ಎಲ್ಲಾ ಮಾತೃಭಾಷೆಗಳೂ ಉಳಿಯಬೇಕಾಗಿದೆ

KannadaprabhaNewsNetwork |  
Published : Feb 26, 2025, 01:03 AM IST
25ಎಚ್ಎಸ್ಎನ್12 : ಹೊಳೆನರಸೀಪುರದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಲೋಕ ತಾಯ್ನುಡಿ ದಿನದ ೨೫ನೆಯ ವರ್ಷಾಚರಣೆ ಕಾರ್ಯಕ್ರಮವನ್ನು ಡಾ. ಲೋಕೇಶ್ ಆರ್. ಉದ್ಘಾಟಿಸಿದರು. | Kannada Prabha

ಸಾರಾಂಶ

ಹಲವಾರು ಜನಾಂಗ, ಧರ್ಮ, ಸಂಸ್ಕೃತಿಗಳನ್ನು ತನ್ನೊಡಲಲ್ಲಿ ಪೋಷಿಸುತ್ತಾ ಬಂದಿರುವ ಭಾರತ ದೇಶದಲ್ಲಿ ಬಹುತ್ವವು ಹೆಗ್ಗುರುತು. ಇಂತಹ ಬಹುತ್ವ ಭಾರತದ ಎದೆಯಾಳದಲ್ಲಿ ನೂರಾರು ಭಾಷೆಗಳಿವೆ ಹಾಗೂ ಕನ್ನಡ ಭಾಷೆ ಸೇರಿದಂತೆ ಅದರಲ್ಲಿ ಯಾವುದೂ ಮೇಲಲ್ಲ, ಯಾವುದೂ ಕನಿಷ್ಠವಲ್ಲ. ಹೃದಯದಿಂದ ಹುಟ್ಟಿ ಹೃದಯವನ್ನು ಮುಟ್ಟುವ ಎಲ್ಲಾ ಮಾತೃಭಾಷೆಗಳೂ ಉಳಿಯಬೇಕಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ಡಾ. ಚಿಕ್ಕಮಗಳೂರು ಗಣೇಶ ಅವರು ಅಭಿಪ್ರಾಯಪಟ್ಟರು. ಸ್ಥಳೀಯ ಬಹುಜನರ ಸಂಸ್ಕೃತಿಯ ಭಾಷಿಕ ಚಿಂತನೆಗಳ ಮೂಲಕವೇ ರಾಷ್ಟ್ರೀಯ ಹಾಗೂ ಜಾಗತಿಕ ಚಹರೆಗಳನ್ನು ನಾವಿಂದು ಕಟ್ಟಬೇಕಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಹಲವಾರು ಜನಾಂಗ, ಧರ್ಮ, ಸಂಸ್ಕೃತಿಗಳನ್ನು ತನ್ನೊಡಲಲ್ಲಿ ಪೋಷಿಸುತ್ತಾ ಬಂದಿರುವ ಭಾರತ ದೇಶದಲ್ಲಿ ಬಹುತ್ವವು ಹೆಗ್ಗುರುತು. ಇಂತಹ ಬಹುತ್ವ ಭಾರತದ ಎದೆಯಾಳದಲ್ಲಿ ನೂರಾರು ಭಾಷೆಗಳಿವೆ ಹಾಗೂ ಕನ್ನಡ ಭಾಷೆ ಸೇರಿದಂತೆ ಅದರಲ್ಲಿ ಯಾವುದೂ ಮೇಲಲ್ಲ, ಯಾವುದೂ ಕನಿಷ್ಠವಲ್ಲ. ಹೃದಯದಿಂದ ಹುಟ್ಟಿ ಹೃದಯವನ್ನು ಮುಟ್ಟುವ ಎಲ್ಲಾ ಮಾತೃಭಾಷೆಗಳೂ ಉಳಿಯಬೇಕಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ಡಾ. ಚಿಕ್ಕಮಗಳೂರು ಗಣೇಶ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ನುಡಿ ಪ್ರತಿಷ್ಠಾನವು ಕನ್ನಡ ವಿಭಾಗದ ಸಹಯೋಗದೊಂದಿಗೆ ಲೋಕ ತಾಯ್ನುಡಿ ದಿನದ ೨೫ನೆಯ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪತನ್ನು ವೈಭವೀಕರಿಸುವ ನೈತಿಕತೆ ಇಲ್ಲದ ಆರ್ಥಿಕ ಜಾಗತೀಕರಣವು ಜನರ ಭಾಷೆಗಳ ಕತ್ತು ಹಿಸುಕಿ ಮುನ್ನುಗ್ಗಲು ಪ್ರಾರಂಭಿಸಿದೆ. ಅದಕ್ಕೆ ಉತ್ತರವಾಗಿ ಜಗಲಿಯಿಂದ ಜಗತ್ತಿನ ಕಡೆಗೆ ಎಂಬ ಧ್ಯೇಯವನ್ನು ಮಂಡಿಸಬೇಕಾದ ತುರ್ತು ಅಗತ್ಯವಾಗಿದ್ದು, ಸ್ಥಳೀಯ ಬಹುಜನರ ಸಂಸ್ಕೃತಿಯ ಭಾಷಿಕ ಚಿಂತನೆಗಳ ಮೂಲಕವೇ ರಾಷ್ಟ್ರೀಯ ಹಾಗೂ ಜಾಗತಿಕ ಚಹರೆಗಳನ್ನು ನಾವಿಂದು ಕಟ್ಟಬೇಕಾಗಿದೆ ಎಂದು ಹೇಳಿದರು.

