ಮಂತ್ರಿಗಳು, ಶಾಸಕರೆಲ್ಲರೂ ಕನ್ನಡ ದ್ರೋಹಿಗಳು: ವಾಟಾಳ್ ನಾಗರಾಜ್‌

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ನಮ್ಮ ರಾಜ್ಯದಲ್ಲಿರುವ ಮಂತ್ರಿಗಳು, ಶಾಸಕರೇ ನಿಜವಾದ ಕನ್ನಡ ದ್ರೋಹಿಗಳು. ಕನ್ನಡ ನಾಡು- ನುಡಿಯ ಬಗ್ಗೆ ದನಿ ಎತ್ತಿ ಮಾತನಾಡುವ ಎದೆಗಾರಿಕೆ ಪ್ರದರ್ಶಿಸದ ಇಂತಹವರಿಂದ ಕನ್ನಡ, ಕನ್ನಡಿಗರ ಉದ್ಧಾರ ಎಂದಿಗೂ ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಮ್ಮ ರಾಜ್ಯದಲ್ಲಿರುವ ಮಂತ್ರಿಗಳು, ಶಾಸಕರೇ ನಿಜವಾದ ಕನ್ನಡ ದ್ರೋಹಿಗಳು. ಕನ್ನಡ ನಾಡು- ನುಡಿಯ ಬಗ್ಗೆ ದನಿ ಎತ್ತಿ ಮಾತನಾಡುವ ಎದೆಗಾರಿಕೆ ಪ್ರದರ್ಶಿಸದ ಇಂತಹವರಿಂದ ಕನ್ನಡ, ಕನ್ನಡಿಗರ ಉದ್ಧಾರ ಎಂದಿಗೂ ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ಮರಾಠಿಗರ ಪುಂಡಾಟಿಕೆ, ಎಂಇಎಸ್ ನಿಷೇಧ, ಬೆಳಗಾವಿ ಮೇಯರ್ ಸ್ಥಾನಕ್ಕೆ ಮರಾಠಿಗರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿಪತ್ರ ಸಲ್ಲಿಸಿದರು.

ಕರ್ನಾಟಕ, ಕನ್ನಡಿಗರನ್ನು ಕೇಳೋರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮಲ್ಲಿ ವಿಧಾನಸಭೆ, ವಿಧಾನಪರಿಷತ್ತು, ಬೆಂಗಳೂರಿನಲ್ಲಿ ವಿಧಾನಸೌಧ, ಬೆಳಗಾವಿಯಲ್ಲಿ ಸುವರ್ಣಸೌಧವಿದ್ದು ಅಧಿವೇಶನ ನಡೆದರೂ ಒಬ್ಬ ಶಾಸಕ, ಒಬ್ಬ ಮಂತ್ರಿ ಗಡಿನಾಡು, ಕನ್ನಡಿಗರ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ. ಇವರೆಲ್ಲರೂ ಕನ್ನಡ, ಕನ್ನಡಿಗರ ವಿರೋಧಿಗಳೂ ಆಗಿದ್ದಾರೆ ಎಂದು ಕಿಡಿಕಾರಿದರು.

ಮೂರು ವರ್ಷದಿಂದ ಕರ್ನಾಟಕದ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ನಮ್ಮ ರಾಜ್ಯ ಕರ್ನಾಟಕ. ಇಲ್ಲಿ ಕನ್ನಡವೇ ಪ್ರಧಾನ. ರಾಜ್ಯಪಾಲರು ಹಿಂದಿಯನ್ನು ಬಿಟ್ಟು ಕನ್ನಡದಲ್ಲಿ ಮಾತನಾಡಬೇಕು ಎಂದು ಒಬ್ಬ ಮಂತ್ರಿ ಅಥವಾ ಒಬ್ಬ ಶಾಸಕರೂ ಕೇಳಲಿಲ್ಲ. ಇವರಿಗೆ ಮಾನ, ಮರ್ಯಾದೆ ಇದೆಯಾ? ಇವರಿಂದ ಕನ್ನಡ ಉಳಿಯುತ್ತಾ ಎಂದು ಪ್ರಶ್ನಿಸಿದರು. ಕನ್ನಡಿಗರಾದ ನಾವು ಜಾಗೃತಗೊಳ್ಳಬೇಕಿದೆ. ನಮ್ಮ ರಕ್ಷಣೆಗೆ ನಾವು ಕಟಿಬದ್ಧರಾಗಿ ನಿಲ್ಲಬೇಕು. ನಮ್ಮ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ನಾವೂ ಸಿಡಿದೇಳಬೇಕಿದೆ. ಕನ್ನಡ ಕಲಿಯುವಂತಿದ್ದರೆ ಮಾತ್ರ ಈ ನೆಲದಲ್ಲಿ ಇರಿ, ಇಲ್ಲದಿದ್ದರೆ ಕರ್ನಾಟಕ ಬಿಟ್ಟು ತೊಲಗಿ ಎಂದು ನೇರವಾಗಿ ಹೇಳುವ ತಾಕತ್ತನ್ನು ಬೆಳೆಸಿಕೊಳ್ಳಬೇಕು ಎಂದರು.

ಬಂದ್ ಗೆ ಕೈಜೋಡಿಸುವಂತೆ ಮನವಿ:

ಮಾ.೨೨ರ ಬಂದ್ ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ, ಕನ್ನಡಿಗರ ಬೇಡಿಕೆಗಳ ಈಡೇರಿಕೆಗಾಗಾಗಿ, ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು ಅನುಷ್ಠಾನಕ್ಕಾಗಿ, ಕನ್ನಡಿಗರ ಉದ್ಯೋಗಕ್ಕಾಗಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗಾಗಿ ನಡೆಸಲಾಗುತ್ತಿದೆ. ಇದಕ್ಕೆ ನಾಡಿನ ಜನರೆಲ್ಲರೂ ಒಗ್ಗೂಡಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರೈತರು ಜಮೀನನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ ೧೧ ಸಾವಿರ ಎಕರೆ ಪ್ರದೇಶವನ್ನು ಮಾರಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಕೊಡದಿದ್ದರೆ ಅಂತಹ ಕಾರ್ಖಾನೆಗಳು ಬೇಡವೇ ಬೇಡ ಎಂದು ಕಠಿಣವಾಗಿ ಹೇಳಿದರು.

ಮಾ.೨೨ರ ನಂತರ ನಾವು ಕಾರ್ಖಾನೆಗಳಿಗೆ ನುಗ್ಗುವ ಚಳವಳಿ ಹಮ್ಮಿಕೊಳ್ಳುತ್ತೇವೆ. ಕನ್ನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸಲಾಗುವುದು. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಉತ್ತರಪ್ರದೇಶ, ಗುಜರಾತಿಗಳು ಕರ್ನಾಟಕಕ್ಕೆ ಬರುತ್ತಿದ್ದಾರೆ. ಕನ್ನಡಿಗರ ಮೇಲೆ ಪರಭಾಷಿಗರ ದಾಳಿ ನಿಲ್ಲಬೇಕು. ಪರಭಾಷಾ ಚಿತ್ರಗಳನ್ನು ಬಹಿಷ್ಕರಿಸಿ ಕನ್ನಡ ಚಿತ್ರಗಳನ್ನು ಉಳಿಸಬೇಕಿದೆ ಎಂದರು.

ತಮಿಳುನಾಡಿನಲ್ಲಿ ೨೨ರಂದು ದಕ್ಷಿಣ ರಾಜ್ಯಗಳ ಸಭೆಯನ್ನು ಡಿಎಂಕೆ ಸ್ಟ್ಯಾಲಿನ್ ಕರೆದಿದ್ದಾರೆ. ಅಲ್ಲಿಗೆ ನಮ್ಮ ಸರ್ಕಾರದವರು ಹೊರಟಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಇನ್ನೂ ಕೊಟ್ಟಿಲ್ಲ. ಮಾಡಿಕೊಡಲಿಲ್ಲ. ಸ್ಟ್ಯಾಲಿನ್ ಮುಂದೆ ಹೋಗಿ ಕುಳಿತುಕೊಳ್ಳುವುದಕ್ಕೆ ನಮ್ಮವರಿಗೆ ನಾಚಿಕೆಯಾಗುವುದಿಲ್ಲವೇ. ಯಾವುದೇ ಕಾರಣಕ್ಕೂ ಸ್ಟ್ಯಾಲಿನ್ ಸಭೆಗೆ ಹೋಗಬಾರದು. ಸಭೆಯನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ಆನಂದ್‌, ಬೆಟ್ಟಹಳ್ಳಿ ಮಂಜುನಾಥ್ ಸೇರಿದಂತೆ ಇತರರಿದ್ದರು.

