ಜಿಲ್ಲಾದ್ಯಂತ ಕ್ರಿಸ್ ಮಸ್ ಆಚರಣೆಗೆ ಭರದ ಸಿದ್ಧತೆ

KannadaprabhaNewsNetwork | Published : Dec 25, 2023 1:32 AM

ಸಾರಾಂಶ

ರಾಮನಗರ: ನಗರದ ಸೇರಿದಂತೆ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರಿಂದ ಕ್ರಿಸ್ ಮಸ್ ಹಬ್ಬದ ಆಚರಣೆಗೆ ಭರದ ಸಿದ್ಧತೆಗಳು ನಡೆದಿದೆ.

ರಾಮನಗರ: ನಗರದ ಸೇರಿದಂತೆ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರಿಂದ ಕ್ರಿಸ್ ಮಸ್ ಹಬ್ಬದ ಆಚರಣೆಗೆ ಭರದ ಸಿದ್ಧತೆಗಳು ನಡೆದಿದೆ.

ಜಿಲ್ಲಾ ಕೇಂದ್ರ ರಾಮನಗರದ ಲೂರ್ದು ಮಾತಾ ಚರ್ಚ್ ಸೇರಿ ಜಿಲ್ಲೆಯ ಎಲ್ಲ ಚರ್ಚ್‌ಗಳು ದೀಪಗಳಿಂದ ಅಲಂಕಾರಗೊಂಡಿವೆ. ಗೊದಲಿ ಮತ್ತು ಕ್ರಿಸ್‌ಮಸ್ ಟ್ರೀಗಳನ್ನು ಸಿಂಗಾರ ಮಾಡಿರುವ ಮನೆಗಳು ಕಂಗೊಳಿಸುತ್ತಿವೆ.

ಅಲ್ಲದೆ, ಕ್ರೈಸ್ತರ ಮನೆಗಳಲ್ಲಿ ಸಂಭ್ರಮದ ಕ್ರಿಸ್ ಮಸ್ ಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಮನೆಗಳಲ್ಲಿ ಗೊದಲಿ (ಕ್ರಿಸ್ತನು ಹುಟ್ಟಿದ ದನದ ಕೊಟ್ಟಿಗೆಯ ಸುಂದರ ಪ್ರತಿಕೃತಿ) ನಿರ್ಮಿಸಿ ಕ್ರಿಸ್ ಮಸ್ ಟ್ರೀ ಅನ್ನು ತಂದು ಇಡಲಾಗಿದೆ. ಇವುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಕ್ರಿಸ್‌ಮಸ್ ಎಂದರೆ ಕ್ರಿಸ್ತನ ಆರಾಧನೆ ಎಂದರ್ಥ. ಇದು ಕ್ರಿಶ್ಚಿಯನ್ನರ ಪ್ರಮುಖ ಹಬ್ಬ. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಈ ಹಬ್ಬದ ಧ್ಯೇಯ. ಕ್ರಿಸ್‌ಮಸ್ ಎಂದ ತಕ್ಷಣ ಕ್ರಿಸ್‌ಮಸ್ ಟ್ರೀ, ಕೇಕ್, ಸಾಂತಾಕ್ಲಾಸ್, ಶುಭ ಸಂಕೇತದ ಗಂಟೆ,

ಕ್ರಿಶ್ಚಿಯನ್ನರ ಮನೆಗಳಲ್ಲಿ ಸಿಂಗರಿಸುವ ಕ್ರಿಬ್‌ಗಳೇ ನೆನಪಿಗೆ ಬರುತ್ತವೆ.

ಮನೆ ಮನೆಗಳಲ್ಲಿ ಕ್ರಿಬ್ ಅಲಂಕಾರ :

ದೇವರ ಪುತ್ರನಾದ ಏಸು ತನ್ನ ದರ್ಶನ ಎಲ್ಲರಿಗೂ ಸಿಗಲಿ ಎಂದು ಗೊದಲಿಯಲ್ಲಿ (ಕೊಟ್ಟಿಗೆ) ಜನಿಸುತ್ತಾನೆ. ಇದನ್ನು ನೆನಪಿಸಿಕೊಳ್ಳುವ ಸಲುವಾಗಿ ಕ್ರಿಶ್ಚಿಯನ್ನರು ತಮ್ಮ ಮನೆಗಳಲ್ಲಿ ಗೊದಲಿಯ ಮಾದರಿಯನ್ನು ನಿರ್ಮಾಣ ಮಾಡಿ, ಅದರಲ್ಲಿ ಚಿಕ್ಕ ಚಿಕ್ಕ ಕುರಿಗಳ ಆಟಿಕೆಗಳನ್ನಿಟ್ಟು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುತ್ತಾರೆ.

ಕ್ರಿಸ್ ಮಸ್ ಆಚರಣೆಯ ಮುಂಚೆ ಕ್ಯಾರೋಲ್ ಮಾಡಲಾಗುತ್ತದೆ. ಕ್ರಿಸ್‌ಮಸ್‌ಗಿಂತ ಹಲವು ದಿನಗಳ ಮೊದಲೇ ಆರಂಭವಾಗುವ ಈ ಒಂದು ಸಂಪ್ರದಾಯದಲ್ಲಿ ಯುವಕರ ಗುಂಪುಗಳು ತಮ್ಮ ಪ್ರದೇಶದ ಮನೆಮನೆಗೂ ಕ್ಯಾರೋಲ್‌ಗಳನ್ನು (ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್‌ಮಸ್ ಹಾಡುಗಳು) ಹಾಡುತ್ತಾ ತೆರಳಿ ಈ ಸಂಭ್ರಮದ ಹಬ್ಬದ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾರೆ.

ಕ್ರಿಸ್‌ಮಸ್ ಸಂದರ್ಭದಲ್ಲಿ ಮನೆಗಳಲ್ಲಿ ನಕ್ಷತ್ರಗಳನ್ನು ಯಾಕೆ ತೂಗಿ ಹಾಕುತ್ತಾರೆ ಎನ್ನುವುದಕ್ಕೂ ಒಂದು ಕಥೆಯಿದೆ. ಕ್ರಿಸ್ತನ ಜನನವಾದಾಗ ಕ್ರಿಸ್ತನನ್ನು ಕಂಡು ಆರಾಧಿಸಲು ದೂರದ ದೇಶಗಳಿಂದ ಮೂವರು ಪಂಡಿತರು ಬರುತ್ತಾರೆ. ಆದರೆ ಅವರಿಗೆ ಕ್ರಿಸ್ತನ ಜನನದ ಸ್ಥಳ ತಿಳಿದಿರುವುದಿಲ್ಲ. ಆಗ ಬಾನಿನಲ್ಲಿ ಉದಯಿಸಿದ ನಕ್ಷತ್ರವು ಅವರ ಮುಂದೆ ಮುಂದೆ ಸಾಗಿ ಕ್ರಿಸ್ತನ ಜನನದ ಸ್ಥಳವನ್ನು ತೋರಿಸುತ್ತದೆ. ಅದರ ಸಂಕೇತವಾಗಿ ಕ್ರಿಸ್‌ಮಸ್ ಹಬ್ಬದಂದು ಎಲ್ಲರ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿಹಾಕುತ್ತಾರೆ. ಪ್ರತಿ ಮನೆಯಲ್ಲಿಯೂ ಶಾಂತಿ ಪ್ರೀತಿಯ ಕ್ರಿಸ್ತ ಜನಿಸಿದ್ದಾನೆ ಎನ್ನುವುದು ಇದರ ಅರ್ಥ ಎಂದು ಸಂತ ಲೂರ್ದು ಮಾತೆ ಚರ್ಚ್ ನ ಫಾದರ್ ಭಾಸ್ಕರ್ ವಿವರಿಸಿದರು.ಬಾಕ್ಸ್ .............

ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಎಲ್ಲಾ ಚರ್ಚ್‌ಗಳಲ್ಲಿ ಭಾನುವಾರ ರಾತ್ರಿ 11.30ಕ್ಕೆ ಕ್ಯಾರಿಯಲ್ ಸಿಂಗಿಂಗ್ ನಡೆಯಲಿದ್ದು, 11.45ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಸಂಭ್ರಮಾಚರಣೆ ಆರಂಭಗೊಳ್ಳುತ್ತದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

ಆನಂತರ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚಿ ಹಬ್ಬಆಚರಿಸುವುದು ಪದ್ಧತಿ. ಹೊಸ ಜೀವನ, ಹೊಸ ವರ್ಷ ಕ್ರಿಸ್ತನ ಪ್ರೀತಿ ಕರುಣೆಯ ನೆರಳಲ್ಲಿ ಪುನಃ ತೆರೆದುಕೊಳ್ಳುತ್ತದೆ. ಡಿಸೆಂಬರ್ ತಿಂಗಳ ಮೊದಲ ಭಾನುವಾರ ಕ್ರಿಸ್ತನ ಆಗಮನದ ಕಾಲವಾಗಿರುತ್ತದೆ. ಯೇಸುವಿನ ಬರುವಿಕೆಗಾಗಿ ಹೇಗೆ ಸಿದ್ಧರಾಗಬೇಕು. ಹೇಗೆ ಸ್ವಾಗತಿಸಬೇಕು ಎಂಬ ಚರ್ಚ್ ಎಲ್ಲರ ಮನೆಗಳಲ್ಲೂ ನಡೆಯುತ್ತದೆ. ಡಿಸೆಂಬರ್ ನ ಮೊದಲ ದಿನದಿಂದಲೇ ಶುರುವಾಗುವ ಭಜನೆ ನಡಿಗೆ ಮೂಲಕ ಕ್ರೈಸ್ತನ ಆಗಮನದ ಹಾಡುಗಳನ್ನು ಹೇಳುತ್ತಾ ಕ್ರೈಸ್ತ ಬಾಂಧವರು ಮನೆಮನೆಗೆ ಹೋಗಿ ಯೇಸುಕ್ರಿಸ್ತನನ್ನು ಸ್ವಾಗತಿಸಲು ಸಿದ್ಧರಾಗಿ ಎಂಬ ಸಂದೇಶವನ್ನು ಸಾರುತ್ತಾರೆ. ನಿಜವಾದ ಕ್ರಿಸ್ ಮಸ್ ಡಿಸೆಂಬರ್ ಮೊದಲ

ವಾರದಿಂದಲೇ ಶುರುವಾಗುತ್ತದೆ ಎಂದು ಸಂತ ಲೂರ್ದು ಮಾತೆ ಚರ್ಚ್ ನ ಫಾದರ್ ಭಾಸ್ಕರ್ ಮಾಹಿತಿ ನೀಡಿದರು.

23ಕೆಆರ್ ಎಂಎನ್ 2,3.ಜೆಪಿಜಿ

2.ರಾಮನಗರದ ಸಂತ ಲೂರ್ದು ಮಾತೆ ಚಚ್ ನರ್ಲ್ಲಿ ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ಅಲಂಕಾರ ಮಾಡಿರುವುದು.

(ಮಗ್‌ಶಾಟ್‌ ಮಾತ್ರ ಸಾಕು)

3.ಸಂತ ಲೂರ್ದು ಮಾತೆ ಚರ್ಚ್ ನ ಫಾದರ್ ಭಾಸ್ಕರ್.

Share this article