ಕನ್ನಡಿಗರು ಸಂವೇದನಾಶೀಲರಾಗಿ, ಹಿಂದಿನಿಂದಲೂ ಸಹನೆ ಎಂಬುದು ಕನ್ನಡಿಗರ ಉಸಿರಾಗಿ ನಿಲೆ ನಿಂತಿದೆ. ಇನ್ನೊಬ್ಬರ ವಿಚಾರ, ಧರ್ಮ, ಜೀವನ ಕ್ರಮವನ್ನು ಸಹಿಸಿಕೊಳ್ಳುವ ಈ ಗುಣವು ಇವತ್ತಿನ ಸಂದರ್ಭದಲ್ಲಿ ಅತಿಮುಖ್ಯವಾಗಿ ಬೇಕಾಗಿದೆ. ಹೊರಗಿನ ಭಾಷೆಗಳ ಸವಾಲುಗಳನ್ನು ಎದುರಿಸಿ ನಿಲ್ಲುವ ಜೊತೆಗೆ ನಮ್ಮಲ್ಲೇ ಇರುವ ತುಳು, ಕೊರಚ, ಕೊಡವ ಮೊದಲಾದ ಒಳಭಾಷೆಗಳ ನಡುವೆ ಸಾಮರಸ್ಯ ಕಾಪಾಡುವುದು ವರ್ತಮಾನದ ಆದ್ಯತೆಯಾಗಿದೆ ಎಂದು ಕಿವಿಮಾತು ಹೇಳಿದರು. ಕನ್ನಡನಾಡು ಎಂದರೆ ಕೇವಲ ಭೌತಿಕ ನೆಲ ಜಲ ಬಾವುಟವಲ್ಲ, ನಾವು, ನೀವು ಎಲ್ಲಾ ಮನುಷ್ಯರ ನೆಲೆಬೀಡು. ಈ ನೆಲವಾಸಿಗಳ ಬದುಕು ಬವಣೆ ಕನಸುಗಳಿಗೆ ಒತ್ತಾಸೆ ನೀಡುವುದು ಆದ್ಯತೆ ಆಗಬೇಕಿದೆ ಜತೆಗೆ ಪರಸ್ಪರ ಸಹನೆ ಅಂತಃಕರಣದ ಮೂಲಕ ಈ ಜೈವಿಕ ಕನ್ನಡನಾಡನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಹರದನಹಳ್ಳಿ ಮಾದರಿ ವಸತಿಯುಕ್ತ ಕಾಲೇಜಿನ ಅಧ್ಯಾಪಕರಾದ ಡಾ. ಲೋಕೇಶ್ ಆರ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋಶಾಧಿಕಾರಿ ಡಾ. ಯಲ್ಲವ್ವ ಹೆಬ್ಬಳ್ಳಿ ನಿಘಂಟು ಸಂಪುಟಗಳನ್ನು ವಿತರಿಸಿದರು. ಪ್ರಾಂಶುಪಾಲ ಡಾ. ಆಶಾಜ್ಯೋತಿ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು.

ನುಡಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಅ.ಪ. ರಕ್ಷಿತ್ ಪ್ರಾಸ್ತಾವಿಕವಾಗಿ ಮಾತಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಅಶೋಕ್ ಎಚ್.ಕೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರೋಜಾ ಮತ್ತು ಲಕ್ಷ್ಮಿದೇವಿ ನಿರೂಪಿಸಿದರು. ಅಧ್ಯಾಪಕರಾದ ಡಾ. ಕೃಷ್ಣಮೂರ್ತಿ ವಿ.ಎಸ್, ಮಧುಶ್ರೀ, ಡಾ. ಶ್ವೇತಾನಾಯ್ಕ್, ಫಕೀರಮ್ಮ ಮುರಗೋಡ್, ಎಂ.ಎಸ್. ಜಯಚಂದ್ರ, ಸುನಿಲ್, ಇತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