ಕನ್ನಡಪ್ರಭ ವಾರ್ತೆ ಮಡಿಕೇರಿ ಗುತ್ತಿಗೆದಾರರ ಮೇಲೆ ನಡೆದ ಐಟಿ ದಾಳಿ ಸಂದರ್ಭ ಪತ್ತೆಯಾದ ಕೋಟಿಗಟ್ಟಲೆ ಹಣ ಯಾರಿಗೆ ಸೇರಿದ್ದು ಎನ್ನುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಹಿರಂಗ ಪಡಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಐಟಿ ದಾಳಿಯಾದಾಗ ಸಿಕ್ಕ ಹಣದ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜನರಿಗೆ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ಹೋರಾಟ ಮಾಡುತ್ತಿದ್ದ ಕಾಂಗ್ರೆಸ್, ಈಗ ಎಷ್ಟು ಹಣ ವಸೂಲಿಯಲ್ಲಿ ತೊಡಗಿದೆ ಎಂದು ಪ್ರಶ್ನಿಸಿದರು. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ, ಆದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೊಡಗಿನ ರಸ್ತೆಗಳ ಅಭಿವೃದ್ಧಿಯ ಬಗ್ಗೆ ಮೊದಲು ಕಾಳಜಿ ತೋರಲಿ ಎಂದು ಸುನಿಲ್ ಸುಬ್ರಮಣಿ ಒತ್ತಾಯಿಸಿದರು. ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಸದಸ್ಯರಾದ ಕೆ.ಎಸ್.ರಮೇಶ್, ಚಂದ್ರು, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ್, ಪ್ರಮುಖರಾದ ನಾಪಂಡ ರವಿ ಕಾಳಪ್ಪ, ಬಿ.ಕೆ. ಜಗದೀಶ್, ಕನ್ನಿಕೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.