ಬಿಜೆಪಿಯವರಿಗೆ ನಮ್ಮ ಶಕ್ತಿ ತೋರಿಸುತ್ತೇವೆ: ಡಿಕೆಶಿ ಸವಾಲು

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 07:23 AM IST
DK shivakumar

ಸಾರಾಂಶ

 ಬಿಜೆಪಿಯವರಿಗೆ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

  ಬೆಂಗಳೂರು :  ಕರ್ನಾಟಕದ ಬಿಜೆಪಿ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಪಕ್ಷ. ನಾವು ನೀಡಿದ್ದ ಜಾಹೀರಾತಿನ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿ ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡಲು ಅವರೇ ಕರೆದಿದ್ದಾರೆ. ಬಿಜೆಪಿಯವರಿಗೆ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರದ ಸಿವಿಲ್‌ ಕೋರ್ಟ್‌ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ್ದ ಜಾಹೀರಾತಿನ ಬಗ್ಗೆ ಬಿಜೆಪಿ ನಾಯಕರು ಖಾಸಗಿ ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರು, ಹಿಂದಿನ ಅವಧಿಯ ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನಾಧರಿಸಿ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೇವೆ. ನಮ್ಮ ಜಾಹೀರಾತಿನಲ್ಲಿನ ಅಂಶ ಸತ್ಯ ಎಂಬುದನ್ನು ಸಾಬೀತು ಮಾಡುತ್ತೇವೆ ಎಂದರು.

ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೇ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು. ಹಣ ನೀಡದೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ 2500 ಕೋಟಿ ರು., ಸಚಿವ ಸ್ಥಾನಕ್ಕೆ 100 ಕೋಟಿ ರು. ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಅವರು ಬಿಜೆಪಿಯವರಲ್ಲವೇ ಎಂದು ಪ್ರಶ್ನಿಸಿದರು.

====

ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಕಾಸಿದ್ದರೆ ಸರ್ಕಾರಿ ಹುದ್ದೆ’ ಎಂದು ಪತ್ರಿಕಾ ವರದಿ ಪ್ರಕಟಗೊಂಡಿತ್ತು. ಅದರಂತೆ ‘ಎ’ ದರ್ಜೆಯ ಗೆಜೆಟೆಡ್‌ ಹುದ್ದೆಗೆ 70 ಲಕ್ಷ ರು., ಎಸಿಗೆ 1.50 ಕೋಟಿ ರು., ಡಿವೈಎಸ್ಪಿಗೆ 80 ಲಕ್ಷ ರು., ತಹಸೀಲ್ದಾರ್‌ ಹುದ್ದೆಗೆ 60ರಿಂದ 80 ಲಕ್ಷ ರು., ಸಬ್‌ ಇನ್ಸ್‌ಪೆಕ್ಟರ್‌ಗೆ 40 ಲಕ್ಷದಿಂದ 1.50 ಕೋಟಿ ರು., ಸಹಾಯಕ ಎಂಜಿನಿಯರ್‌ಗೆ 80 ಲಕ್ಷ ರು., ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ ರು. ಲಂಚ ನಿಗದಿಯಾಗಿದೆ ಎಂದು ಪತ್ರಿಕಾ ವರದಿಯಲ್ಲಿತ್ತು. ಅದರ ಆಧಾರದಲ್ಲಿಯೇ ಕಾಂಗ್ರೆಸ್ ಜಾಹೀರಾತು ನೀಡಿತ್ತು ಎಂದು ಸ್ಪಷ್ಟಪಡಿಸಿದರು.

ಸುಮ್ಮನಿರಲು ಸಾಧ್ಯವಿಲ್ಲ:

ಈವರೆಗೆ ಬಿಜೆಪಿಯವರನ್ನು ಸುಮ್ಮನೆ ಬಿಟ್ಟಿದ್ದೆವು. ಆದರೆ, ಅವರೇ ದೂರು ನೀಡಿದ ಮೇಲೆ ಈಗ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮನ್ನು ರಾಜಕೀಯ ಮಾಡಲು ಬಿಜೆಪಿ ನಾಯಕರು ಕರೆದಿದ್ದಾರೆ, ಅದನ್ನು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ದೊಡ್ಡ ಹೆಸರು ಬರುತ್ತದೆ ಎಂದು ದೂರಿನಲ್ಲಿ ರಾಹುಲ್‌ಗಾಂಧಿ ಅವರ ಹೆಸರನ್ನು ಸೇರಿಸಿದ್ದಾರೆ. ಐಎನ್‌ಡಿಐಎ ಕೂಟದ ಸಭೆ ಇದ್ದ ಕಾರಣ ರಾಹುಲ್‌ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ನ್ಯಾಯಾಲಯಕ್ಕೆ ಬಂದಿದ್ದೇವೆ. ನಮ್ಮ ಮೇಲಿನ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ತಿಳಿದಿದೆ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ರಾಹುಲ್ ಗಾಂಧಿ ಅವರೂ ನ್ಯಾಯಾಲಯಕ್ಕೆ ಗೌರವ ನೀಡುತ್ತಾರೆ. ಹೀಗಾಗಿ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು