ಸರ್ಕಾರದ ಗೌರವ ಕಾಪಾಡಲು ಎಲ್ಲ ಕ್ರಮ: ಡಿಕೆಶಿ

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 05:29 AM IST
DK shivakumar

ಸಾರಾಂಶ

ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸರ್ಕಾರದ ಗೌರವ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದರು.

 ಬೆಂಗಳೂರು :  ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕುರಿತು ಸುಳಿವು ನೀಡಿರುವ ಡಿ.ಕೆ.ಶಿವಕುಮಾರ್‌, ಸೂಕ್ತ ದಾಖಲೆ ಮತ್ತು ಪ್ರಕರಣದಲ್ಲಿ ಪಾಲ್ಗೊಂಡಿರುವ ಬಗ್ಗೆ ಸುಳಿವು ಸಿಕ್ಕರೆ ಸರ್ಕಾರದ ಗೌರವ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ವೇಳೆ ಕೆ.ಎಸ್‌. ಈಶ್ವರಪ್ಪ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಲಾಗಿತ್ತು. ಆದರೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಡೆತ್‌ನೋಟ್‌ನಲ್ಲಿ ಸಚಿವರು ಮೌಖಿಕವಾಗಿ ಸೂಚಿಸಿದ್ದರು ಎಂದು ಹೇಳಿದ್ದಾರೆ.

ಆದರೂ, ನಮಗೆ ದಾಖಲೆ ಅಥವಾ ಹಗರಣದಲ್ಲಿ ಪಾಲ್ಗೊಂಡಿರುವ ಸುಳಿವು ಸಿಕ್ಕರೆ ನಮ್ಮ ಗೌರವ ಕಾಪಾಡಿಕೊಳ್ಳಲು ತನಿಖೆ ಮುಗಿಯುವವರೆಗೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಇರಬೇಕು. ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂದು ಅಧಿಕಾರಿಗಳು ಬೆನ್ನತ್ತಿದ್ದಾರೆ. ಹಣವನ್ನು ಮರಳಿ ಪಡೆಯುತ್ತೇವೆ ಎಂದರು.

ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಕುರಿತಂತೆ ಪ್ರತಿಕ್ರಿಯಿಸಿ, 50 ಕೋಟಿ ರು.ಗೂ ಹೆಚ್ಚಿನ ಬ್ಯಾಂಕ್‌ ಅವ್ಯವಹಾರದ ತನಿಖೆ ನೇರವಾಗಿ ಸಿಬಿಐಗೆ ಹೋಗುತ್ತದೆ. ಅದು ನಿಯಮದಲ್ಲೂ ಇದೆ. ಇಲ್ಲಿ ಸರ್ಕಾರ ಕೊಡಬೇಕಾದದ್ದು, ಅವರು ತೆಗೆದುಕೊಳ್ಳಬೇಕಾದದ್ದು ಏನಿಲ್ಲ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಆದರೆ, ಸಿಬಿಐ ಯಾವುದೇ ರಾಜಕೀಯ ಮಾಡದೇ ತನಿಖೆ ಮಾಡಲಿ ಎಂದು ಹೇಳಿದರು.

ಬಿಜೆಪಿ ಕಾಲದ ಅಕ್ರಮಗಳೂ ತನಿಖೆ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಬಿಜೆಪಿ ಕಾಲದಲ್ಲೂ ಈ ರೀತಿಯ ಘಟನೆಗಳು ನಡೆದಿದೆ. ಅದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ನಾಯಕರಿಗೂ ತಿಳಿದಿದೆ. ಆ ಬಗ್ಗೆಯೂ ಸಮಗ್ರ ತನಿಖೆ ಮಾಡುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸಿ.ಟಿ.ರವಿ ಜತೆಯಲ್ಲಿ ಹಣ ಹಂಚಿಕೊಂಡಿದ್ದೇನೆ:

ಅಕ್ರಮದಲ್ಲಿ ಸಿಎಂ ಮತ್ತು ಡಿಸಿಎಂ ಪಾತ್ರದ ಕುರಿತಂತೆ ಮಾತನಾಡಿರುವ ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಉತ್ತರಿಸಿ, ‘ಅದ್ಯಾರೋ ಸಿ.ಟಿ. ರವಿ ಎನ್ನುವವನು ನನ್ನ ಮೇಲೆ ಆರೋಪ ಮಾಡುತ್ತಿದ್ದಾನೆ. ನಾನು ಮತ್ತು ಸಿಎಂ ಹಣ ಹಂಚಿಕೊಂಡಿದ್ದೇವೆ ಎಂದು ಹೇಳಿದ್ದಾನೆ. ಆದರೆ, ನಾನು ಮತ್ತು ರವಿ ಇಬ್ಬರೂ ಪಾಲುದಾರರು. ನಾನು ಮತ್ತು ರವಿ ಹಣವನ್ನು ಹಂಚಿಕೊಂಡಿದ್ದೇವೆ’ ಎಂದು ವ್ಯಂಗ್ಯವಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು