ಮಕ್ಕಳು ಕ್ರಿಯಾಶೀಲರಾಗಲು ಸ್ಕೌಟ್ಸ್, ಗೈಡ್ಸ್ ಮಹತ್ತರ ಕೆಲಸ: ಕೆ.ಸಿ. ಗೀತಾ ಅಭಿಪ್ರಾಯ

KannadaprabhaNewsNetwork |  
Published : Jul 13, 2025, 01:18 AM IST
12ಎಚ್ಎಸ್ಎನ್17 :  | Kannada Prabha

ಸಾರಾಂಶ

ಮೋಗ್ಲಿಯ ಸಾಹಸಗಾಥೆಯ ಜೀವನವನ್ನು ಎದುರಿಸುವ ಶಕ್ತಿಯನ್ನು, ಪ್ರಕೃತಿಗೆ ಹೊಂದಿಕೊಳ್ಳುವ ಶಕ್ತಿಯನ್ನು, ಪ್ರಾಣಿ ಪ್ರಿಯತೆಯನ್ನು ಬೆಳೆಸಿಕೊಳ್ಳುವುದನ್ನು ಕಲಿಸುವುದರ ಜೊತೆಗೆ ಮನೋಸ್ಥೈರ್ಯ, ಆತ್ಮವಿಶ್ವಾಸ ಹಾಗೂ ದೃಢತೆಯನ್ನು ಹೆಚ್ಚಿಸುತ್ತದೆ.

ಕನ್ನಡಪ್ರಭವಾರ್ತೆ, ಆಲೂರು

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುತ್ತದೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ವುಡ್ ಬ್ಯಾಡ್ಜ್ ಫ್ಲಾಕ್ ಲೀಡರ್ ಕೆ.ಸಿ. ಗೀತಾ ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ಸ್ಥಳೀಯ ಸಂಸ್ಥೆ ಆಲೂರು ಸಹಯೋಗದಲ್ಲಿ ಭೈರಾಪುರದ ಎಸ್. ವಿ. ಪಬ್ಲಿಕ್ ಶಾಲೆಯಲ್ಲಿ ಕಬ್ಸ್ ಮತ್ತು ಬುಲ್‌ಬುಲ್ಸ್ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಹಂತದ ಚತುರ್ಥ ಚರಣ್ ಹಾಗೂ ಹೀರಕ್ ಪಂಕ್ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.

ಗಿಡವಾಗಿ ಬಗ್ಗದ್ದು ಮರವಾದಾಗ ಬಗ್ಗುವುದಿಲ್ಲ, ದೇಶ ಅಭ್ಯೂದಯವಾಗಬೇಕಾದರೆ ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ತುಂಬಬೇಕು. ಮಾನವೀಯ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಈ ಮಹತ್ತರ ಕೆಲಸ ಮಾಡುತ್ತದೆ. ಇಲ್ಲಿನ ಕಲಿಕೆ, ಮನೋರಂಜನೆಯ ಆಟಗಳು, ಪ್ರಾಣಿ, ಪ್ರಕೃತಿ ಪ್ರಿಯ ಚಟವಟಿಕೆಗಳು ಮಕ್ಕಳನ್ನು ಅತ್ಯಂತ ಕ್ರಿಯಾಶೀಲವಾಗಿಡುತ್ತವೆ. ದೇಶದ ಭವಿಷ್ಯವಾದ ಇಂದಿನ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ನಿರ್ಮಾಣ ಮಾಡುವುದೇ ಈ ಚಳವಳಿಯ ಘನ ಉದ್ದೇಶವಾಗಿದೆ ಎಂದರು.

