿಲ್ಲೆಗೆ 4 ಯೋಜನೆಗಳು ಘೋಷಣೆಯಾಗಿದ್ದವು. ಅವುಗಳಲ್ಲಿ 2 ಯೋಜನೆಗಳ ಪ್ರಕ್ರಿಯೆ ಚಾಲನೆಯಲ್ಲಿದ್ದರೆ, ಉಳಿದ 2 ಯೋಜನೆಗಳಿಗೆ ಹಣಕಾಸಿನ ಅನುಮೋದನೆ ಸಿಕ್ಕಿದೆ. ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವ ಕಾರಣ ಘೋಷಣೆಯಾಗಿರುವ ಯೋಜನೆಗಳೆಲ್ಲವೂ ಹಣಕಾಸಿನ ಕೊರತೆ ಇಲ್ಲದೆ ಅನುಷ್ಠಾನಗೊಳ್ಳುತ್ತಿವೆ.
ಪ್ರಗತಿಯಲ್ಲಿರುವ ಕಾಮಗಾರಿಗಳು:ಹಿಂದಿನ ಬಜೆಟ್ ನಲ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರು. ವೆಚ್ಚದಲ್ಲಿ 2ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿತ್ತು.
ಅದರಂತೆ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣದ 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.ಬೆಂಗಳೂರಿನ ಹೊರ ವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ದೊಂದಿಗೆ ಉಪ ನಗರ ಟೌನ್ ಶಿಪ್‌ಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.
ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಡದಿಯಲ್ಲಿ ಟೌನ್ ಶಿಪ್ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಸರ್ಕಾರಿ ಮತ್ತು ಕೃಷಿ ಭೂಮಿ ಗುರುತಿಸಲಾಗಿದ್ದು, 5 -10 ಎಕರೆ ಭೂ ಮಾಲೀಕರಿಗೆ ಪರಿಹಾರ ನೀಡುವುದು. 10ಕ್ಕಿಂತ ಹೆಚ್ಚಿನ ಭೂಮಿ ಹೊಂದಿರುವ ರೈತರನ್ನು ಷೇರ್ ಹೋಲ್ಡರ್ ಮಾಡಿಕೊಳ್ಳುವ ಚಿಂತನೆ ನಡೆದಿದೆ.ಅನುದಾನ ಬಿಡುಗಡೆಗೆ ಅನುಮೋದನೆ:
ಬಜೆಟ್‌ಲ್ಲಿ ಕಾವೇರಿ ನೀರಾವರಿ ನಿಗಮದಡಿ ವಿಶ್ವೇಶ್ವರಯ್ಯ ನಾಲಾ ಜಾಲದ ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆಗಳು, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್ ಲೈನ್ ಮೂಲಕ ನೀರು ಒದಗಿಸುವ ಯೋಜನೆ, ರಾಮನಗರದ ಬಳಿ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆಗಳನ್ನು ಅಂದಾಜು 2 ಸಾವಿರ ಕೋಟಿ ರು. ಮೊತ್ತದಲ್ಲಿ 2024-25ನೇ ಸಾಲಿನಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿತ್ತು.ಇದರಲ್ಲಿ 108 ಕೋಟಿ ರು.ವೆಚ್ಚದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆ ಮತ್ತು 156 ಕೋಟಿ ರು.ವೆಚ್ಚದ ರಾಮನಗರದ ಬಳಿ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಅನುದಾನ ಬಿಡುಗಡೆಗೆ ಅನುಮೋದನೆ ದೊರಕಿದೆ.
ಕಳೆದ ಬಜೆಟ್‌ನಲ್ಲಿ ಚನ್ನಪಟ್ಟಣ- ಬೈರಾಪಟ್ಟಣ ಮಾರ್ಗ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 6 ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣವನ್ನು 350 ಕೋಟಿ ರು. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿತ್ತು. ಕಳೆದ 15 - 20 ದಿನಗಳ ಹಿಂದಷ್ಟೇ ಚನ್ನಪಟ್ಟಣ - ಬೈರಾಪಟ್ಟಣ ಮಾರ್ಗದಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.ಇಷ್ಟೇ ಅಲ್ಲದೆ, ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ಯೋಜನಾ ವಿಭಾಗವನ್ನು ಹಾಗೂ 2 ಉಪವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು, ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಅದರಂತೆ ಮುಳುಗಡೆಯಾಗುವ ಭೂಮಿ ಸರ್ವೆ ಮತ್ತು ಮರಗಳ ಎಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
6ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣ.