- ರಾಕ್ ಡೇದಿಂದ ಹಿಡಿದು ವಿವೇಕರ ಜನ್ಮದಿನದವರೆಗೆ ವ್ರತಾಚರಣೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಯುವ ಸಮುದಾಯವನ್ನು ವ್ಯಸನ ಮುಕ್ತರನ್ನಾಗಿಸಲು, ಸದೃಢ ದೇಹವಂತರನ್ನಾಗಿಸಲು ಶ್ರೀರಾಮಕೃಷ್ಣ, ವಿವೇಕಾನಂದರ ಆಶ್ರಮ ಹಾಗೂ ಯುವ ಬ್ರಿಗೇಡ್‌ನಿಂದ "ವಿವೇಕ ಮಾಲಾಧಾರಣೆ " ಕಾರ್ಯಕ್ರಮ ಇದೀಗ ಯುವಕರನ್ನು ಸೆಳೆಯುತ್ತಿದೆ.ಅಯ್ಯಪ್ಪ ಸ್ವಾಮಿ ಮಾಲಾಧಾರಣೆ, ಹನುಮಾನ ಮಾಲಾಧಾರಣೆ, ದತ್ತ ಮಾಲಾಧಾರಣೆ ಬಗ್ಗೆ ಜನಸಾಮಾನ್ಯರಿಗೆಲ್ಲ ಗೊತ್ತು. ಕಳೆದ ನಾಲ್ಕೈದು ವರ್ಷದ ಹಿಂದೆಯಷ್ಟೇ ಪ್ರಾರಂಭವಾಗಿರುವ "ವಿವೇಕ ಮಾಲಾಧಾರಣೆ "ಯೂ ಸಣ್ಣದಾಗಿ ಪ್ರಸಿದ್ಧಿ ಪಡೆಯುತ್ತಿದೆ. ಪ್ರತಿವರ್ಷ 1200-1500 ಜನರ ಯುವ ಸಮುದಾಯ ವಿವೇಕ ಮಾಲಾಧಾರಣೆ ಮಾಡುತ್ತಿದೆ.
ಯುವಕರ ಐಕಾನ್ ಎಂದರೆ ಸ್ವಾಮಿ ವಿವೇಕಾನಂದರು. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬುದು ವಿವೇಕರ ಘೋಷವಾಕ್ಯ. ದೇಹ ಸದೃಢವಾದರೆ ಏನನ್ನಾದರೂ ಸಾಧಿಸಬಹುದು ಎಂಬುದು ವಿವೇಕರ ಸಂದೇಶಗಳಲ್ಲೊಂದು. ಆದರೆ, ಈಗಿನ ಯುವ ಸಮುದಾಯ ದುಶ್ಚಟಗಳಿಂದಾಗಿ ತಮ್ಮ ಆರೋಗ್ಯ ಹಾಗೂ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವೇಕರ ಸಂದೇಶ ಸರಿಯಾಗಿ ತಿಳಿಸಿಕೊಟ್ಟರೆ ಅವರ ಬದುಕಿನಲ್ಲಿ ತಾನಾಗಿಯೇ ಬದಲಾವಣೆಯಾಗುತ್ತದೆ.
ಬೇರೆ ಬೇರೆ ದೇವರ ಮಾಲಾಧಾರಣೆಯಂತೆ ಕಟ್ಟುನಿಟ್ಟಿನ ನಿಯಮಗಳೇನೂ ಇರುವುದಿಲ್ಲ. ಯಾವುದೇ ಬಗೆಯ ವಸ್ತ್ರ ಸಂಹಿತೆಯೂ ಇರುವುದಿಲ್ಲ. ಆಹಾರ ಪದ್ಧತಿಯೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಬಹುದು. ಇಲ್ಲಿ ಮಾಲಾಧಾರಣೆ ಎಂದರೆ ಬರೀ ವಿವೇಕಾನಂದರ ಚಿತ್ರವಿರುವ ಪೆಡೆಂಟ್ ಹಾಕಿಕೊಳ್ಳುವುದಷ್ಟೇ. ಆದರೆ ಪ್ರತಿನಿತ್ಯ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎಳಬೇಕು. ಯೋಗಾಸನ, ಪ್ರಾಣಾಯಾಮ, ವ್ಯಾಯಾಮಗಳನ್ನು ತಪ್ಪದೇ ಮಾಡಬೇಕು. ಆನಂತರ ಅವರಿಗೆ ಯಾವಾಗ ಸಮಯ ಸಿಗುತ್ತದೆಯೋ ಆ ಸಮಯದಲ್ಲಿ ಕನಿಷ್ಠ ಒಂದು ಗಂಟೆ ಕಾಲ ವಿವೇಕರ ಕುರಿತು ಅಧ್ಯಯನ ಮಾಡಬೇಕು. ಇಷ್ಟೇ ಇಲ್ಲಿನ ನಿಯಮ. ಉಳಿದಂತೆ ಅವರು ಮನಸಿಗೆ ಬಂದಿದ್ದನ್ನು ಊಟ ಮಾಡಬಹುದು. ಬೇಕಾದ ಬಟ್ಟೆ ಧರಿಸಬಹುದು.
ಬರೀ ನಾಲ್ಕೈದು ವರ್ಷದ ಹಿಂದೆ ಈ ಮಾಲಾಧಾರಣೆ ಶುರುವಾಗಿದೆ. ಮೊದಲು ಕೆಲವರು ಮಾತ್ರ ಈ ವ್ರತಾಚರಣೆ ಮಾಡುತ್ತಿದ್ದರು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ಎರಡು ವರ್ಷದ ಹಿಂದೆ ರಾಜ್ಯದಲ್ಲಿ 700 ಜನ ಮಾಲಾಧಾರಣೆ ಮಾಡಿದ್ದರು. ಕಳೆದ ವರ್ಷ 1200 ಯುವಕರು ಮಾಲಾಧಾರಣೆ ಮಾಡಿದ್ದರು. ಈ ವರ್ಷ ಈ ಸಂಖ್ಯೆ 1500ಕ್ಕೂ ಅಧಿಕ ಆಗುವ ಸಾಧ್ಯತೆ ಇದೆ ಎಂಬುದು ಯುವ ಬ್ರಿಗೇಡ್‌ನ ಅಂಬೋಣ.
ಇನ್ನು ಫೆ. 22ರಂದು ಶಾರದಾಮಾತೆಯ ಜನ್ಮದಿನ. ಈ ಹಿನ್ನೆಲೆಯಲ್ಲಿ ಅದನ್ನು 25ರಂದು ನಡೆಯುವ ವಿವೇಕ ಮಾಲಾಧಾರಣೆ ವೇಳೆ ಯೋಧರ ತಾಯಿಂದಿರರ ಪಾದಪೂಜೆ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಇಂದು ವಿವೇಕಮಾಲಾಧಾರಣೆ
ವಿವೇಕಾಮಾಲಾ ಧಾರಣೆಯನ್ನು ಪ್ರತಿವರ್ಷ ಡಿ. 25ಕ್ಕೆ ಮಾಡಲಾಗುತ್ತಿದೆ. ಮಾಲೆ ಧರಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಬೆಳಗ್ಗೆ ವ್ಯಾಯಾಮ, ಯೋಗಾಸನ, ಪ್ರಾಣಾಯಮ, ಧ್ಯಾನ ಮಾಡುವುದು. ಆಹಾರಕ್ಕೆ ಯಾವುದೇ ನಿರ್ಬಂಧವಿಲ್ಲ. ವಿವೇಕರ ಸಾಹಿತ್ಯ ಅಧ್ಯಯನ ಮಾಡಬೇಕಷ್ಟೇ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಪ್ರಶಾಂತ ಸುತಾರ ತಿಳಿಸಿದ್ದಾರೆ.