13ರಿಂದ ಮಾಹೆಯಲ್ಲಿ ಅಖಿಲ ಭಾರತ ವಿವಿ ಮಹಿಳಾ ಟೆನ್ನಿಸ್ ಟೂರ್ನಿ

KannadaprabhaNewsNetwork | Published : Dec 5, 2024 12:34 AM

ಸಾರಾಂಶ

ಡಿ. 13ರಿಂದ 16ರ ವರೆಗೆ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಟೆನ್ನಿಸ್‌ ಟೂರ್ನಮೆಂಟ್‌ ಆಯೋಜಿಸಲಾಗಿದೆ. 200 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಾಹೆ ಮಣಿಪಾಲವು ಡಿ.7ರಿಂದ 10ರ ವರೆಗೆ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಟೆನ್ನಿಸ್‌ ಮತ್ತು ಡಿ. 13ರಿಂದ 16ರ ವರೆಗೆ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಟೆನ್ನಿಸ್‌ ಟೂರ್ನಮೆಂಟನ್ನು ಆಯೋಜಿಸುತ್ತಿದೆ.

ಈ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ. ಎಚ್‌.ಎಸ್‌.ಬಲ್ಲಾಳ್‌ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಕ್ಷಿಣ ವಲಯದ ಅಂತರ ವಿವಿ ಮಹಿಳಾ ಟೆನ್ನಿಸ್‌ ಟೂರ್ನಿಯಲ್ಲಿ ಅತಿಥೇಯ ಮಾಹೆಯೂ ಸೇರಿದಂತೆ 38 ವಿವಿಗಳ 200ಕ್ಕೂ ಹೆಚ್ಚು ಆಟಗಾರರು, ಅವರ ತರಬೇತುದಾರರು ಮತ್ತು ವ್ಯವಸ್ಥಾಪಕರು ಭಾಗವಹಿಸಲಿದ್ದಾರೆ.

ಈಗಾಗಲೇ ಇತರ 3 ವಲಯಗಳ ಅಂತರ ವಿವಿ ಟೂರ್ನಿಗಳು ಪೂರ್ಣಗೊಂಡಿದ್ದು, ಅವುಗಳಲ್ಲಿ ಗೆದ್ದ ಮತ್ತು ಮಣಿಪಾಲದಲ್ಲಿ ದಕ್ಷಿಣ ವಲಯ ಟೂರ್ನಿಯಲ್ಲಿ ಗೆದ್ದ ತಲಾ 4 ತಂಡಗಳು ಅಖಿಲ ಭಾರತ ಅಂತರ ವಲಯ ಅಂತರ ವಿವಿ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತವೆ. ಈ ಟೂರ್ನಿಯಲ್ಲಿ ಒಟ್ಟು 16 ವಿವಿಗಳು ಭಾಗವಹಿಸಲಿದ್ದು, ಒಟ್ಟು 100 ಆಟಗಾರರು, ತರಬೇತುದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಣಿಪಾಲದಲ್ಲಿ ಮಾಹೆ, ಕೆಎಂಸಿ ಮತ್ತು ಎಂಐಟಿಯ ಒಟ್ಟು6 ಸಿಂಥೆಟಿಕ್ ಕೋರ್ಟುಗಳಲ್ಲಿ ಈ ಟೂರ್ನಿ ನಡೆಯಲಿದ್ದು, ತಡರಾತ್ರಿವರೆಗೂ ಆಟವಾಡುವುದಕ್ಕೆ ಅಗತ್ಯ ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಾಹೆಯ ಉಪಕುಲಾಧಿಪತಿ ಡಾ.ಎಂ.ಡಿ.ವೆಂಕಟೇಶ್‌, 2036ರಲ್ಲಿ ಭಾರತವು ಓಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿಕೊಳ್ಳಲು ಪ್ರಧಾನಿ ಮೋದಿ ಅವರು ಯೋಜಿಸಿದ್ದಾರೆ. ಅದಕ್ಕೆ ಪೂರಕವಾಗಿ ಉದಯೋನ್ಮುಖ ಆಟಗಾರರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮಾಹೆ ಇಂತಹ ಟೂರ್ನಿಗಳನ್ನು ಆಯೋಜಿಸುತ್ತಿದೆ ಎಂದರು.

ಮಾಹೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯಗಳು ಲಭ್ಯ ಇವೆ. ಈ ಟೂರ್ನಿಯಲ್ಲಿ ದೇಶದ 10 ಪ್ರಮುಖ ಅಂತರ ವಿವಿ ಟೆನ್ನಿಸ್‌ ಆಟಗಾರ್ತಿಯರು ಭಾಗವಹಿಸಲಿದ್ದು, ಉಡುಪಿ ಮತ್ತು ಸುತ್ತಮುತ್ತಲಿನ ಶಾಲಾ ಕಾಲೇಜು ಮಕ್ಕಳಿಗೆ ರಾಷ್ಟ್ರೀಯ ಮಟ್ಟದ ಈ ಟೂರ್ನಿಯು ಅತ್ಯಾಕರ್ಷಕ ವೀಕ್ಷಣೆಯಾಗಲಿದೆ. ಈ ಮೂಲಕ ಇಲ್ಲಿಯೂ ಟೆನ್ನಿಸ್‌ ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಹೆಯ ಸಹಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ಶರತ್‌ ರಾವ್, ಕುಲಸಚಿವ ಡಾ.ಪಿ.ಗಿರಿಧರ ಕಿಣಿ, ಸಿಓಓ ಡಾ.ರವಿರಾಜ ಎನ್.ಸೀತಾರಾಮನ್, ಮಾಹೆಯ ಕ್ರೀಡಾ ಕಾರ್ಯದರ್ಶಿ ವಿನೋದ್ ನಾಯಕ್ ಉಪಸ್ಥಿತರಿದ್ದರು.

Share this article