ರೈತರಿಗೆ ಕೊಟ್ಟ ಎಲ್ಲ ನೋಟಿಸ್ ವಾಪಸ್‌

KannadaprabhaNewsNetwork | Published : Nov 4, 2024 12:16 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರೈತರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೈತರು ಆತಂಕ ಪಡುವುದು ಬೇಡ. ರೈತರಿಗೆ ಯಾವುದೇ ತೊಂದರೆ ಆಗಲ್ಲ ಎಂದು ವಕ್ಫ್‌ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ವಕ್ಫ್‌ ನೋಟಿಸ್ ವಾಪಸ್ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿರುವ ವಿಚಾರಕ್ಕೆ ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ನೀಡಿದ ಎಲ್ಲ ನೋಟಿಸ್ ವಾಪಸ್ ಪಡೆಯುತ್ತಿದ್ದೇವೆ. ವಕ್ಫ್‌ ಅಧಿಕಾರಿಗಳಿಗೆ ಸೆಕ್ರೆಟರಿಗಳು ನೋಟಿಸ್ ವಾಪಸ್ ಪಡೆಯುವಂತೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೈತರು ಆತಂಕ ಪಡುವುದು ಬೇಡ. ರೈತರಿಗೆ ಯಾವುದೇ ತೊಂದರೆ ಆಗಲ್ಲ ಎಂದು ವಕ್ಫ್‌ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಎಲ್ಲ ವಕ್ಫ್‌ ನೋಟಿಸ್ ವಾಪಸ್ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿರುವ ವಿಚಾರಕ್ಕೆ ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ನೀಡಿದ ಎಲ್ಲ ನೋಟಿಸ್ ವಾಪಸ್ ಪಡೆಯುತ್ತಿದ್ದೇವೆ. ವಕ್ಫ್‌ ಅಧಿಕಾರಿಗಳಿಗೆ ಸೆಕ್ರೆಟರಿಗಳು ನೋಟಿಸ್ ವಾಪಸ್ ಪಡೆಯುವಂತೆ ಹೇಳಿದ್ದಾರೆ. ನನಗೂ ಮಾಹಿತಿ ಬಂದಿದೆ. ರೈತರಿಗೆ ಕೊಟ್ಟ ಎಲ್ಲ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯವಿಲ್ಲ. ಮುಡಾ ಹೋಯ್ತು ಈಗ ವಕ್ಫ್ ಬಂದಿದೆ. ಮುಡಾದಲ್ಲಿ ಏನಿಲ್ಲ ಎಂದು ಗೊತ್ತಾಯ್ತು. ಈಗ ವಕ್ಫ್ ಹಿಡಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗ ರಾಜ್ಯದಲ್ಲಿ ಬೈ ಎಲೆಕ್ಷನ್ ಇದೆ. ಮಹಾರಾಷ್ಟ್ರದಲ್ಲಿ ಚುನಾವಣೆ ಇದೆ. ಪೊಲಿಟಿಕಲ್ ಗಿಮಿಕ್‌ಗಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ರಾಜಕೀಯ ಮಾಡುವ ಹಾಗಿದ್ದರೆ ನಮ್ಮ ಜೊತೆ ಮಾಡಿ. ಜನರ ದಾರಿ ತಪ್ಪಿಸಬೇಡಿ. ಉಪಚುನಾವಣೆ ಬಳಿಕ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಕೆಲವರು ಅವರವರ ಅಭಿಪ್ರಾಯ ಹೇಳುತ್ತಾರೆ. ನನ್ನ ಅಭಿಪ್ರಾಯ ನಾನು ಹೇಳಿರುವೆ. ಸಿಎಂ ಸ್ಥಾನದಲ್ಲಿ ಟಗರು ಕೂತಿದೆ. ಅವರನ್ನು ಅಲ್ಲಾಡಿಸಲು ಆಗಲ್ಲ ಎಂದರು.

ರೈತರ ಆಸ್ತಿ‌ಯನ್ನು ನಾವು ಮುಟ್ಟಲ್ಲ:

ಗೋಲಗುಂಬಜ್ ಅವರಿಗೆ ಬಿಟ್ಟು ಕೊಟ್ಟಿದ್ದೇವೆ. ಗೋಲಗುಂಜ್ ಅನ್ನು ಕೇಂದ್ರದವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾವು ಯಾರಿಗೂ ನೋಟಿಸ್ ಕೊಟ್ಟಿಲ್ಲ. ರೈತರ ಆಸ್ತಿ‌ಯನ್ನು ನಾವು ಮುಟ್ಟಲ್ಲ. ಆದರೆ ದಾನಿಗಳು ದಾನ ಮಾಡಿರುವ ಆಸ್ತಿ‌ ಅತಿಕ್ರಮಣ ಮಾಡಿದ್ದರೆ ನಾವು ಬಿಡಲ್ಲ. ವಕ್ಫ್ ಆಸ್ತಿಯನ್ನು ಶೇ.90 ರಷ್ಟು ಮುಸ್ಲಿಮರೇ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಆಸ್ತಿಯನ್ನು ಮರಳಿ ಪಡೆಯುವ ಕೆಲಸ ಮಾಡುತ್ತೇನೆ. ಬೀದರ್‌ನಲ್ಲಿ ಅತಿಕ್ರಮಣ ಮಾಡಿದ್ದ 4 ಆಸ್ತಿಗಳನ್ನು ವಾಪಸ್ ಪಡೆದಿದ್ದೇವೆ. ಹಾಗೆ ಒತ್ತುವರಿ ಆಗಿದ್ದನ್ನು ವಾಪಸ್ ಪಡೆಯುತ್ತೇವೆ. ಒತ್ತುವರಿ ಮಾಡಿ‌ರುವವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲ್ಲ, ಮೊದಲು ನಮ್ಮ ಆಸ್ತಿ ವಾಪಸ್ ಪಡೆಯತ್ತೇವೆ ಎಂಬುದಾಗಿ ತಿಳಿಸಿದರು.

ಗ್ಯಾರಂಟಿ ಯೋಜನೆ ಸ್ಥಗಿತ ಮಾಡಲ್ಲ:

ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ವಾಪಸ್ ತೆಗೆದುಕೊಳ್ಳಲ್ಲ. ಜತೆಗೆ ಸ್ಥಗಿತ ಕೂಡ ಮಾಡಲ್ಲ. ಲೋಕಸಭಾ ಚುನಾವಣೆ ಮೇಲೆ ಗ್ಯಾರಂಟಿ ಪರಿಣಾಮ ಬೀರಲ್ಲ. ಆಗ ಕೆಲ ನಾಯಕರು ಗ್ಯಾರಂಟಿ ತಗೆಯಿರಿ ಎಂದರು. ಆಗ ಸಿಎಂ ಸಿದ್ದರಾಮಯ್ಯನವರು ನಾನಿರುವವರೆಗೆ ಸರ್ಕಾರ ಇರುವವರೆಗೆ ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.---------ಕೋಟ್‌

ಹೊನವಾಡದಲ್ಲಿ 11ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. 1,200 ಎಕರೆ ಇದೆ ಅಂತಾ ಹೇಳಿದ್ದಾರೆ. ಅಲ್ಲಿ ಯಾರಿಗೂ ನೋಟಿಸ್ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲೂ ವಕ್ಫ್ ನೋಟಿಸ್ ನೀಡಲಾಗಿದೆ. ವಕ್ಫ್‌ದಲ್ಲಿ ಒಂದು ಇಂಚು ಸರ್ಕಾರದ್ದಿಲ್ಲ ಇಲ್ಲ. ರಾಜ್ಯದಲ್ಲಿರುವ 1.12 ಲಕ್ಷ ಎಕರೆ ವಕ್ಫ್ ಆಸ್ತಿ ದಾನಿಗಳು ನೀಡಿರುವುದು. ಅದರಲ್ಲಿ 80 ಸಾವಿರ ಎಕರೆ ಅತಿಕ್ರಮಣವಾಗಿದೆ. ಕೇವಲ 33 ಸಾವಿರ ಎಕರೆ ವಕ್ಫ್ ಬೋರ್ಡ್ ಕೈಯಲ್ಲಿದೆ. ಅದನ್ನು ಉಳಿಸುವ ಕೆಲಸ ಮಾಡುತ್ತಿದ್ದೇನೆ.

- ಜಮೀರ್‌ ಅಹ್ಮದ್‌ಖಾನ್, ವಕ್ಫ್‌ ಸಚಿವ

-----------ಬಾಕ್ಸ್‌

ವಕ್ಫ್‌ ಬಗ್ಗೆ ಜೋಶಿಗೆ ಬುದ್ಧಿ ಇರಬೇಕು

ಅಲ್ಲಾನ ಆಸ್ತಿ ಎಲ್ಲಿಂದ ಬಂತು ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆ ವಿಚಾರಕ್ಕೆ ಉತ್ತರ ನೀಡಿ, ವಕ್ಫ್ ಬಗ್ಗೆ ಅವರಿಗೆ ಬುದ್ಧಿ ಇರಬೇಕು. ವಕ್ಫ್ ಎಂದರೆ ಅಲ್ಲಾನ ಆಸ್ತಿ ಎನ್ನುತ್ತೇವೆ. ಇದು ಜೋಶಿ ಕೊಟ್ಟ ಆಸ್ತಿಯೇನಲ್ಲ. ಸರ್ಕಾರದಿಂದ ಕೊಟ್ಟ ಆಸ್ತಿಯೂ ಅಲ್ಲ. ಇದು ದಾನಿಗಳು ದಾನ ಮಾಡಿರುವ ಆಸ್ತಿ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಇದ್ದಾಗ ವಕ್ಫ್ ಆಸ್ತಿ ಅತಿಕ್ರಮಣ ಆಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಹಾಗಿದ್ದರೆ ಬಸವರಾಜ ಬೊಮ್ಮಾಯಿ ಯಾಕೆ ಹಾಗೆ ಹೇಳುತ್ತಿದ್ದರು? ವಕ್ಫ್ ಇರಲಿ, ಮುಜರಾಯಿ ಇರಲಿ ಎಲ್ಲವೂ ದೇವರ ಆಸ್ತಿ. ಮುಜರಾಯಿ ಇಲಾಖೆಯದ್ದು 36 ಸಾವಿರ ಎಕರೆ ಇದೆ. ಅದರಲ್ಲೂ 800 ಎಕರೆ ಅತಿಕ್ರಮಣವಾಗಿದೆ. ಇದನ್ನು ಬಿಜೆಪಿಯ ಬಸವರಾಜ ಬೊಮ್ಮಾಯಿಯವರೇ ಹೇಳಿಕೆ ನೀಡಿದ್ದಾರೆ. ಅವರು ಸಿಎಂ ಇದ್ದಾಗಲೇ ಈ ವಿಚಾರವಾಗಿ ಹೇಳಿದ್ದಾರೆ ಎಂದು ಜಮೀರ್‌ ತಿಳಿಸಿದರು.

Share this article