ಕನ್ನಡಪ್ರಭ ವಾರ್ತೆ ಮಂಗಳೂರುದೇಶದ ರಾಷ್ಟ್ರೀಕೃತ, ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಅತಿ ಶೀಘ್ರ ಭರ್ತಿ ಮಾಡಬೇಕು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಆಗ್ರಹಿಸಿದ್ದಾರೆ.ಮಂಗಳೂರಿಗೆ ಭಾನುವಾರ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೌಕರರ ಕೊರತೆಯಿಂದ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಆಗುವುದರೊಂದಿಗೆ ಗ್ರಾಹಕರಿಗೂ, ಅಭಿವೃದ್ಧಿಗೂ ಸಮಸ್ಯೆಯಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವಾಗ ಹುದ್ದೆ ಭರ್ತಿ ಮಾಡಿ ಜನರಿಗೆ ಉದ್ಯೋಗ ಒದಗಿಸಬೇಕು. ಇಲ್ಲದಿದ್ದರೆ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಸೇವಾ ಶುಲ್ಕ ಹೆಚ್ಚಳ:
ಹಿಂದೆ ಬ್ಯಾಂಕ್‌ಗಳ ಸೇವಾ ಶುಲ್ಕಗಳು ಉಚಿತವಾಗಿತ್ತು. ಈಗ ಭಾರೀ ಏರಿಕೆ ಮಾಡಲಾಗಿದ್ದು, ಬಡವರಿಗೆ ಹೊರೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ಪಡೆದ ಸಾಲ ಹಿಂತಿರುಗಿಸದೆ ಬ್ಯಾಂಕ್‌ಗಳ ಆದಾಯ ಕಡಿಮೆ ಆಗಿದೆ. ಅದಕ್ಕಾಗಿ ಸೇವಾ ಶುಲ್ಕ ಏರಿಸಲಾಗಿದೆ ಎಂದು ಹೇಳಿದ ವೆಂಕಟಾಚಲಂ, ಮೊದಲು ದೊಡ್ಡ ಸಂಸ್ಥೆಗಳ ಸಾಲ ವಸೂಲಿ ಮಾಡಬೇಕು, ಸಾಲ ಮರುಪಾವತಿ ಮಾಡುವಷ್ಟು ಹಣ ಅವರಲ್ಲಿದೆ. ಈಗಲೂ ದೇಶ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದರು.4 ಲಕ್ಷ ಕೋಟಿ ರು. ಸಾಲ ಬಾಕಿ:
ಈ ಎಲ್ಲ ವಿಚಾರಗಳನ್ನು ಒಳಗೊಂಡಂಥ ಜನಸ್ನೇಹಿ ಬ್ಯಾಂಕಿಂಗ್ ಪಾಲಿಸಿ ಜಾರಿ ಮಾಡುವಂತೆ ಆಗ್ರಹಿಸಿ ಚಳಿಗಾಲದ ಸಂಸತ್ ಅಧಿವೇಶನದ ವೇಳೆ ರಾಷ್ಟ್ರ ಮಟ್ಟದ ಅಭಿಯಾನ ಕೈಗೊಳ್ಳಲಾಗುವುದು. ಈ ಕುರಿತು ಮುಂದಿನ ತಿಂಗಳಲ್ಲೇ ಸಭೆ ಕರೆಯಲಾಗಿದ್ದು, ರೂಪುರೇಷೆ ಹಾಕಿಕೊಳ್ಳಲಿದ್ದೇವೆ ಎಂದರು.
ಕೆಪಿಬಿಇಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯರಾಮ್, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಫಣೀಂದ್ರ, ಪೂರ್ಣಿಮಾ ರಾವ್ ಇದ್ದರು.