ಕನ್ನಡಪ್ರಭ ವಾರ್ತೆ ಬೆಳಗಾವಿ
ಸನಾತನ ಧರ್ಮ ಕಾಲದ ಪರೀಕ್ಷೆಗೆ ಒಳಗಾಗಬಹುದು. ಆದರೆ ಅದನ್ನು ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ. ಭಾರತವು ಕೇವಲ ಒಂದು ರಾಷ್ಟ್ರವಲ್ಲ. ಜೀವಂತ ನಾಗರಿಕತೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನಶೈಲಿ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರೀ ಕ್ಷೇತ್ರ ಯಡೂರಿನಲ್ಲಿ ನಡೆದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಕಲಶಾರೋಹಣ ಮತ್ತು ಮಹಾಕುಂಭಾಭಿಷೇಕ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭವನ್ನು ಆತ್ಮೀಯ ಪುನರುಜ್ಜೀವನ ಮತ್ತು ನಾಗರಿಕತೆಯ ಪುನರ್ ದೃಢೀಕರಣದ ಕ್ಷಣ ಎಂದ ಅವರು, ಸಿಂಧೂ ಕಣಿವೆಯಿಂದ ಕನ್ಯಾಕುಮಾರಿ ತನಕ ನಿರಂತರವಾಗಿ ಹರಿಯುವ ಚೇತನದ ಪ್ರವಾಹವೇ ಭಾರತ ಎಂದು ಹೇಳಿದರು.
ಈ ಪವಿತ್ರ ಭೂಮಿಯಲ್ಲಿ ವೇದಗಳ ನಿತ್ಯ ಜ್ಞಾನ ಮೊದಲು ಕೇಳಿಬಂತು. ಭಗವದ್ಗೀತೆಯ ಮಹತ್ವದ ಸಂದೇಶವು ಧೈರ್ಯದಿಂದ ಕಾರ್ಯನಿರ್ವಹಿಸಲು ಧರ್ಮಪರವಾಗಿ ಬದುಕಲು ಮತ್ತು ಭಕ್ತಿಯಿಂದ ಶರಣಾಗಲು ಮಾನವಕುಲಕ್ಕೆ ಇಂದಿಗೂ ಮಾರ್ಗದರ್ಶನ ನೀಡುತ್ತಿದೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನಶೈಲಿಯಾಗಿದೆ ಎಂದು ಹೇಳಿದರು.ವಿಶ್ವವೇ ಒಂದು ಕುಟುಂಬ ಎಂಬ ವಸುದೈವ ಕುಟುಂಬಕಂ ಎಂಬ ಶಾಶ್ವತ ತತ್ವವನ್ನು ಭಾರತ ಜಗತ್ತಿಗೆ ನೀಡಿದೆ. ಪ್ರಕೃತಿಯಲ್ಲಿಯೂ ಪ್ರತಿಯೊಬ್ಬ ಮಾನವನಲ್ಲಿಯೂ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ದೃಷ್ಟಿ ಭಾರತದದ್ದು. ವೀರಶೈವ ಲಿಂಗಾಯತ ಪರಂಪರೆಯು ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಆಧ್ಯಾತ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ವೀರಶೈವ ಮಠಗಳು ಮತ್ತು ದೇವಾಲಯಗಳು ಭಕ್ತಿ ಸೇವೆ ಮತ್ತು ಸಾಮಾಜಿಕ ಸೌಹಾರ್ದ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.
ಕಾಡಸಿದ್ಧೇಶ್ವರ ಮಠದ ಶಿವಯೋಗಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ದೃಷ್ಟಿಗೆ ಗೌರವ ಸಲ್ಲಿಸಿದರು. ಕಾಲಕ್ರಮೇಣ ಮರೆಯಾಗಿದ್ದ ಈ ಪವಿತ್ರ ಕ್ಷೇತ್ರವನ್ನು ಪುನಃ ಪತ್ತೆಹಚ್ಚಿ ಪುನರುಜ್ಜೀವನಗೊಳಿಸುವ ಮೂಲಕ ಸನಾತನ ಧರ್ಮದ ನಿತ್ಯ ಜ್ಯೋತಿಯನ್ನು ಅವರು ಪುನರುಜ್ಜೀವನಗೊಳಿಸಿದರು ಎಂದು ಅಭಿಪ್ರಾಯಪಟ್ಟರು.
