ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ಮೂಲಕ ದಾಖಲಿಸಲು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಎಐ (ಕೃತಕ ಬುದ್ಧಿಮತ್ತೆ) ಆಧರಿತ ನಿರಂತರ ಆ್ಯಪ್ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ. ಆದರೆ, ಜೂನ್‌ ಮುಗಿದು ಜುಲೈ ಅರ್ಧಕ್ಕೆ ಬದರುತ್ತಿದ್ದರೂ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದಾಗಿ ಶಿಕ್ಷಕರು ಇನ್ನೂ ಪರದಾಡುತ್ತಿದ್ದಾರೆ.

ಮುಂಡರಗಿ ತಾಲೂಕಿನ ಕೆಲವು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ನೆಟ್ವರ್ಕ್ ಕೊರತೆ, ಲೊಕೇಶನ್ ದೋಷ ಮತ್ತು ಮುಖ ಗುರುತಿಸುವ ಪ್ರಕ್ರಿಯೆಯಲ್ಲಿನ ವ್ಯತ್ಯಯಗಳಿಂದ ಹಾಜರಾತಿ ದಾಖಲಿಸಲು ಶಿಕ್ಷಕರು ಕೆಲವೊಮ್ಮೆ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಕಳೆದ 4 ತಿಂಗಳಿಂದ ಡಂಬಳ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಬಂದಾದ ಹಿನ್ನೆಲೆ ಸಿಮ್ ಬಳಸುವ ಶಿಕ್ಷಕರಿಗೆ ಹೆಚ್ಚಿನ ಸವಾಲು ಎದುರಾಗಿದೆ.

ನೆಟ್ವರ್ಕ್ ಸಮಸ್ಯೆ: ಮುಂಡರಗಿ ತಾಲೂಕಿನ ಕೆಲವು ಶಾಲೆಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿ ಲಭ್ಯವಾಗದಿರುವುದು ಮತ್ತು ಶಾಲೆಯ ಆವರಣದಲ್ಲೇ ಇದ್ದರೂ ನೀವು ಲೊಕೇಶನ್‌ನಿಂದ ದೂರ ಇದ್ದೀರಿ ಎಂಬ ಸಂದೇಶ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಶಿಕ್ಷಕರು ಕೆಲವೊಮ್ಮೆ ವಿದ್ಯಾರ್ಥಿಗಳನ್ನು ಹೊರಾಂಗಣಕ್ಕೆ ಕರೆದುಕೊಂಡು ಹೋಗಿ ಹಾಜರಾತಿ ದಾಖಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ಶಿಕ್ಷಕರ ಪ್ರಕಾರ, ತಾಂತ್ರಿಕ ಸಮಸ್ಯೆಗಳಿಂದ ವಿದ್ಯಾರ್ಥಿಗಳ ಹಾಜರಾತಿ ದಾಖಲಾಗುವಲ್ಲಿ ವಿಳಂಬವಾಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಕೆಲವು ಆಡಳಿತಾತ್ಮಕ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತಿದೆ. ಹಾಜರಾತಿ ಪ್ರಕ್ರಿಯೆಗೆ ಹೆಚ್ಚು ಸಮಯ ಮೀಸಲಿಡಬೇಕಾದ ಹಿನ್ನೆಲೆ ಪಾಠಗಳ ಬೋಧನೆಗೂ ಅಡಚಣೆ ಉಂಟಾಗುತ್ತಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.


ಈ ವ್ಯವಸ್ಥೆ ಸಂಪೂರ್ಣವಾಗಿ ಸುಗಮಗೊಂಡ ಬಳಿಕ ಶಾಲಾ ಶಿಕ್ಷಣದಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆಗೆ ಹೆಚ್ಚು ನೆರವಾಗಲಿದೆ ಎಂಬ ವಿಶ್ವಾಸ ಶಿಕ್ಷಣ ವಲಯದಲ್ಲಿ ವ್ಯಕ್ತವಾಗಿದೆ.

