ನರೇಗಲ್ಲ: ಮನುಷ್ಯನ ಜೀವನದಲ್ಲಿ ಮನಶಾಂತಿಯೇ ಅತ್ಯಂತ ದೊಡ್ಡ ಸಂಪತ್ತು. ಭೌತಿಕ ಸಂಪತ್ತನ್ನು ಬುದ್ಧಿವಂತಿಕೆಯಿಂದ ಸಂಪಾದಿಸಬಹುದು. ಆದರೆ ಮನಶಾಂತಿಯನ್ನು ಅನುಭವಿಸಲು ದೈವಿಕತೆ ಅಗತ್ಯ. ಮನಸ್ಸು ಶಾಂತವಾಗಿದ್ದರೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಶ್ರೀಗಳು ದೇವಪ್ರಯಾಗದಲ್ಲಿ ಲೋಕಕಲ್ಯಾಣಾರ್ಥವಾಗಿ ಕೈಗೊಂಡ ಮೌನಾನುಷ್ಠಾನ ಹಾಗೂ ಶಿವಯೋಗ ಸಾಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶ್ರೀಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಭಕ್ತಿಪೂರ್ವಕ ಪುರಪ್ರವೇಶ ಹಾಗೂ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಬುದ್ಧಿ ಮನುಷ್ಯನನ್ನು ವಿಭಜಿಸುತ್ತದೆ. ಆದರೆ ಹೃದಯದಿಂದ ಜಗತ್ತನ್ನು ನೋಡಿದಾಗ ಮನಶಾಂತಿ ದೊರೆಯುತ್ತದೆ. ಮನಶಾಂತಿ ಪಡೆಯಲು ಲಿಂಗಪೂಜೆ ಅತ್ಯಂತ ಶ್ರೇಷ್ಠ ಸಾಧನೆಯಾಗಿದೆ. ಲಿಂಗಪೂಜೆಯ ಉದ್ದೇಶ ದೇವರನ್ನು ಹೊರಗೆ ಹುಡುಕುವುದಲ್ಲ, ನಮ್ಮೊಳಗಿನ ದೈವತ್ವವನ್ನು ಅರಿತು ನಾವು ಲಿಂಗಸ್ವರೂಪರಾಗುವುದಾಗಿದೆ ಎಂದರು.
ಬೆತ್ತದ ಅಜ್ಜನವರು ಲಿಂಗೈಕ್ಯರಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ರಾಜ್ಯದ ಸುಮಾರು 150 ಗ್ರಾಮಗಳಲ್ಲಿ ವಿಶೇಷ ಗಣಾರಾಧನೆ ಹಾಗೂ ಸಂಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಅಂತಿಮವಾಗಿ ಹಾಲಕೆರೆಯಲ್ಲಿ ಬೃಹತ್ ಪುಣ್ಯಾರಾಧನೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಸಾನ್ನಿಧ್ಯವನ್ನು ಅನ್ನದಾನೇಶ್ವರ ಸಂಸ್ಥಾನಮಠದ ಡಾ. ಸಿದ್ಧಲಿಂಗ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು ವಹಿಸಿದ್ದರು. ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮಿಗಳು, ದರೂರಿನ ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮಿಗಳು, ಕುರುಗೋಡು ಹಾಗೂ ಬೂದಗುಂಪಾ ಶಾಖಾಮಠಗಳ ಪೂಜ್ಯರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಇದ್ದರು.
