ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯಕ್ಕಳೆನಿಸಿರುವ ನಗರದ ರಾಜಾಸೀಟು ಸಮೀಪವಿರುವ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ 50ನೇ ವರ್ಷದ ದಸರಾ ಉತ್ಸವ ಆಚರಿಸಲಾಗುತ್ತಿದೆ. ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6ರಿಂದ 10ರ ವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದೇವಾಲಯದ ದಸರಾ ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಆರ್. ರವಿ ಕಾರ್ಯನಿರ್ವಹಿಸುತ್ತಿದ್ದಾರೆ. ರು.26 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಸಜ್ಜುಗೊಳಸಲಾಗುತ್ತಿದ್ದು, ಮಂಟಪದಲ್ಲಿ 18 ಕಲಾಕೃತಿಗಳು ಇರಲಿವೆ. ಮೈಸೂರಿನ ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ಕಲಾಕೃತಿಗಳ ಚಲನವಲನವನ್ನು ಸಮಿತಿಯ ಸದಸ್ಯರೇ ನೀಡಲಿದ್ದಾರೆ. ಆರ್ಚ್ ಲೈಟಿಂಗ್ ಬೋರ್ಡನ್ನು ನ್ಯೂ ಮಾತಾ ಎಲೆಕ್ಟ್ರಿಕಲ್ ದಿಂಡಿಗಲ್, ಕೊಲ್ಲಂನ ಶಿವು ಪ್ರೊ ಲೈಟ್ಸ್ ಧ್ವನಿವರ್ಧಕ ವ್ಯವಸ್ಥೆ ಮಾಡಲಿದ್ದಾರೆ. ಮಡಿಕೇರಿಯ ಇವೆಂಟ್ ಟೆಕ್‌ನ ಅವಿನ್ ಕುಮಾರ್ ತಂಡ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಫಯರ್ ವರ್ಕ್ ಎಫೆಕ್ಟ್ ನೀಡಲಿದ್ದಾರೆ. ಮಂಜು ಮತ್ತು ತಂಡ ಟ್ಯಾಕ್ಟರ್ ಸೆಟ್ಟಿಂಗ್ ಅನ್ನು ಮಾಡಲಿದ್ದು, ಮಯೂರಿ ಆರ್ಟ್ ತಂಡ ಕಲಾಕೃತಿ ಅಲಂಕಾರ ಮಾಡಲಿದೆ. ದೇವಾಲಯದ ಇತಿಹಾಸ: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಸೀಟಿನ ಸಮೀಪವೇ ಇರುವ ದೇವಾಲಯ ಇದಾಗಿದ್ದು, ಉಗ್ರ ಸ್ವರೂಪಿಣಿಯೂ, ಉದ್ದವಾದ ಕೋರೆ ಹಲ್ಲನ್ನು ಹೊಂದಿರುವುದು ದೇವಿಯ ವೈಶಿಷ್ಟ್ಯತೆ. ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯವಳೆನಿಸಿರುವ ದೇವಿಯೇ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ. ಈ ದೇವಿಯು ಅಪಾರ ಶಕ್ತಿ ಹೊಂದಿದ್ದು, ಇಂದಿಗೂ ಹಿರಿಯರು ಈ ದೇವಿಯ ಶಕ್ತಿಯ ಬಗೆಗಿನ ಹಲವಾರು ಕಥೆಗಳನ್ನು ನೆನಪಿಸಿಕೊಳ್ಳುತ್ತಾರೆ. ವೀರ ಹಾಗೂ ಅಹಂಕಾರಿಯೂ ಆಗಿದ್ದ ರಾಜನ ಸೇನಾಧಿಕಾರಿಯೊಬ್ಬನನ್ನು ಅವನ ಅಹಂಕಾರವನ್ನು ಮಟ್ಟ ಹಾಕಲು ದೇವಿಯೂ ಪುಟ್ಟ ಪಕ್ಷಿಯೊಂದರ ರೂಪ ಧರಿಸಿ ಸಂಹಾರ ಮಾಡಿದ್ದು, ಅಂತಹ ರೋಚಕ ಕಥೆಗಳಲ್ಲೊಂದು. ಗರ್ಭಗುಡಿಯಲ್ಲಿರುವ ಪ್ರತಿಮೆ ಮೂಲ ವಿಗ್ರಹವಾಗಿದ್ದು, ನೋಡುಗನಿಗೆ ಪ್ರಥಮ ನೋಟದಲ್ಲಿಯೇ ಭಯ, ಭಕ್ತಿ ಭಾವವನ್ನು ಮೂಡಿಸುತ್ತದೆ. ಗರ್ಭ ಗುಡಿಯ ವಿಗ್ರಹದ ಜೊತೆಯಲ್ಲಿಯೇ ಉದ್ಭವ ನುಣುಪಾದ ಶಿಲೆಯೊಂದಿದ್ದು, ಅದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಂಬಿಕೆ ಇದೆ. ಈ ಪುರಾತನ ದೇಗುಲವು ಇಂದು ಸುಂದರ ವಿಶಿಷ್ಟ, ಬೃಹತ್ ದೇಗುಲವಾಗಿ ನಿರ್ಮಾಣಗೊಂಡಿದೆ. ದೇಗುಲದ ಹಿಂಭಾಗದಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆಯೇ ಇಲ್ಲಿ ಬಲಿ ಪೀಠವೂ ಇದೆ. ವಾರಕ್ಕೆರಡು ದಿನ ಬಲಿ ಅರ್ಪಣೆ, ವಾರ್ಷಿಕವಾಗಿ ಹಲವಾರು ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಇವುಗಳಲ್ಲಿ ದೈವಕೋಲ, ನವರಾತ್ರಿ, ಷಷ್ಠಿ ಹಬ್ಬ ಹರಿದಿನಗಳಂದು ವಿಶೇಷ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆ ನಡೆಯುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ(ಯಾದವ) ಜನಾಂಗದವರು ನೆರವೇರಿಸುತ್ತಾರೆ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗಗಳನ್ನು ಈ ಬಾರಿಯೂ ಪಿ.ಪಿ. ಚಾಮಿ ಅವರು ಹೊತ್ತಿದ್ದಾರೆ. 63 ವರ್ಷದ ಚಾಮಿ ಅವರಿಗೆ ಇದು 50ನೇ ವರ್ಷದ ಕರಗ ಸೇವೆಯಾಗಿದೆ. ಕ್ವೋಟ್... 50ನೇ ವರ್ಷದ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಈ ಬಾರಿ ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6ರಿಂದ 10ರ ವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಈ ಬಾರಿಯೂ ನಾವು ಪ್ರಶಸ್ತಿಗೆ ಪೈಪೋಟಿ ನೀಡುತ್ತೇವೆ. -ಕೆ.ಆರ್. ರವಿ, ಅಧ್ಯಕ್ಷರು ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿ.