ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಾದ ಕೆ.ಎಚ್. ರಾಮಯ್ಯ ಕೇವಲ ಒಕ್ಕಲಿಗರಿಗೆ ಸೀಮಿತರಾಗಿಲ್ಲ. ಹಿಂದುಳಿದ ವರ್ಗದ ಏಳಿಗೆಗೂ ಶ್ರಮಿಸಿದವರು ಎಂದು ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಘಟಕವು ಬುಧವಾರ ಆಯೋಜಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ಕೆ.ಎಚ್. ರಾಮಯ್ಯ ಜಯಂತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಮಯ್ಯ ಅವರು ಸಮಾಜದ ಅಭಿವೃದ್ಧಿಗೆ ಸಹಕಾರ ಇಲಾಖೆ ತೆರೆಯಲು ಕಾರಣರಾಗಿದ್ದಾರೆ. ಅವರು ಒಕ್ಕಲಿಗರ ಸಂಘ ಸ್ಥಾಪಿಸಿದಾಗ ನಮ್ಮ ರಾಜ್ಯದ ಅಂದಿನ ಬಜೆಟ್ ನಷ್ಟು ಹಣವನ್ನು ಸಂಘದಲ್ಲಿ ಇಟ್ಟು ದಾಖಲೆ ಬರೆದಿದ್ದಾರೆ. ಪ್ರತಿಯೊಬ್ಬರೂ ಇಂತಹ ಮಹನೀಯರ ಬಗ್ಗೆ ಓದಿ ತಿಳಿಯಬೇಕು. ಜೀವನದಲ್ಲಿ ಇಂತಹವರ ಹೆಸರಿನಲ್ಲಿ ಸನ್ಮಾನಿಸುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಇಂದು ಚುಂಚನಗಿರಿ ಕ್ಷೇತ್ರ ಬೆಳೆಯಲು ಕೆ.ಎಚ್. ರಾಮಯ್ಯನಂತಹ ಹಿರಿಯ ಜೀವಗಳು ಅಡಿಪಾಯ ಹಾಕಿಕೊಟ್ಟಿದ್ದು, ಅದರೊಂದಿಗೆ ನಾವು ಮುನ್ನಡೆಯಲು ಸಹಕಾರಿಯಾಗಿದೆ. ಮೈಸೂರು ಸಂಸದನಾಗಿ ನನ್ನನ್ನು ಎಲ್ಲರೂ ಪ್ರೀತಿಯಿಂದ ಅವಕಾಶ ಕೊಟ್ಟಿದ್ದಿರಿ. 10 ವರ್ಷದಲ್ಲಿ ಶಕ್ತಿ ಮೀರಿ ಮೈಸೂರಿಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ ಎಂದರು.
ನನಗೆ ಟಿಕೆಟ್ ಸಿಗದಿದ್ದಾಗ ನಿಮ್ಮ ಪ್ರೀತಿ ಮತ್ತಷ್ಟು ಇವನಿಗೆ ಅನ್ಯಾಯ ಆಯಿತು ಎಂದು ವ್ಯಕ್ತವಾಗಿದ್ದು ನೋಡಿದ್ದೇನೆ. ಈ ಪ್ರೀತಿ ಮುಂದಿನ ದಿನಗಳಲ್ಲಿಯೂ ಇರಲಿ. ಮೈಸೂರಿನಲ್ಲೇ ಇರುತ್ತೇನೆ. ಮಲೆನಾಡು ನನ್ನ ಜನ್ಮ ಭೂಮಿಯಾದರೂ ಮೈಸೂರೇ ನನ್ನ ಕರ್ಮಭೂಮಿ. ನನ್ನ ರೂದ್ರಭೂಮಿಯೂ ಮೈಸೂರೇ ಆಗಿದೆ ಎಂದು ಅವರು ಹೇಳಿದರು.ಸ್ಮಾರಕ, ವಸ್ತು ಸಂಗ್ರಹಾಲಯ ಆಗಲಿ
ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜೇಗೌಡ ಮಾತನಾಡಿ, ಕೆ.ಎಚ್. ರಾಮಯ್ಯ ಅವರ ಜೀವನದ ಬಗ್ಗೆ ಸಮಾಜ ಹಾಗೂ ಯುವಕರಿಗೆ ತಿಳಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅವರ ಸಮಾಧಿಯನ್ನು ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿ. ಆ ಮೂಲಕ ಅವರ ಬಗ್ಗೆ ಹೆಚ್ಚು ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಕೆ.ಎಚ್. ರಾಮಯ್ಯ ಸೇವಾರತ್ನ ಪ್ರಶಸ್ತಿ
ಇದೇ ವೇಳೆ ಸಮಾಜಸೇವಕ ಕೆ.ಎನ್. ಧನ್ಯಕುಮಾರ್, ವಿಜಯನಗರ ಐಶ್ವರ್ಯ ಆಸ್ಪತ್ರೆಯ ಡಾ. ಲಕ್ಷ್ಮೇಗೌಡ, ನಟ ಎಸ್. ಜಯಪ್ರಕಾಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಎಚ್. ಪ್ರಕಾಶ್, ಪಂಚವಟಿ ಹೊಟೇಲ್ ಪಾಲುದಾರ ಪಾಂಡುರಂಗ ಸತೀಶ್ ಗೌಡ, ಶ್ರೀ ಲಕ್ಷ್ಮಿ ಚಾರಿಟೆಬಲ್ ಟ್ರಸ್ಟ್ ರಾಜ್ಯಾಧ್ಯಕ್ಷೆ ಶೋಭರಾಣಿ ಗೌಡ, ಪತ್ರಕರ್ತ ಜೆ. ರವಿಚಂದ್ರ ಹಂಚ್ಯಾ ಅವರಿಗೆ ಕೆ.ಎಚ್. ರಾಮಯ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಖಿಕ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ. ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಂಗನಾಥ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ವನಜಾಕ್ಷಿ, ಲಕ್ಷ್ಮಿ, ಮಂಜುಳಾ, ಭಾಗ್ಯಮ್ಮ, ನೇಹಾ, ಕೃಷ್ಣೇಗೌಡ, ಯಶ್ವಂತ್, ಲಿಂಗಪ್ಪ, ನರಸಿಂಹೇಗೌಡ, ಹನುಮಂತಯ್ಯ, ಸಿದ್ದೇಗೌಡ, ರಾಮಣ್ಣ, ದರ್ಶನ್ ಗೌಡ ಮೊದಲಾದವರು ಇದ್ದರು.