ಕನ್ನಡಪ್ರಭ ವಾರ್ತೆ ಸೊರಬ
ಪ್ರತಿಭೆಗೆ ಪುರಸ್ಕಾರದ ಜತೆಗೆ ಸಹಕಾರ ದೊರೆತರೆ ರಾಷ್ಟ್ರಮಟ್ಟದಲ್ಲಿ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಯಾವುದೇ ಕ್ರೀಡೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಅವಶ್ಯಕತೆ ಇದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ತಾಲೂಕು ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.ಶನಿವಾರ ಪಟ್ಟಣದ ಪ್ರವಾಸಿ ಮಂದಿರಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ತಾಲೂಕು ಘಟಕ ಮತ್ತು ಶ್ರೀ ಗಣಾಧೀಶ್ವರ ಡ್ರೈವಿಂಗ್ ಸ್ಕೂಲ್ ವತಿಯಿಂದ ಅಂತಾರಾಷ್ಟ್ರೀಯ ಹಾಕಿ ಪಟು ಸುನಿಲ್ ಹಾಗೂ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೋಮೇಶಪ್ಪ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಾವು ನಮ್ಮದು ಎನ್ನುವ ಸ್ವಾರ್ಥವನ್ನು ತೊರೆದು ಸಮಾಜಕ್ಕಾಗಿ ನಾವೇನು ಮಾಡುತ್ತೇವೆ ಎನ್ನುವುದನ್ನು ಮೊದಲು ಮನನ ಮಾಡಿಕೊಂಡಾಗ ಮನುಷ್ಯ ಜನ್ಮಕ್ಕೆ ಅರ್ಥ ಮೂಡುತ್ತದೆ. ಜಾತಿ, ಧರ್ಮ ಎಲ್ಲವೂ ಒಂದೇ ಎನ್ನುವ ಸತ್ವವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಸಮಾಜದ ಏಳ್ಗೆ ಸಾಧ್ಯವಾಗುತ್ತದೆ ಎಂದ ಅವರು ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕಿನ ತಲ್ಲೂರು ಗ್ರಾಮದ ಗ್ರಾಮೀಣ ಪ್ರತಿಭೆ ಜರ್ಮನ್ ದೇಶದ ಬರ್ಲಿನ್‌ನಲ್ಲಿ ನಡೆದ ಕಿರಿಯರ ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಪಿ.ಬಿ.ಸುನಿಲ್ ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ರಾಷ್ಟ್ರಮಟ್ಟದ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಕರ್ನಾಟಕ ಭೂಷಣ ಪ್ರಶಸ್ತಿಗೆ ಭಾಜನರಾದ ಹೋಮೇಶಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ.ನಾಯ್ಕ, ಜಿಲ್ಲಾಧ್ಯಕ್ಷೆ ರೇಣುಕಾ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಾ, ರಾಜ್ಯ ಸಹಕಾರ್ಯದರ್ಶಿ ನಾಗರಾಜ ಕೈಸೋಡಿ, ಜಗದೀಶ ಕೊಡಕಣಿ, ನಿರ್ದೇಶಕರಾದ ಜಗದೀಶ ಕೊಡಕಣಿ, ಗುರುಮೂರ್ತಿ ಓಟೂರು, ಪಕ್ಕೀರಪ್ಪ, ಅನಸೂಯ, ಶಾಂತಾ, ಸುಮಂಗಲ, ರೇಖಾ, ಯಶೋಧಾ, ಜಯಮ್ಮ, ಶಿಕ್ಷಕ ಹಾಲೇಶ್ ನವುಲೆ, ಜನಾರ್ಧನ ಅಯ್ಯಂಗಾರ್ ಬೇಕರಿ ಮಾಲೀಕ ಪ್ರಸನ್ನಕುಮಾರ್, ವಿನೋದ್ ವಾಲ್ಮೀಕಿ ಸೇರಿದಂತೆ ಮೊದಲಾದವರು ಹಾಜರಿದ್ದರು.------
ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಎನ್ನುವ ಆಟ ಗ್ರಾಮೀಣ ಪ್ರದೇಶದ ಯುವಕರಿಗೆ ಗೊತ್ತೆ ಇಲ್ಲ. ಬಡತನದಲ್ಲಿ ಹಾಗೂ ತಲ್ಲೂರು ಎನ್ನುವ ಕುಗ್ರಾದಲ್ಲಿ ಬೆಳೆದ ನನಗೆ ಚಿಕ್ಕಂದಿನಿಂದಲೂ ಆಸಕ್ತಿ ಬೆಳೆಯಿತು. ಹಾಕಿ ಸ್ಟಿಕ್ ಖರೀದಿಸಲು ೧೦ ಸಾವಿರ ರು. ಇಲ್ಲದ ಸಂದರ್ಭದಲ್ಲಿ ನನ್ನ ಆಸಕ್ತಿ ಮತ್ತು ಕ್ರೀಡಾ ಪ್ರೀತಿಗೆ ನೀರೆರೆದವರು ಕೋಚ್ ಮತ್ತು ಪೋಷಕರು ಹಾಗೂ ನನ್ನ ಸಹೋದರ. ಹಾಗಾಗಿ ಹಾಕಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಅವರ ಸಹಕಾರವನ್ನು ಎಂದಿಗೂ ಮರೆಯಲಾಗದು- ಪಿ.ಬಿ. ಸುನಿಲ್ ತಲ್ಲೂರು, ಹಾಕಿ ರಾಷ್ಟ್ರೀಯ ಪಟು