ಮುಪ್ಪಿನ ಬಸವಲಿಂಗ ಶ್ರೀಗಳ ಪುರಪ್ರವೇಶನರೇಗಲ್ಲ: ದೇವಪ್ರಯಾಗದಲ್ಲಿ ಮೌನಾನುಷ್ಠಾನವನ್ನು ಪೂರ್ಣಗೊಳಿಸಿ ಸಮೀಪದ ಹಾಲಕೆರೆ ಗ್ರಾಮಕ್ಕೆ ಆಗಮಿಸಿದ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮಿಗಳ ಪುರ ಪ್ರವೇಶ ಸಮಾರಂಭ ಮಂಗಳವಾರ ಸಂಭ್ರಮದಿಂದ ನೆರವೇರಿತು.ಹೂವುಗಳಿಂದ ಅಲಂಕರಿಸಲಾದ ಸಾರೋಟಿನಲ್ಲಿ ವಿರಾಜಮಾನರಾದ ಶ್ರೀಗಳನ್ನು ಭಕ್ತರು ಜಯಘೋಷಗಳ ನಡುವೆ ಭವ್ಯ ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ಕರೆತಂದರು. ವಾದ್ಯಮೇಳಗಳ ಮಂಗಳನಾದ, ಜೈ ಗುರುದೇವ ಎಂಬ ಘೋಷಣೆಗಳು ಮತ್ತು ಭಕ್ತರ ಭಾವಪೂರ್ಣ ನಮನಗಳು ಇಡೀ ಹಾಲಕೆರೆ ಗ್ರಾಮವನ್ನು ಆಧ್ಯಾತ್ಮಿಕ ವಾತಾವರಣದಲ್ಲಿ ತೇಲಿಸಿದವು.ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮನೆಗಳ ಮುಂಭಾಗದಲ್ಲಿ ರಂಗೋಲಿ, ತೋರಣ ಹಾಗೂ ಹೂವಿನ ಅಲಂಕಾರಗಳು ಕಂಗೊಳಿಸುತ್ತಿದ್ದವು.ಪುರ ಪ್ರವೇಶದಲ್ಲಿ ನಾಡಿನ ಅನೇಕ ಹರಗುರು ಚರಮೂರ್ತಿಗಳು ಭಾಗವಹಿಸಿ ಕಾರ್ಯಕ್ರಮದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದರು. ಗಿರೀಶಗೌಡ ಮುಲ್ಕಿಪಾಟೀಲ, ಅಂದಾನಗೌಡ ಪಾಟೀಲ, ರಾಜಶೇಖರಗೌಡ ಪಾಟೀಲ, ವೀರಣ್ಣ ಹಳ್ಳಿ, ಮುದುಕಪ್ಪ ಪ್ರಭಣ್ಣವರ, ಶಿವಪ್ಪ ಪ್ರಭಣ್ಣವರ, ಸಕ್ರಪ್ಪ ರೊಟ್ಟಿ, ಬಸವಣ್ಣೆಪ್ಪ ಕರಡಿ, ಶರಣಪ್ಪ ಕರಮುಡಿ, ಗುರುಪಾದಗೌಡ ಮುಲ್ಕಿಪಾಟೀಲ, ಶರಣಪ್ಪ ಬೆಟಗೇರಿ, ಸೋಮಣ್ಣ ಮಾದಿನೂರ, ಅಂದಪ್ಪ ಹುಲ್ಲಣ್ಣವರ, ದೇವಪ್ಪ ಶಿರೂರ, ಅಶೋಕ ಮಾಳಗೌಡರ, ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ.ಕೆ. ಕಾಳೆ, ಡಾ. ಕೆ.ಬಿ. ಧನ್ನೂರ, ಉಮೇಶ ಪಾಟೀಲ, ಎಸ್.ಜಿ. ಕೇಶಣ್ಣವರ, ಜಯಶ್ರೀ ಪಾಟೀಲ, ಮೈತ್ರಾ ನಂದಿ, ಬಸವ್ವ ರೊಟ್ಟಿ, ಶಾರದಾ ಕರಮುಡಿ, ಭಾರತಿ ಶಿರ್ಸಿ ಸೇರಿದಂತೆ ಗಣ್ಯರು ಹಾಗೂ ಸಾವಿರಾರು ಭಕ್ತರು ಇದ್ದರು.