ಮತ್ತೋರ್ವ ಜಿಲ್ಲಾ ಸಂಪನ್ಮೂಲ ವ್ಯಕ್ತಿ ದೇವರಾಜ್ ಕಬ್ಸ್ ಮಕ್ಕಳಿಗೆ ಮೋಗ್ಲಿ ಕಥೆ ಪರಿಚಯಿಸುತ್ತಾ, ಮೋಗ್ಲಿಯ ಸಾಹಸಗಾಥೆಯ ಜೀವನವನ್ನು ಎದುರಿಸುವ ಶಕ್ತಿಯನ್ನು, ಪ್ರಕೃತಿಗೆ ಹೊಂದಿಕೊಳ್ಳುವ ಶಕ್ತಿಯನ್ನು, ಪ್ರಾಣಿ ಪ್ರಿಯತೆಯನ್ನು ಬೆಳೆಸಿಕೊಳ್ಳುವುದನ್ನು ಕಲಿಸುವುದರ ಜೊತೆಗೆ ಮನೋಸ್ಥೈರ್ಯ, ಆತ್ಮವಿಶ್ವಾಸ ಹಾಗೂ ದೃಢತೆಯನ್ನು ಹೆಚ್ಚಿಸುತ್ತದೆ. ವನಭೇಟಿ ಅಥವಾ ಹೊರಸಂಚಾರಕ್ಕೆ ತೆರಳಬೇಕಾದರೆ ಅದಕ್ಕೆ ತಕ್ಕಂತಹ ಸಿದ್ಧತೆಗಳನ್ನು ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ವನವಿದ್ಯಾ ಸಂಕೇತಗಳು ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಪ್ರಕೃತಿಯಲ್ಲಿನ ವೈವಿಧ್ಯಮಯ ಕಲಿಕೆಯ ಪ್ರಮುಖ ಅಂಶಗಳ ಮೇಲೆ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.

ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್. ಎಂ. ಪ್ರಿಯಾಂಕ, ಪರೀಕ್ಷಾ ಶಿಬಿರದ ಮಹತ್ವದ ಬಗ್ಗೆ ವಿವರಿಸಿದರು, ಜಿಲ್ಲಾ ಸ್ಕೌಟ್ ಆಯುಕ್ತ ಸ್ಟೀಫನ್ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಎಸ್.ವಿ. ಪಬ್ಲಿಕ್ ಶಾಲಾ ಕಾರ್ಯದರ್ಶಿ ಬಿ.ಜಿ.ಗಿರೀಶ್ ಉದ್ಘಾಟಿಸಿ ಮಾತನಾಡಿದರು, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತಿಮ್ಮೇಗೌಡ, ಶಾಲಾ ಮುಖ್ಯ ಶಿಕ್ಷಕಿ ನಳಿನಾ ಗಿರೀಶ್ ಸೇರಿ ಹಲವರು ಮಾತನಾಡಿದರು.

ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ಶಾಲಾ ಆಡಳಿತಾಧಿಕಾರಿ ಸುನೀಲ್, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಕೆ.ಸಿ. ಗೀತಾ, ದೇವರಾಜ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದೇವೇಂದ್ರ, ಜಿಲ್ಲಾ ಸಹಾಯಕ ಆಯುಕ್ತೆ ಪ್ರೇಮಾ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಸ್. ಪಬ್ಲಿಕ್ ಶಾಲೆಯ ಸ್ಕೌಟ್ ಗೈಡ್ ಶಿಕ್ಷಕರಾದ ಕಬ್ ಮಾಸ್ಟರ್ ದೇವರಾಜ್, ಸತೀಶ್, ಪೃಥ್ವಿನಿ, ಸುಮಿತ್ರ, ಹರ್ಷಿತಾ, ನವ್ಯಶ್ರೀ, ರಂಜಿತಾ; ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ರಾಮಚಂದ್ರ; ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾನಿಯಾ, ರೇಣುಕಾ ಹಾಗೂ ಅಶ್ವಿನಿ ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಎಸ್.ವಿ.ಪಬ್ಲಿಕ್ ಶಾಲೆ ಭೈರಾಪುರ, ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ಆಲೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭೈರಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳೂರು ಮಕ್ಕಳು ಭಾಗವಹಿಸಿದ್ದರು. ಗೈಡ್ ಕ್ಯಾಪ್ಟನ್ ಹರ್ಷಿತಾ ಸ್ವಾಗತಿಸಿದರು, ಸ್ಕೌಟ್ ಮಾಸ್ಟರ್ ಸತೀಶ್ ನಿರೂಪಿಸಿದರು, ಗೈಡ್ ಕ್ಯಾಪ್ಟನ್ ನವ್ಯಶ್ರೀ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