ಕನ್ನಡಪ್ರಭ ವಾರ್ತೆ ಹಾಸನ
ಯುವ ಸಮುದಾಯವು ಕೇವಲ ಉದ್ಯೋಗ ಪಡೆಯುವ ಕನಸು ಕಾಣದೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕನಸು ಕಾಣಬೇಕು ಎಂದು ಪುಷ್ಕರಣಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಎನ್. ವಿಶ್ವನಾಥ್ ಅಭಿಪ್ರಾಯಪಟ್ಟರು.ನಗರದ ಪುಷ್ಕರಣಿ ತರಬೇತಿ ಸಂಸ್ಥೆ ಆವರಣದಲ್ಲಿ ಲಘು ಉದ್ಯೋಗ ಭಾರತಿ ಹಾಸನ ಘಟಕ ಹಾಗೂ ರೋಟರಿ ಮಿಡ್‌ಟೌನ್ ಹಾಸನ ವತಿಯಿಂದ ಬುಧವಾರ ನಡೆದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ, ಅತೀ ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ದುಡಿಯುವ ಕೈಗಳಿಗೆ ಕೆಲಸ ದೊರಕುವ ಜೊತೆಗೆ ದೇಶದ ಆರ್ಥಿಕ ಪ್ರಗತಿಗೂ ವೇಗ ಸಿಗಲು ಸಾಧ್ಯ. ಇಂದು ಎಲ್ಲ ಕಡೆ ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಇದರ ಸದ್ಬಳಕೆ ಮಾಡಿಕೊಂಡು ಸಣ್ಣ ಉದ್ಯೋಗಗಳ ಸ್ಥಾಪನೆಗೆ ಪ್ರಯತ್ನ ನಡೆದಿವೆ. ಇದಕ್ಕಾಗಿ ಸರ್ಕಾರ ಸಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ನಿಯಮಗಳು ಸರಳೀಕರಣಗೊಳಿಸಿದೆ. ಯುವ ಪೀಳಿಗೆ ಈ ರೀತಿಯಾಗಿ ಸಣ್ಣ ಉದ್ಯಮ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿ, ಇನ್ನೊಬ್ಬರಿಗೆ ಉದ್ಯೋಗ ನೀಡುವ ಕನಸು ಕಾಣಬೇಕು ಎಂದು ಹೇಳಿದರು.
ಲಘು ಉದ್ಯೋಗ ಭಾರತಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಯಾಜಿ ಮಾತನಾಡಿ, ಪ್ರತಿಯೊಬ್ಬರೂ ಸಣ್ಣ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರಯತ್ನಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭವನ್ನು ಅರ್ಹರು ಪಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.ಸಂಸ್ಥೆಯು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪರಸ್ಪರ ಸಹಾಯ ಮಾಡಲು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ನೀಡುತ್ತದೆ, ಇದು ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಒಂದು ಪಾತ್ರವನ್ನು ವಹಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ. ಲಘು ಉದ್ಯೋಗ ಭಾರತಿಯು ಕೈಗಾರಿಕೆಗಳ ಸುಧಾರಣೆಗಾಗಿ ಹಲವಾರು ಕೆಲಸ ಮಾಡುತ್ತದೆ ಮತ್ತು ಮಾಲೀಕರು, ನಿರ್ವಹಣೆ, ಕೆಲಸಗಾರರು, ಗ್ರಾಹಕರು, ಪೂರೈಕೆದಾರರ, ಹಣಕಾಸುದಾರರು ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳ ನಡುವೆ ಆರೋಗ್ಯಕರ ಸಂಬಂಧವನ್ನು ಇರಿಸಿಕೊಳ್ಳಲು ತನ್ನ ಸದಸ್ಯರನ್ನು ಪ್ರೇರೇಪಿಸುತ್ತದೆ. ಜಿಲ್ಲೆಯಲ್ಲಿ ಸಂಸ್ಥೆ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿ ಸಂಸ್ಥೆಯ ಜಿಲ್ಲಾಧ್ಯಕ್ಷ ಶಿವನಂದ ಪಿ.ಆರ್., ಸಾಹಿತಿ ಡಾ.ಬಾ.ನಂ ಲೋಕೇಶ್, ಕೆ.ವಿ ಪ್ರಸನ್ನ, ಮದನ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.