---------------------

ರಾಜ್ಯಪಾಲರು ಕನ್ನಡದಲ್ಲೇ ಮಾತಾಡಲಿ:

ಜಂಟಿ ಅಧಿವೇಶನದಲ್ಲಿ ಕನ್ನಡ ಬಿಟ್ಟು ಹಿಂದಿಯಲ್ಲಿ ಮಾತನಾಡುವ ರಾಜ್ಯಪಾಲರನ್ನು ರಾಜ್ಯದ ಚುನಾಯಿತ ಪ್ರತಿನಿಧಿಗಳು ವಿರೋಧಿಸದಿರುವುದು ಅತ್ಯಂತ ನೋವಿನ ವಿಚಾರ, ಇದನ್ನು ಖಂಡಿಸುತ್ತೇನೆ. ರಾಜ್ಯಪಾಲರು ಇನ್ನು ಮುಂದೆ ಕನ್ನಡದಲ್ಲೇ ಮಾತನಾಡಬೇಕು. ಹಿಂದಿಯಲ್ಲಿ ಬರೆದುಕೊಂಡು ಕನ್ನಡ ಪದವನ್ನು ಉಪಯೋಗಿಸಲಿ, ಪುಟಗಟ್ಟಲೆ ಬೇಡ, ಅಚ್ಚುಕಟ್ಟಾಗಿ ಕನ್ನಡದಲ್ಲಿ ಸಂಕ್ಷಿಪ್ತವಾಗಿ ಮಾತನಾಡಲಿ ಎಂದು ಆಗ್ರಹಿಸಿದರು.

ನಾನು ಸುಮಾರು ೧೫ ವರ್ಷ ರಾಜ್ಯಪಾಲರ ಭಾಷಣವನ್ನು ವಿರೋಧ ಮಾಡಿದ್ದೇನೆ. ಅಬ್ದುಲ್ ಕಲಾಂ, ಖುರ್ಷಿದ್ ಆಲಂ ಖಾನ್ ಅವರು ಜೆ.ಎಚ್.ಪಟೇಲರ ಕಾಲದಲ್ಲಿ ನನ್ನ ವಿರೋಧ ತಡೆಯಲಾಗದೆ ಅರ್ಧಕ್ಕೇ ಭಾಷಣ ಮೊಟಕುಗೊಳಿಸಿ ತೆರಳಿದ್ದರು.

ಇಂದು ನಾವು ಕೇಳುತ್ತಿರುವುದು ರಾಜ್ಯಪಾಲರ ಹಿಂದಿ ಭಾಷಣ. ಹಿಂದಿಯವರು ಇಂದು ನಮ್ಮನ್ನು ಒಡೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಒಬ್ಬ ಚಾಲಕನನ್ನು ಹೊಡೆದರು. ಇಲ್ಲಿ ಇನ್ನು ಮುಂದೆ ಕನ್ನಡಿಗರಿಗೆ ಮಾರ್ವಾಡಿಗಳು, ಗುಜರಾತಿಗಳು, ಸಿಂಧಿಗಳು, ಮಲಯಾಳಿಗಳು, ತಮಿಳು, ತೆಲುಗರು, ಮರಾಠಿಗಳು ಎಲ್ಲರೂ ಹೊಡೆಯುತ್ತಾರೆ ಎಂದು ಎಚ್ಚರಿಸಿದರು.

Share this article