ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ- ಕೇರಳ- ಗೋವಾ ರಾಜ್ಯಗಳಲ್ಲಿ ಹಂಚಿಹೋಗಿರುವ ಕುಡುಬಿ ಸಮಾಜವನ್ನು ಪ್ರತಿನಿಧಿಸುವ ಮುಖಂಡರು ಮಂಗಳೂರು ವಿಶ್ವ ಕೊಂಕಣಿ ಕೇಂದ್ರದಲ್ಲಿ ಚಿಂತನ ಸಭೆಯನ್ನು ನಡೆಸಿ ತಮ್ಮ ಸಮುದಾಯದ ಭಾಷಾ- ಸಾಮಾಜಿಕ- ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಬಗ್ಗೆ ಚಿಂತನೆ ನಡೆಸಿದರು.ಮೂರು ರಾಜ್ಯಗಳ ಮಧ್ಯೆ ಜನಪದೀಯ ಸಮಾನತೆ ಇದ್ದರೂ ಸರ್ಕಾರಿ ಸೌಲಭ್ಯ, ಮೀಸಲಾತಿ ಸೌಲಭ್ಯದಲ್ಲಿ ಅಗಾಧ ವ್ಯತ್ಯಾಸವಿದೆ. ಗೋವಾ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಸೌಲಭ್ಯ ಕರ್ನಾಟಕದ ಕುಡುಬಿ ಜಾತಿಗೆ ದೊರೆಯುತ್ತಿಲ್ಲ. ಕೆಲವು ಪ್ರದೇಶದಲ್ಲಿ ಕೊಂಕಣಿ ಭಾಷೆಯ ಉಪಯೋಗ ಕ್ಷೀಣಿಸುತ್ತಿದೆ. ಕುಡುಬಿ ಯುವ ಜನರಿಗೆ ಉದ್ಯೋಗ, ಕೌಶಲ್ಯ ತರಬೇತಿ, ವಿದ್ಯಾರ್ಥಿ ವೇತನ ಸೌಲಭ್ಯ ತುಂಬ ಅಗತ್ಯವಿದೆ. ಈ ಬಗ್ಗೆ ಸತತ ಪ್ರಯತ್ನಕ್ಕಾಗಿ ಮುಂದಿನ ಅಖಿಲ ಭಾರತ ಮಟ್ಟದ ಸಮಾವೇಶವನ್ನು ಬರುವ ನವೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು.ಈ ಸಂದರ್ಭ ಕೊಂಪದವಿನ ಸೆಸು ಗೌಡ ಕುಡುಬಿ ಜಾನಪದ ಕಲಾ ಟ್ರಸ್ಟ್ ಹಾಗೂ ಎಡಪದವಿನ ಕುಡುಬಿ ಜಾನಪದ ಕಲಾವೇದಿಕೆಯಿಂದ ಗುಮಟಾ ನಾಚ್, ತೊಣಿಯಾ ನಾಚ್, ದೊರಿಯಾ ನಾಚ್ ಜಾನಪದ ನಾಟ್ಯ ಪ್ರದರ್ಶನ ಗಮನ ಸೆಳೆಯಿತು.ಗೋವಾದಿಂದ ರಾಮನಾಥ ಗಾವಡೆ, ದೇವಿದಾಸ ಗಾಂವಕರ, ಕೇರಳದಿಂದ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ನವೀನ ಕುಮಾರ್ ಹಾಗೂ ಶರತ್ ಕುಮಾರ ಕುಡುಬಿ, ಬಜ್ಪೆ ಕುಡುಬಿ ಸಮಾಜದ ಮೋಹನ ಗೌಡ, ಮೋನಪ್ಪಗೌಡ, ಸುದರ್ಶನ, ಕೃಷ್ಣ ಕೊಂಪದವು, ಉಡುಪಿಯ ಪ್ರಭಾಕರ ನಾಯ್ಕ, ನಾರಾಯಣ ನಾಯ್ಕ ವಿಚಾರ ಮಂಡನೆ ಮಾಡಿದರು.ನ್ಯಾಯವಾದಿ ವಿಜಯ ಗೌಡ ಚರ್ಚಾ ಕೂಟದ ಸಮನ್ವಯ ನಡೆಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶೇಖರ ಗೌಡ ವಂದಿಸಿದರು.ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜ, ರಮೇಶ ನಾಯ್ಕ, ಕಾರ್ಯದರ್ಶಿ ಕಸ್ತೂರಿ ಮೋಹನ ಪೈ, ಕೋಶಾಧಿಕಾರಿ ಬಿಆರ್ ಭಟ್, ಹಾಗೂ ಸಿಎಒ ಡಾ.ಬಿ. ದೇವದಾಸ ಪೈ ಇದ್ದರು.