ಶಾಲೆಗಳ ಮಾಹಿತಿ: ಮುಂಡರಗಿ ತಾಲೂಕಿನಲ್ಲಿ 26 ಕಿರಿಯ ಪ್ರಾಥಮಿಕ, 76 ಹಿರಿಯ ಪ್ರಾಥಮಿಕ ಹಾಗೂ 22 ಪ್ರೌಢಶಾಲೆಗಳು ಸೇರಿದಂತೆ 124 ಒಟ್ಟು ಸರ್ಕಾರಿ ಶಾಲೆಗಳಿವೆ. ಒಟ್ಟು 14,103 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ಈಗಾಗಲೇ 13,488 ವಿದ್ಯಾರ್ಥಿಗಳು ನಿರಂತರ ಆ್ಯಪ್‌ನಲ್ಲಿ ನೋಂದಣಿಯಾಗಿದ್ದಾರೆ. ಉಳಿದ 615 ವಿಕಲಚೇತನ, ಇತರೆ ತೊಂದರೆ ಇರುವ ವಿದ್ಯಾರ್ಥಿಗಳು ಮನೆಯಲ್ಲೇ ಶಿಕ್ಷಣ ಪಡೆಯುತ್ತಿದ್ದು, ಇಂಥವರ ಮುಖ ಗುರುತಿಸುವ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ನಿರಂತರ ಆ್ಯಪ್ ವಿಶೇಷತೆ: 2026- 27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳು ಹಾಜರಾತಿಯನ್ನು ನಿರಂತರ ಎಐ ಆಧರಿತ ಆ್ಯಪ್ ಮೂಲಕ ದಾಖಲಿಸುವುದನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಹೊಸ ವ್ಯವಸ್ಥೆಯಂತೆ ದಿನಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಹಾಜರಾತಿ ಪಡೆಯಲಾಗುತ್ತದೆ.

ಶಿಕ್ಷಕರು ತರಗತಿಯ ವಿದ್ಯಾರ್ಥಿಗಳ ಭಾವಚಿತ್ರವನ್ನು ಸೆರೆ ಹಿಡಿದ ತಕ್ಷಣ ಎಐ ತಂತ್ರಜ್ಞಾನ ಮುಖಗಳನ್ನು ಗುರುತಿಸಿ ಹಾಜರಾತಿಯನ್ನು ಇಲಾಖೆಯ ಸರ್ವರ್‌ಗೆ ರವಾನಿಸುತ್ತದೆ. ಇದರಿಂದ ಸಾಂಪ್ರದಾಯಿಕ ಹಾಜರಾತಿ ಪುಸ್ತಕದ ಜತೆಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಯಾಗಿದೆ.

ಸರ್ಕಾರ ತಾಂತ್ರಿಕ ಸವಾಲುಗಳನ್ನು ಶೀಘ್ರ ಪರಿಹರಿಸಿ ನೆಟ್ವರ್ಕ್ ಮತ್ತು ಲೊಕೇಶನ್ ಸಮಸ್ಯೆಗಳನ್ನು ನಿವಾರಿಸಿದರೆ ನಿರಂತರ ಆ್ಯಪ್ ಶಾಲಾ ಶಿಕ್ಷಣದಲ್ಲಿ ಇನ್ನಷ್ಟು ಪರಿಣಾಮಕಾರಿ ಫಲಿತಾಂಶ ನೀಡುವ ನಿರೀಕ್ಷೆ ಮೂಡಲಿದೆ ಎನ್ನುತ್ತಾರೆ ಗ್ರಾಮೀಣ ಜನರು.ಶಿಕ್ಷಕರ ಹಾಜರಾತಿಗೆ ಕರ್ತವ್ಯ ಆ್ಯಪ್: ಶಿಕ್ಷಕರ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿಯನ್ನೂ ಡಿಜಿಟಲ್ ಮೂಲಕ ದಾಖಲಿಸುವ ವ್ಯವಸ್ಥೆಯಿಂದ ಶಾಲಾ ಚಟುವಟಿಕೆಗಳು ಹೆಚ್ಚು ನಿಯಮಬದ್ಧವಾಗಿದ್ದು, ಶಿಕ್ಷಕರು ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಹಾಜರಿರುವುದರಿಂದ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತಾಂತ್ರಿಕ ಸಮಿತಿ: ಈಗಾಗಲೆ ನಿರಂತರ ಆ್ಯಪ್‌ನ ಪ್ರಕ್ರಿಯೆ ತಾಲೂಕಿನಲ್ಲಿ ಬಹುತೇಕ ಕಡೆ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಲ್ಲಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಕೂಡ ಪರಿಶೀಲಿಸಿ ಬಗೆಹರಿಸುವಂತೆ ತಾಂತ್ರಿಕ ಸಮಿತಿಗೆ ವರದಿ ಮಾಡಲಾಗಿದೆ. ಸದ್ಯದಲ್ಲಿಯೇ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದರು.