ಗ್ರಾಮೀಣ ಕೂಲಿಕಾರರಿಗೆ ಆಸರೆಯಾದ ನರೇಗಾ

KannadaprabhaNewsNetwork | Published : Jun 2, 2024 1:45 AM

ಸಾರಾಂಶ

ತಾಲೂಕಿನ ಗ್ರಾಪಂನಿಂದ ಎರಡು ತಿಂಗಳಲ್ಲಿ 2.20 ಲಕ್ಷ ಮಾನವ ದಿನ ಸೃಜನೆ ಆಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಬಡವರ್ಗದವರಿಗೆ ಅನುಕೂಲ ಆಗಿದೆ.

ಎರಡು ತಿಂಗಳಲ್ಲಿ 2.20 ಲಕ್ಷ ಮಾನವ ದಿನ ಸೃಜನೆ । ತಳಕಲ್‌, ಮಂಗಳೂರು ಗ್ರಾಪಂದಲ್ಲಿ ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ । 14 ಗ್ರಾಮ ಪಂಚಾಯಿತಿಗಳಿಂದ ಶೇಕಡ ನೂರಕ್ಕಿಂತ ಹೆಚ್ಚಿನ ಸಾಧನೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಗ್ರಾಪಂನಿಂದ ಎರಡು ತಿಂಗಳಲ್ಲಿ 2.20 ಲಕ್ಷ ಮಾನವ ದಿನ ಸೃಜನೆ ಆಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಬಡವರ್ಗದವರಿಗೆ ಅನುಕೂಲ ಆಗಿದೆ.

ಗ್ರಾಮೀಣ ಪ್ರದೇಶದ ಕುಟುಂಬಗಳ ಕೂಲಿಕಾರರ ಜೀವನೋಪಾಯದ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ನರೇಗಾ ಕಾಮಗಾರಿ ಆರಂಭವಾಗಿದ್ದು, ಪ್ರತೀ ಕುಟುಂಬಕ್ಕೆ, ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸದ ಖಾತ್ರಿ ಒದಗಿಸಿ, ಕುಟುಂಬದ ವಯಸ್ಕ ಸದಸ್ಯರು ಕೆಲಸ ಅರಸಿ ಬೇರೆ ಕಡೆ ಗುಳೆ ಹೊಗಲಾರದಂತೆ ಆಗಿದೆ. ಗ್ರಾಮೀಣ ಪ್ರದೇಶದಲ್ಲಿಯೇ ತಮ್ಮ ಉತ್ತಮ ಜೀವನ ನಿರ್ವಹಣೆಯ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳನ್ನು ಸೃಜನೆ ಮಾಡುವಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ತಾಲೂಕಿನಲ್ಲಿ ಅನುಕೂಲ ಆಗಿದೆ. ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳ ನಡುವೆ 4,10,000 ದಿನಗಳು ವಾರ್ಷಿಕ ಗುರಿ ಇದ್ದು, ಕೇವಲ ಎರಡು ತಿಂಗಳಲ್ಲಿ ವಾರ್ಷಿಕ ಗುರಿಯ ಶೇ. 53ರಷ್ಟು ಆಗಿದ್ದು, ಎರಡೇ ತಿಂಗಳಲ್ಲಿ 2.20 ಲಕ್ಷ ಮಾನವ ದಿನ ಸೃಜನೆ ಆಗಿದೆ. 15 ಗ್ರಾಮ ಪಂಚಾಯಿತಿಗಳಲ್ಲಿ 14 ಗ್ರಾಮ ಪಂಚಾಯಿತಿಗಳು ಶೇಕಡ ನೂರಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಅದರಲ್ಲಿ ಯರೇಹಂಚಿನಾಳ ಗ್ರಾಮ ಪಂಚಾಯಿತಿಯ ವಾರ್ಷಿಕ ಗುರಿ 14,563 ಇದ್ದು, ಕೇವಲ 2 ತಿಂಗಳಲ್ಲಿ 19,987 ಮಾನವ ದಿನಗಳನ್ನು ಸೃಜನೆ ಮಾಡಿ ಶೇ. 137 ಸಾಧನೆ ಮಾಡಿದೆ.

ಕುದರಿಮೋತಿ ಗ್ರಾಮ ಪಂಚಾಯಿತಿಯು ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುವುದರೊಂದಿಗೆ 32,286 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ವಾರ್ಷಿಕ ಗುರಿಯ ಶೇ. 79 ಸಾಧನೆ ಮಾಡಿ, ತಾಲೂಕಿನಲ್ಲಿ ಅತೀ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡಿದ ಗ್ರಾಮ ಪಂಚಾಯಿತಿಯಾಗಿದೆ.

ತಾಲೂಕಿನ ತಳಕಲ್‌ ಮತ್ತು ಮಂಗಳೂರು ಗ್ರಾಮ ಪಂಚಾಯಿತಿಗಳು ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡುವುದರೊಂದಿಗೆ ರಾಜ್ಯ ಆಯುಕ್ತಾಲಯದ ನಿರ್ದೇಶನವಾದ ಶೇ. 65 ಮಹಿಳಾ ಭಾಗವಹಿಸುವಿಕೆಯನ್ನು ಪಾಲನೆ ಮಾಡಿವೆ.

ನಾವು ಪ್ರತಿ ವರ್ಷ ಕೂಲಿ ಕೆಲಸಕ್ಕ ಬರ್ತಿವಿ, ಕೆಲಸ ಮಾಡ್ತಿವಿ, ಬಂದ ದುಡ್ಡನ್ನು ಮಕ್ಕಳ ವಿದ್ಯಾಭ್ಯಾಸಕ್ಕ, ಮನಿ ಖರ್ಚು, ಬಿತ್ತಾಕಾ, ದಿನಸಿ ಸಾಮಾನು ತೊಗೋಳಾಕ ಬಳಸತಿವಿ. ಮಳೆ ಇಲ್ಲ ರೀ ಕೆಲಸ ಕೊಟ್ಟಿದ್ದು, ಬಹಳ ಉಪಯೋಗ ಆಗೈತ್ರೀ ಎಂದು ನರೇಗಾ ಕೂಲಿಕಾರೆ ಗಂಗಮ್ಮ ನಿಂಗಪ್ಪ ದೊಡ್ಮನಿ ತಿಳಿಸಿದ್ದಾರೆ.

ಕುಕನೂರು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಕೂಲಿಕಾರರು ತಮ್ಮ ಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ನರೇಗಾ ಯೋಜನೆಯಿಂದ ಕೈಗೆ ಕೆಲಸ ನೀಡುವುದರ ಜೊತೆಗೆ ಜೀವನ ನಿರ್ವಹಣೆಗೆ ಕೂಲಿ ಹಣ ಆಸರೆ ಆಗಿದೆ ಎಂದು ಕುಕನೂರು ತಾಪಂ ಇಒ ಸಂತೋಷ ಬಿರಾದರ್‌ ಪಾಟೀಲ್ ಹೇಳಿದ್ದಾರೆ.

Share this article