ಫೆ. 12ರಂದು ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಮುಷ್ಕರ

KannadaprabhaNewsNetwork |  
Published : Feb 10, 2026, 01:15 AM IST
೯ಕೆಎಲ್‌ಆರ್-೨ಕೋಲಾರದ ಪತ್ರಕರ್ತರ ಭವನದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ದ್ರೋಹ ಬಗೆದಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ನರೇಗಾ ಯೋಜನೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು ಎಲ್ಲಾ ದುಡಿಯುವ ವರ್ಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮನವಿ ಮಾಡಿದರು.ನಗರದ ಪತ್ರಕರ್ತರ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಸಂಯುಕ್ತ ಹೋರಾಟ ಕರ್ನಾಟಕದಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಕಾರ್ಮಿಕ ವಿರೋಧಿಯಾಗಿರುವ ಈ ಕರಡು ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ದೇಶಾದ್ಯಂತ ಕಾರ್ಮಿಕರ ಕಾಯ್ದೆಗಳು ದುಡಿಯುವ ವರ್ಗಕ್ಕೆ ವಿರುದ್ಧವಾಗಿದೆ. ದೇಶದ ಸಂಪತ್ತಿನ ಸಂರಕ್ಷಣೆ, ದುಡಿಯುವ ಜನರ ಹಕ್ಕುಗಳ ರಕ್ಷಣೆ ಮತ್ತು ಮಾನವ ವಿರೋಧಿ ನೀತಿಗಳ ವಿರುದ್ಧ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಈ ಮುಷ್ಕರವನ್ನು ಉತ್ಪಾದನೆ ಸೇವೆ ಸ್ಥಗಿತಗೊಳಿಸುವ ಮೂಲಕ ಕಾರ್ಮಿಕರು, ರೈತರು, ಯುವ ಸಮುದಾಯ ಮಹಿಳಾ ಸಂಘಟನೆಗಳು, ವಿಧ್ಯಾರ್ಥಿಗಳು ಹಾಗೂ ಎಲ್ಲಾ ದುಡಿಯುವ ವರ್ಗದ ಜನ ತಮ್ಮ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟದ ಪರವಾಗಿ ಮನವಿ ಮಾಡಿದರು.ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರದ ಕಾರ್ಮಿಕರ ನೀತಿಗಳಿಂದ ನೇರವಾದ ಹೊಡೆತ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀಳಲಿದೆ. ಸರ್ಕಾರ ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಬಂಡವಾಳಶಾಹಿಗಳ ಹಿತ ಮುಖ್ಯವಾಗಿದೆ. ಈ ಮಸೂದೆಗಳು ವಾಪಸು ಪಡೆಯಲು ನಡೆಯಲಿರುವ ಮುಷ್ಕರವು ಕೋಲಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಾಗೂ ಸ್ಥಳೀಯ ಕೈಗಾರಿಕೆಗಳಲ್ಲಿ ನಡೆಯಲಿದೆ. ನಗರದಲ್ಲಿ ಗಾಂಧಿವನದಿಂದ ಬೃಹತ್ ಮೆರವಣಿಗೆ ನಡೆದು ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿ.ನಾರಾಯಣರೆಡ್ಡಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಹಳ್ಳಿ ರಮೇಶ್, ಸಿಐಟಿಯು ಸಹ ಕಾರ್ಯದರ್ಶಿ ಹರೀಶ್‌, ಕೇಶವರಾವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಔಷಧಿ ಪೂರೈಸದಷ್ಟು ಸರ್ಕಾರ ದಿವಾಳಿಯೇ ? ಸಿಟಿ ರವಿ ಪ್ರಶ್ನೆ
ಮಾದಕ ವಸ್ತುಗಳ ಸೇವನೆ ಬದುಕಿನ ವಿನಾಶಕ್ಕೆ ಮುನ್ನುಡಿ: ಡಾ.ಸುಹಾಸ್