ಕನ್ನಡಪ್ರಭ ವಾರ್ತೆ ಬಳ್ಳಾರಿ
ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲ ಪಕ್ಷಗಳು ಹಾಗೂ ನಾಯಕರ ಆಸ್ತಿ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸೇರಿದಂತೆ ಆಯಾ ಪಕ್ಷಗಳ ಘಟಕಗಳ ಹೆಸರಿನಲ್ಲಿರುವ ಆಸ್ತಿಯೂ ತನಿಖೆಯಾಗಬೇಕು. ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರುವುದರಿಂದ ತನಿಖಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಅನಧಿಕೃತ ಆಸ್ತಿ ಪತ್ತೆಯಾದರೆ ಅಂತಹ ವ್ಯಕ್ತಿಗಳು ಚುನಾವಣೆ ಕಣದಿಂದ ಹೊರ ಹಾಕುವ ಕೆಲಸವಾಗಬೇಕು ಎಂದರು.
ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಗೆ ಸೇರಿದ ಆಸ್ತಿಯೇ ದೊಡ್ಡ ಪ್ರಮಾಣದಲ್ಲಿದೆ. ಬಿಜೆಪಿಯಷ್ಟೇ ಅಲ್ಲ; ಆರ್‌ಎಸ್‌ಎಸ್ ಸೇರಿದಂತೆ ಬಿಜೆಪಿ ಬೆಂಬಲಿತ ಸಂಸ್ಥೆಗಳ ಹೆಸರಿನಲ್ಲೂ ದೊಡ್ಡಮಟ್ಟದ ಆಸ್ತಿಯಿದೆ. ಭ್ರಷ್ಟಾಚಾರ ನಿಗ್ರಹ ಮಾಡುವ ಕುರಿತು ಪದೇ ಪದೇ ಮಾತನಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ದೇಶದ ಎಲ್ಲ ರಾಜಕೀಯ ಪಕ್ಷಗಳ ಆಸ್ತಿಯ ತನಿಖೆಗೆ ಆದೇಶಿಸಲಿ. ಆಗ ಎಲ್ಲ ಪಕ್ಷಗಳು ಹಾಗೂ ನಾಯಕರ ಹೂರಣ ಹೊರ ಬರುತ್ತದೆ. ಇಡೀ ದೇಶಕ್ಕೆ ಯಾರ‍್ಯಾರ ಆಸ್ತಿ ಎಷ್ಟೆಷ್ಟಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.ಕೋಮುವಾದ ಮತ್ತು ಭ್ರಷ್ಟಾಚಾರ ಈ ದೇಶದ ದೊಡ್ಡ ಪಿಡುಗಾಗಿದೆ. ಇದರ ನಿಗ್ರಹ ಕೆಲಸ ಮೊದಲಾಗಬೇಕು. ಹೀಗಾಗಿ ಕೇಂದ್ರ ಸರ್ಕಾರವೇ ಆಸ್ತಿ ತನಿಖೆಯ ವಿಚಾರದಲ್ಲಿ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ಅಕ್ರಮ ಆಸ್ತಿ ಮಾಡಿದವರನ್ನು ಚುನಾವಣೆ ಪ್ರಕ್ರಿಯೆಯಿಂದಲೇ ದೂರ ಇಡುವಂತಾಗಬೇಕು. ಆಗ ಮಾತ್ರ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಒಂದಷ್ಟು ಸುಧಾರಣೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಕೋಟಿ ಕೋಟಿ ಹಣಕ್ಕೂ ಕಾಂಗ್ರೆಸ್‌ಗೆ ಸಂಬಂಧವಿಲ್ಲ:ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಭಾರೀ ಪ್ರಮಾಣದ ನಗದು ಹಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಯವರು ವಿನಾಕಾರಣ ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ತಿಂಗಳಷ್ಟೇ ಆಗಿದೆ. ಐದು ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ಯಾವುದೇ ಇಲಾಖೆಯಲ್ಲಿ ದೊಡ್ಡಮಟ್ಟದ ಟೆಂಡರ್‌ಗಳನ್ನು ಕರೆದಿಲ್ಲ. ಈ ಹಿಂದೆ ಬಿಜೆಪಿಯವರು ಮಾಡದ, ಬಿಟ್ಟು ಹೋಗಿದ್ದ ಬಿಲ್‌ಗಳನ್ನು ಕೊಡಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿ ನಾಯಕರು ತಾವು ಮಾಡಿದ ಭ್ರಷ್ಟಾಚಾರ ಮರೆಮಾಚಿಸಲು ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ, ತಮ್ಮ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಉಗ್ರಪ್ಪ ದೂರಿದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದೆವು. ರಾಮಲಿಂಗಂ ಕಂಪನಿಯಿಂದ ಯಡಿಯೂರಪ್ಪ ಅವರ ಕುಟುಂಬಕ್ಕೆ ನೇರವಾಗಿ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವುದನ್ನು ಬಹಿರಂಗ ಪಡೆಸಿದ್ದೆವು. ಈಗ ಕಾಂಗ್ರೆಸ್ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿಯವರು ತಮ್ಮ ಬಳಿ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು.ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.