ಕಿತ್ತೂರಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ

KannadaprabhaNewsNetwork |  
Published : Oct 24, 2025, 01:00 AM IST

ಸಾರಾಂಶ

ಬಂಗಾರಪ್ಪನವರ ಕಾಲದಲ್ಲಿ ಚಿಕ್ಕದಾಗಿ ಆರಂಭವಾದ ಕಿತ್ತೂರು ಉತ್ಸವ ಈಗ ನಾಡಿನ ಗಮನ ಸೆಳೆಯುತ್ತಿದೆ. ಚನ್ನಮ್ಮನ ಹೋರಾಟ ಆದರ್ಶಗಳನ್ನು ಅಳವಡಿಸಿಕೊಂಡು, ಚನ್ನಮ್ಮನ ಹೋರಾಟ ದಿಲ್ಲಿಯವರೆಗೆ ಕೇಳಬೇಕು. ಆ ರೀತಿ‌ ಕಾರ್ಯಕ್ರಮ ಆಯೋಜನೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮನ ಕಿತ್ತೂರು

ಬಂಗಾರಪ್ಪನವರ ಕಾಲದಲ್ಲಿ ಚಿಕ್ಕದಾಗಿ ಆರಂಭವಾದ ಕಿತ್ತೂರು ಉತ್ಸವ ಈಗ ನಾಡಿನ ಗಮನ ಸೆಳೆಯುತ್ತಿದೆ. ಚನ್ನಮ್ಮನ ಹೋರಾಟ ಆದರ್ಶಗಳನ್ನು ಅಳವಡಿಸಿಕೊಂಡು, ಚನ್ನಮ್ಮನ ಹೋರಾಟ ದಿಲ್ಲಿಯವರೆಗೆ ಕೇಳಬೇಕು. ಆ ರೀತಿ‌ ಕಾರ್ಯಕ್ರಮ ಆಯೋಜನೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಕಿತ್ತೂರಿನ ಕೋಟೆ ಆವರಣದ ಕಿತ್ತೂರು ರಾಣಿ ಚನ್ನಮ್ಮ ವೇದಿಕೆಯಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಹಯೋಗದಲ್ಲಿ ಜರುಗಿದ 201ನೇ ವರ್ಷದ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ನಮ್ಮ ಸರ್ಕಾರ ಬಂದ ಮೇಲೆ ಕಿತ್ತೂರು‌ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಲೊಕೋಪಯೋಗಿ ಇಲಾಖೆಯಿಂದ‌ ಪ್ರತಿವರ್ಷ ಕಿತ್ತೂರಿನ ಅಭಿವೃದ್ಧಿ ಕೆಲಸಗಳಿಗೆ ₹5 ಕೋಟಿ ಅನುದಾನ ನೀಡಲಾಗುತ್ತಿದೆ. 3ನೇ ವರ್ಷವೂ ಅನುದಾನ ನೀಡಲಾಗುವುದು. ಕಿತ್ತೂರಿನ‌ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಕಾರ್ಯಕ್ರಮದ ಮೂಲಕ‌ ಅನೇಕ ಸ್ಥಳೀಯ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಪ್ರತಿಭಾವಂತ ಕಲಾವಿದರ ಉತ್ಸವದ ವೇದಿಕೆ ಸದ್ಬಳಕೆ‌ ಮಾಡಿಕೊಳ್ಳಬೇಕು. ಉತ್ಸವದ ಯಶಸ್ಸಿಗೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 3 ದಿನಗಳ ಕಾಲ ಉತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.ಸಂಸದ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಮಾತನಾಡಿ, ಚನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ ಸೇರಿದಂತೆ ನಾಡಿನ ಅನೇಕ ಮಹಿಳೆಯರ ಹೋರಾಟದ ಭವ್ಯ ಇತಿಹಾಸವನ್ನು ನಾವು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು. ಚನ್ನಮ್ಮನವರ ಹೋರಾಟ, ಆಡಳಿತ ನಮಗೆ ಪ್ರೇರಣೆ ಹಾಗೂ ಮಾರ್ಗದರ್ಶಿಯಾಗಿದೆ. ಸ್ವತಂತ್ರ‌ ಭಾರತದ ನಿರ್ಮಾಣದಲ್ಲಿ ಮಹಿಳಾ ಹೋರಾಟಗಾರ್ತಿಯರ ಕೊಡುಗೆ ಅಪಾರ ಎಂದು ಸ್ಮರಿಸಿದರು.200 ವರ್ಷಗಳ‌ ಹಿಂದೆ ಜರುಗಿದ ಯುದ್ಧವನ್ನು ನಾವೆಲ್ಲ‌ ಸ್ಮರಿಸಬೇಕು. ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮಳನ್ನು ನಾವು ಸ್ಮರಿಸಬೇಕು. ನಮ್ಮ‌ ನಾಡನ್ನು ಕಟ್ಟಲು‌ ಮಹಿಳೆಯರು ಸದಾ ಮುಂದಾಗಿರುತ್ತಾರೆ. ನಮ್ಮ‌ ನಾಡಿನ‌ ಬಗ್ಗೆ ನಾವು ಹೆಮ್ಮೆ‌ ಪಡಬೇಕು. ಪುರುಷ ಪ್ರಧಾನ‌ ಸಮಾಜದಲ್ಲಿ ಅನೇಕ‌ ಮಹಿಳೆಯರು‌ ನಾಡನ್ನು ಕಟ್ಟಲು ತಮ್ಮ ಕೊಡುಗೆ ನೀಡಿರುವುದನ್ನು ನಾವು ಇತಿಹಾಸದ ಮೂಲಕ ತಿಳಿಯಬಹುದಾಗಿದೆ. ಸರ್ವ ವಿದ್ಯೆಯಲ್ಲಿ‌ ಚನ್ನಮ್ಮ ಪ್ರಾವೀಣ್ಯತೆ ಹೊಂದಿದ್ದಳು. ಅದೇ ರೀತಿ ಇಂದಿನ ಮಹಿಳೆಯರು ಚನ್ನಮ್ಮನ‌ ಸ್ಫೂರ್ತಿಯೊಂದಿಗೆ ಮುನ್ನಡೆಯಲು ಸಲಹೆ ನೀಡಿದರು.ನಮ್ಮ ನಾಡಿನ ಅನೇಕ ವೀರರು ತ್ಯಾಗ ಬಲಿದಾನದ‌ ಮೂಲಕ ಬೆಳೆಸಿದ ಈ‌ ನಾಡನ್ನು ಬೆಳೆಸುವುದು ನಮ್ಮೆಲ್ಲರ‌ ಜವಾಬ್ದಾರಿಯಾಗಿದೆ. ಹಿಂದಿನ ನಾಯಕರು ಇಂದಿನ ನಾಯಕರು ಪ್ರಜೆಗಳ‌ ಹಿತ‌ ಕಾಯುವ ಕಾರ್ಯ‌ ಮಾಡಬೇಕು. ದೇಶದ ಏಕತೆ,‌ ಅಖಂಡತೆ ಕಾಪಾಡಿಕೊಳ್ಳುವ ಸಂಕಲ್ಪ ತೊಟ್ಟು ದೇಶಾಭಿಮಾನ ಹೊಂದಬೇಕು ಎಂದರು.ಕಿತ್ತೂರು ವಿಧಾನ ಸಭಾ ಮತಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಮ್ಮನ‌ ಇತಿಹಾಸವನ್ನು ಹೊಸ ಪೀಳಿಗೆಗೆ ಅರ್ಥವಾಗುವ ರೀತಿ ತಿಳಿಸುವ ಕಾರ್ಯವಾಗಬೇಕು.‌ ಕಿತ್ತೂರು ಸ್ವಾಭಿಮಾನದ ನಾಡಾಗಿದೆ. ಕಿತ್ತೂರಿನ ಇತಿಹಾಸವನ್ನು ಅರಿಯ ಬೇಕಾದರೆ ಅಭಿವೃದ್ದಿ ಕಾರ್ಯಗಳು ಆಗಬೇಕು ಎಂದು ತಿಳಿಸಿದರು.ವಿಧಾನ‌ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಚನ್ನಮ್ಮನ ಇತಿಹಾಸವನ್ನು ಸ್ಮರಿಸುವ ಉದ್ದೇಶದೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರು ಮನೆಯಿಂದ‌ ಹೊರ ಬರದಂತಹ‌ ಕಾಲದಲ್ಲಿ ರಾಣಿ ಚನ್ನಮ್ಮ ಆಂಗ್ಲರ‌ ವಿರುದ್ಧ ಹೊರಾಡುವುದರ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಚನ್ನಮ್ಮನ ಪರಾಕ್ರಮ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಚನ್ನಮ್ಮನ ಕಥೆಯನ್ನು‌ ಮುಂದಿನ ಪೀಳಿಗೆಗೆ ತಿಳಿಯ ಪಡಿಸುವ ಕಾರ್ಯವಾಗಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ‌ ಇನ್ನೂ ಹೆಚ್ಚಿನ‌ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.ವಿಧಾನ‌ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಚನ್ನಮ್ಮಾಜಿ ಅವರು ಬ್ರಿಟಿಷರ ವಿರುದ್ಧ‌ ಸ್ವಾಭಿಮಾನದ ಹೋರಾಟವನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯವನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ಚನ್ನಮ್ಮನ ಕುರಿತು‌ ಇನ್ನೂ ಹೆಚ್ಚಿನ‌ ಸಂಶೋಧನೆಗಳು ಆಗಬೇಕು ಎಂದರು.ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಮಾತನಾಡಿದರು. ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಬಸವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ‌ ಅಧ್ಯಕ್ಷ ಭರಮಣ್ಣ ಉಪ್ಪಾರ, ಕಿತ್ತೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಸಿದ್ರಾಮ ಮಾರಿಹಾಳ, ವಾ.ಕ.ಸಾ.ಸಂಸ್ಥೆ ಉಪಾಧ್ಯಕ್ಷರಾದ ಸುನೀಲ‌ ಹನುಮಣ್ಣವರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ, ಜಿಲ್ಲಾ‌ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಕನ್ನಡ‌ ಮತ್ತು ಸಂಸ್ಕೃತಿ‌ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರವೀಣ ಜೈನ್ ಸ್ವಾಗತಿಸಿದರು. ರಾಜೇಶ್ವರಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.ನಮ್ಮ ಶಕ್ತಿ ಮರೆತರೆ ವಿದೇಶಿ ಶಕ್ತಿಗಳು ದಾಳಿ ಮಾಡುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ದೇಶ ಮೊದಲು ಎಂಬ ಸಂಕಲ್ಪದೊಂದಿಗೆ ಮುಂದುವರಿಯಬೇಕಿದೆ. ಸ್ವದೇಶಿ ಚಿಂತನೆ ಜಾಗೃತಿಗೊಳಿಸಬೇಕಿದ್ದು, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ದೇಶ ಬಲಪಡಿಸಬೇಕಿದೆ. ಕಿತ್ತೂರಿನ ಅಭಿವೃದ್ಧಿಗೆ ಬದ್ಧರಾಗಿದ್ದು, ಒಬ್ಬ ಸಂಸದರಾಗಿ ಸದಾ ಸಿದ್ಧನಾಗಿರುತ್ತೇನೆ.

-ವಿಶ್ವೇಶ್ವರಯ್ಯ ಹೆಗಡೆ, ಸಂಸದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