ಭದ್ರಿಸ್ವಾಮಿಗಳ ಸಮ್ಮುಖದಲ್ಲಿ ದತ್ತ ಮಾಲೆ ಧರಿಸಿ ದತ್ತ ಜಯಂತಿಗೆ ತೆರಳಲು ಸಿದ್ಧತೆ
ಕನ್ನಡಪ್ರಭ ವಾರ್ತೆ, ಕಡೂರುಬರುವ ಮಂಗಳವಾರ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ತೆರಳಲಿದ್ದಾರೆ ಎಂದು ದತ್ತಮಾಲಾ ಅಭಿಯಾನದ ಜಿಲ್ಲಾ ಪ್ರಮುಖ್ ಕಡೂರು ಎ.ಮಣಿ ತಿಳಿಸಿದರು. ಪಟ್ಟಣದ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಭದ್ರಿಸ್ವಾಮಿಗಳ ಸಮ್ಮುಖದಲ್ಲಿ ಭಾನುವಾರ ದತ್ತ ಮಾಲೆ ಧರಿಸಿ ದತ್ತ ಜಯಂತಿಗೆ ತೆರಳಲು ಸಿದ್ಧತೆ ನಡೆಯುತ್ತಿರುವ ಕುರಿತು ಮಾತನಾಡಿದರು. ಕಳೆದ 25 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತ ಜಯಂತಿ, ದತ್ತಮಾಲೆ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಭಕ್ತರು ಭಾಗವಹಿಸುತ್ತಿದ್ದಾರೆ ಎಂದರು. ದತ್ತಪೀಠದಲ್ಲಿ ತ್ರಿಕಾಲ ಪೂಜೆ ನಡೆಯಬೇಕು, ಪ್ರತಿನಿತ್ಯ ಪೀಠಕ್ಕೆ ಬರುವ ಭಕ್ತರಿಗೆ ದತ್ತ ಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಪೀಠದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಕರ್ನಾಟಕದ ಅಯೋಧ್ಯೆಯಾಗಿ ದತ್ತಪೀಠ ಅಭಿವೃದ್ಧಿಯಾಗಬೇಕು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದಂತೆ ಇಲ್ಲಿನ ದತ್ತಪೀಠಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ದೊರಕಲಿದ್ದು, ರಾಜ್ಯದ ಅಯೋಧ್ಯೆಯಾಗಿ ಪರಿವರ್ತನೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.ಪ್ರತೀ ವರ್ಷದಂತೆ ದತ್ತ ಜಯಂತಿಯಲ್ಲಿ ಪ್ರಸಾದ ವಿನಿಯೋಗ ಹಾಗೂ ಪೂಜಾ ಧಾರ್ಮಿಕ ಕಾರ್ಯಗಳು ನಡೆಯಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ಕಾನೂನಿನಂತೆ ಧಾರ್ಮಿಕ ಆಚರಣೆಗೆ ಜಯಂತಿ ಆಚರಿಸುತ್ತಿದ್ದು, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‍ನ ಕಾರ್ಯಕರ್ತರು ಶಾಂತಿಪ್ರಿಯರು, ನಾವು ಶಾಂತಿಯುತವಾಗಿ ದತ್ತ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ಪೀಠಕ್ಕೆ ಬಂದು ತೆರಳುವ ಭಕ್ತರು ಶಾಂತಿಯಿಂದ ದರ್ಶನ ಪಡೆದು ತೆರಳ ಬೇಕೆಂದು ಮನವಿ ಮಾಡಿದರು.24ಕೆಕೆಡಿಯುು1.
ಕಡೂರು ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿದಿಯಲ್ಲಿ ದತ್ತ ಭಕ್ತರು ಗುರುಸ್ವಾಮಿ ಅವರಿಂದ ಎ.ಮಣಿ ಮಾಲೆ ಧರಿಸಿದರು.