ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳೆದ 2024ರ ಆಗಸ್ಟ್ ತಿಂಗಳಿನಿಂದ ಔಷಧಿಗಳು ಅರೆಬರೆ ಪೂರೈಕೆಯಾಗಿದ್ದು, ಇದರಿಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.ಹೌದು, ತಾಲೂಕಿನಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇಟ್ಟಗಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪಟ್ಟಣದಲ್ಲಿ 100 ಹಾಸಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪಟ್ಟಣದಲ್ಲಿ ಎರಡು ನಮ್ಮ ಕ್ಲಿನಿಕ್‌ಗಳಿವೆ. ಉಳಿದಂತೆ ಒಂದು ಸಂಚಾರಿ ಆರೋಗ್ಯ ಘಟಕವಿದೆ. ಇಲ್ಲಿಗೆ ಬರುವ ಬಡ ರೋಗಿಗಳಿಗೆ ಸರಿಯಾಗಿ ಔಷಧಿಗಳು, ಮಾತ್ರೆಗಳು, ಮುಲಾಮು ಇಲ್ಲದ ಕಾರಣ ಅಪ್ರತ್ಯಕ್ಷವಾಗಿ ಖಾಸಗಿ ಆಸ್ಪತ್ರೆಗೆ ಬಡ ರೋಗಿಗಳನ್ನು ನೂಕುವಂತಹ ವ್ಯವಸ್ಥೆ ಉಂಟಾಗಿದೆ.
ಈಗಾಗಲೇ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದೆ. ಈಚೆಗೆ ತಾಲೂಕಿನ ಮಕರಬ್ಬಿ, ಮಾನ್ಯರ ಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿ ಉಂಟಾಗಿತ್ತು. ಈಗ ನದಿ ನೀರನ್ನು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ವಾಂತಿ ಭೇದಿ ಪ್ರಕರಣಗಳು ಉಂಟಾಗುವ ಸಂಭವ ಹೆಚ್ಚಾಗಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐವಿ ದ್ರಾವಣಗಳಿಲ್ಲ. ಅಲರ್ಜಿಗೆ ಮುಲಾಮು ಇಲ್ಲ, ಲೋಷನ್‌ಗಳಿಲ್ಲ. ಅಗತ್ಯ ಔಷಧಿಗಳಿಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ಇದೆ.ನದಿ ತೀರದ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚು ಹೆರಿಗೆ ಪ್ರಕರಣಗಳು ಬರುತ್ತಿವೆ. ಆದರೆ ಹೆರಿಗೆಗೆ ಅಗತ್ಯವಿರುವ ಔಷಧಿ, ಚುಚ್ಚುಮದ್ದು, ಐವಿ ದ್ರಾವಣಗಳು ಸಮರ್ಪಕವಾಗಿಲ್ಲ. ಇದರಿಂದ ವೈದ್ಯರು ನಿಯಮಗಳ ಪ್ರಕಾರ ಹೊರಗೆ ಔಷಧಿ, ಮಾತ್ರೆಗಳ ಚೀಟಿ ಬರೆಯುವಂತಿಲ್ಲ. ಈ ಔಷಧಿಗಳ ಕೊರತೆಯಿಂದ ಹೆರಿಗೆ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಎನ್ನುವ ಪರಿಸ್ಥಿತಿ ಇದೆ.
