ಕಾರಟಗಿ: ಅಚ್ಚುಕಟ್ಟು ಪ್ರದೇಶದ ೨ನೇ ಬೆಳೆಯ ನೀರಿಗೆ ಒತ್ತಾಯಿಸಿ ನ.೧೨ರಿಂದ ನಡೆಯುವ ರೈತರ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯ ರೈತರು, ಕಾರ್ಮಿಕ, ಉದ್ಯಮಿಗಳು ಕೈಜೋಡಿಸಬೇಕೆಂದು ವಿವಿಧ ರೈತ ಸಂಘಟನೆ ಮನವಿ ಮಾಡಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘಟನೆಗಳ ಮುಖ್ಯಸ್ಥರು, ಬುಧವಾರ ಬೆಳಗ್ಗೆ ೯ಗಂಟೆಗೆ ಕಾರಟಗಿ ಪಟ್ಟಣದ ಎಪಿಎಂಸಿ ಆವರಣದಿಂದ ರಾಜ್ಯ ಹೆದ್ದಾರಿಯ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕನಕದಾಸ ವೃತ್ತದಲ್ಲಿನ ಹೊಸ ಬಸ್ ನಿಲ್ದಾಣ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಲಾಗುವುದು. ಬಳಿಕ ರಸ್ತೆ ಪಕ್ಕದಲ್ಲಿಯೇ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಕುಳಿತುಕೊಳ್ಳಲಾಗುವುದು.ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಟ್ಟಣ ಸೇರಿದಂತೆ ತಾಲೂಕು, ಹೊರ ಜಿಲ್ಲೆಗಳ ವ್ಯಾಪಾರಸ್ಥರು, ಅಕ್ಕಿ ಗಿರಣಿ ಮಾಲೀಕರು, ವಿವಿಧ ಸಂಘಟನೆಯ ಮುಖಂಡರು ಸ್ವಯಂ ಪ್ರೇರಿತವಾಗಿ ಈ ಅನಿದಿಷ್ಟಾವಧಿ ಅಹೋರಾತ್ರಿ ಧರಣಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.೨ನೇ ಬೆಳೆಗೆ ಬೇಕಾಗುವಷ್ಟು ೮೦ ಟಿಎಂಸಿ ನೀರಿನ ಸಂಗ್ರಹ ಇದೆ. ರಾಜ್ಯ ಸರ್ಕಾರದ ಸಚಿವರು ರೈತ ಮುಖಂಡರ ಜತೆ ಚರ್ಚಿಸದೆ ಏಕಾಏಕಿ ಎರಡನೇ ಬೆಳೆಗೆ ನೀರು ಬಿಡಲ್ಲ ಅಂದ್ರೆ ಏನು ಅರ್ಥ. ತಜ್ಞರ ಅಭಿಪ್ರಾಯದ ಪ್ರಕಾರ ಎರಡು ಅಥವಾ ಮೂರು ತಿಂಗಳಲ್ಲಿ ಕ್ರಸ್ಟ್ ಗೇಟ್ ಅಳವಡಿಸಬಹುದು. ನ. ೧೪ ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಹಮ್ಮಿಕೊಂಡಿದ್ದಾರೆ. ಆ ಸಭೆಯನ್ನು ಬರ್ಖಾಸ್ತುಗೊಳಿಸಿ ಮುನಿರಾಬಾದಿನಲ್ಲಿಯೇ ಸಭೆ ನಡೆಸಬೇಕು. ಇದಕ್ಕೆ ವ್ಯತಿರಿಕ್ತವಾದ ತೀರ್ಮಾನ ಏನಾದರೂ ಹೊರಬಿತ್ತೋ ನಮ್ಮ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಈ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಿದ್ದೇವೆ. ಅಷ್ಟೇ ಅಲ್ಲ, ಈ ಹೋರಾಟಕ್ಕೆ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಸೇರಿದಂತೆ ಬಿಜೆಪಿ ನಾಯಕರು ಸಹ ಬೆಂಬಲ ನೀಡಿ ರೈತರೊಂದಿಗೆ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.