ಕಾಡಸಿದ್ಧೇಶ್ವರ ಮಠದ ಅನುವಂಶಿಕ ಪೀಠಾಧಿಪತಿಗಳು ನಿತ್ಯ ಪೂಜೆ ಆಚರಣೆಗಳು ಪುನರ್ ನಿರ್ಮಾಣ ಕಾರ್ಯಗಳು ಮತ್ತು ಆಧ್ಯಾತ್ಮಿಕ ಸೇವೆಯನ್ನು ನಿರಂತರವಾಗಿ ಮುಂದುವರೆಸುತ್ತಿರುವುದಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಅಭಿವೃದ್ಧಿಯ ಜೊತೆಗೆ ಪರಂಪರೆಯೂ ಇರಬೇಕು ಎಂಬ ಧೋರಣೆಯನ್ನು ಉಲ್ಲೇಖಿಸಿ ಭಾರತ ಇಂದು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಹಾಗೂ ಜಾಗತಿಕವಾಗಿ ಪ್ರಭಾವಿ ರಾಷ್ಟ್ರವಾಗುತ್ತಿರುವುದರ ಜೊತೆಗೆ ತನ್ನ ನಾಗರಿಕತೆಯ ಮೌಲ್ಯಗಳನ್ನು ದೃಢವಾಗಿ ಉಳಿಸಿಕೊಂಡಿದೆ ಎಂದು ಹೇಳಿದರು.ರಾಜಗೋಪುರ ಉದ್ಘಾಟನೆ ಕೇವಲ ಕಟ್ಟಡ ನಿರ್ಮಾಣದ ಕಾರ್ಯಕ್ರಮವಲ್ಲ. ಅದು ಭಕ್ತಿ ಪರಂಪರೆ ಮತ್ತು ಸಂಸ್ಕೃತಿಯ ನಿರಂತರತೆಯ ಪುನರ್ ದೃಢೀಕರಣವಾಗಿದೆ. ಪವಿತ್ರ ಕ್ಷೇತ್ರಗಳ ಪುನರುಜ್ಜೀವನವು ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಜ್ಯಪಾಲ ಥಾರವಚಂದ ಗೆಹ್ಲೋಟ್ ಮಾತನಾಡಿ ವಸುದೈವ ಕುಟುಂಬ ಎಂಬ ಸಂದೇಶ ಭಾರತ ಜಗತ್ತಿಗೆ ನೀಡಿದೆ. ಅಹಿಂಸೆ, ಕರುಣೆ, ಸತ್ಯ ನಮ್ಮ ತತ್ವಗಳಾಗಿವೆ. ವಿಶ್ವ ಕಲ್ಯಾಣಕ್ಕಾಗಿ ಜಗತ್ತಿನ ಹಲವು ದೇಶಗಳು ಭಾರತದತ್ತ ನೋಡುತ್ತಿವೆ. ಸರ್ವೆ ಜನ ಸುಖಿನೋಭವಂತು ಎಂಬಂತೆ ಎಲ್ಲರೂ ಸುಖ ಶಾಂತಿ ಸಮೃದ್ಧಿ ನೆಮ್ಮದಿಯಿಂದ ಇರಬೇಕೆಂಬುವುದು ಭಾರತದ ಆಶಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರಿಗೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹಾಗೂ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಶ್ರೀ ಮಠದಿಂದ ಕೊಡಮಾಡುವ ವಿಕಾಸವೀರ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇತರರು ಇದ್ದರು.------------
5ಬಿಇಎಲ್1