ತಾಲೂಕಿನ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಒಂದು ದಿನಕ್ಕೆ 839 ಅಗತ್ಯ ಔಷಧಿ, ಮಾತ್ರೆಗಳು ಬೇಕು. ಆದರೆ 150 ಔಷಧಿ, ಮಾತ್ರೆಗಳು ಮಾತ್ಯ ಲಭ್ಯವಿದೆ. ಸಮುದಾಯ ಆರೋಗ್ಯ ಕೇಂದ್ರದ ಪರಿಸ್ಥಿತಿ ಹಾಗೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು 100 ಹಾಸಿಗೆ ಆಸ್ಪತ್ರೆಗೆ ತಿಂಗಳಿಗೆ 10 ಸಾವಿರ ಬಾಟಲಿ ಐವಿ ದ್ರಾವಣ ಬೇಡಿಕೆ ಇದೆ. ಇದರಲ್ಲಿ 2 ಸಾವಿರ ಐವಿ ದ್ರಾವಣ ಲಭ್ಯವಿದೆ. ಹೆರಿಗೆ, ತುರ್ತು ಚಿಕಿತ್ಸೆ, ಡೆಂಘೀ, ಚಿಕೂನ್ ಗುನ್ಯ, ವಾಂತಿ-ಭೇದಿಯ ಪ್ರಕರಣಗಳಿಗೆ ಕಡ್ಡಾಯವಾಗಿ ಐವಿ ದ್ರಾವಣಗಳು ಅತ್ಯಗತ್ಯ. ಈ ಐವಿ ದ್ರಾವಣ ಸೇರಿದಂತೆ ಇತರೆ ಔಷಧಿಗಳ ಕೊರತೆಯಿಂದಾಗಿ ತಿಂಗಳಿಗೆ 50 ರಿಂದ 60 ಹೆರಿಗೆ ಪ್ರಕರಣಗಳು ಅಕ್ಕಪಕ್ಕದ ಜಿಲ್ಲಾಸ್ಪತ್ರೆಗಳಿಗೆ ಹೋಗುತ್ತಿವೆ. ಉಳಿದಂತೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ತುರ್ತು ಚಿಕಿತ್ಸೆ, ಹೆರಿಗೆ ಹೊರತು ಪಡಿಸಿ ಉಳಿದಂತೆ ದಿನಕ್ಕೆ 1600 ರೋಗಿಗಳು ಬರುತ್ತಿದ್ದಾರೆ. ರೋಗಿಗಳಿಗೆ ತಕ್ಕಷ್ಟು ಅಗತ್ಯ ಔಷಧಿ ಪೂರೈಕೆ ಇಲ್ಲ. ವಿಜಯನಗರ ಜಿಲ್ಲೆ ಸ್ಥಾಪನೆಯಾಗಿ 7 ವರ್ಷಗಳು ಕಳೆದರೂ ಜಿಲ್ಲಾ ಔಷಧಿ ಉಗ್ರಾಣ ವ್ಯವಸ್ಥೆ ಇಲ್ಲ. ಇಂದಿಗೂ ಬಳ್ಳಾರಿ ಜಿಲ್ಲಾ ಔಷಧಿ ಉಗ್ರಾಣದಿಂದಲೇ ಪೂರೈಕೆಯಾಗುತ್ತಿದೆ. ಇದರಿಂದ ರೋಗಿಗಳು, ವೈದ್ಯರು ತೊಂದರೆ ಅನುಭವಿಸುವಂತಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಒಬ್ಬ ರೋಗಿಗೆ ಇಂತಿಷ್ಟು ಹಣ ಬಿಡುಗಡೆಯಾದ ಹಣದಲ್ಲಿ ವೈದ್ಯರೇ ಔಷಧಿ, ಮಾತ್ರೆ ಖರೀದಿಸುವ ವ್ಯವಸ್ಥೆ ಇದೆ. ಬರುವ ಅಲ್ಪ ಪ್ರಮಾಣದ ಹಣದಲ್ಲಿ ಡ್ರಗ್ಸ್ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ಹೂವಿನಹಡಗಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ.
ಮೂಲೆಕಟ್ಟಿನ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಮಾತ್ರೆಗಳೇ ಇಲ್ಲ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈ ರೀತಿ ವ್ಯವಸ್ಥೆ ಇದ್ದರೆ ಸರ್ಕಾರಿ ಆಸ್ಪತ್ರೆಗಳು ಇದ್ದರೂ ಉಪಯೋಗ ಇಲ್ಲ. ಈ ಕುರಿತು ಆರೋಗ್ಯ ಸಚಿವರು ಗಮನ ಹರಿಸಬೇಕಿದೆ ಎನ್ನುತ್ತಾರೆ ಬ್ಯಾಲಹುಣ್ಸಿ ಲಕ್ಷ್ಮಣ ಬಾರ್ಕಿ.