ರೈತ ಸಂಘದ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ, ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಬಸವರಾಜ ಬಿಲ್ಗಾರ್ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಹನುಮಂತಪ್ಪ ಭೋವಿ ಹಂಚಿನಾಳಕ್ಯಾಂಪ್, ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್, ರಾಜ್ಯಾಧ್ಯಕ್ಷ ಶರಣೇಗೌಡ ಕೆಸರಟ್ಟಿ ಮಾತನಾಡಿದರು.ರಾಜ್ಯ ರೈತ ಸಂಘಟನೆಯ ಗೌರವಾಧ್ಯಕ್ಷ ವೀರಪ್ಪ ಕುರಿ ಹಣವಾಳ, ರಾಜ್ಯ ಉಪಾಧ್ಯಕ್ಷ ಮೋಹನ್ ಕುರಿ ಹಾಗೂ ವಿರೇಶಪ್ಪ ಮುಕ್ಕುಂದಿ ಸೇರಿದಂತೆ ಇನ್ನಿತರರು ಇದ್ದರು.
ಧರಣಿ ರಾಜಕೀಯ ಉದ್ದೇಶ-ಶರಣೇಗೌಡ ಮಾಲಿ ಪಾಟೀಲ್ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ೨ನೇ ಬೆಳೆಗೆ ನೀರು ಬಿಡುಗಡೆ ವಿಚಾರ ರಾಜಕೀಯ ತಿರುವು ಪಡೆದಿದ್ದು, ಬಿಜೆಪಿ ನೇತೃತ್ವದಲ್ಲಿ ನ. ೧೨ರಂದು ಧರಣಿ ನಡೆಯಲು ಸಿದ್ದತೆ ನಡೆದಿದ್ದರೆ ಮತ್ತೊಂದಡೆ ಪರಿಸ್ಥಿತಿ ಅವಲೋಕಿಸದೆ ರೈತರ ದಾರಿ ತಪ್ಪಿಸುವ ಕೆಲಸ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾತ್ಕಾಲಿಕ ಅನುಕೂಲಕ್ಕಿಂತ ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡಬೇಕೆಂದು ನೀರಿನ ವಿಷಯದಲ್ಲಿ ರಾಜಕೀಯ ಬೇಡ ಎಂದು ಬಿಜೆಪಿ ಮತ್ತು ರೈತ ಸಂಘಟನೆಗಳ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ.ಬಹುತೇಕ ರೈತರು ಪರಿಸ್ಥಿತಿ ನೋಡಿ ಸಸಿ ಮಡಿ ಹಾಕಿಲ್ಲ. ಏಪ್ರಿಲ್ ವರೆಗೆ ನೀರು ಬೇಕಾಗಬಹುದು ಎಂದು ದೂರದೃಷ್ಟಿಯಲ್ಲಿಯೇ ರೈತರು ಸಸಿ ಮಡಿ ಹಾಕಿಲ್ಲ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಸದಾ ತುಂಗಭದ್ರಾ ಜಪ ಮಾಡುತ್ತಾರೆ, ಅಣೆಕಟ್ಟೆಯ ಶಾಶ್ವತ ಪರಿಹಾರ ಕುರಿತು ಯೋಚಿಸುವುದು ಬಿಟ್ಟು ರೈತರನ್ನು ಧಿಕ್ಕು ತಪ್ಪಿಸುತ್ತಿದ್ದಾರೆ. ಮಣ್ಣ ಮತ್ತು ನೀರು ಒಳ್ಳೆಯದನ್ನಷ್ಟೇ ಸ್ವೀಕರಿಸುತ್ತದೆ. ರೈತರ ಹಿತಕ್ಕೆ ಧಕ್ಕೆ ತರುವುದನ್ನು ಬಿಟ್ಟು ಪ್ರತಿಭಟನೆ ಕೈಬಿಡಲಿ ಎಂದು ಶರಣೇಗೌಡ ಆಗ್ರಹಿಸಿದ್ದಾರೆ. ಜಲಾಶಯದ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಅತ್ಯಂತ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋಣ. ಅಣೆಕಟ್ಟೆಯ ಭವಿಷ್ಯದ ಬಗೆಗೆ ರೈತರು ಚಿಂತಿಸಲಿ ಎಂದು ಹೇಳಿದ್ದಾರೆ.