ಕಾವೇರಿ ನೀರು ವಿಚಾರ : ನಾಳೆ ಸರ್ವಪಕ್ಷ ಸಭೆ

KannadaprabhaNewsNetwork | Updated : Jul 13 2024, 08:19 AM IST

ಸಾರಾಂಶ

ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶದ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಜು.14ರಂದು ಸರ್ವಪಕ್ಷ ಸಭೆ ಆಯೋಜಿಸಿದೆ.  

 ಬೆಂಗಳೂರು :  ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶದ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಜು.14ರಂದು ಸರ್ವಪಕ್ಷ ಸಭೆ ಆಯೋಜಿಸಿದೆ. ಈ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಿದೆ.

ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಗುರುವಾರ ಆದೇಶಿಸಿದೆ. ಈ ಕುರಿತಂತೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆದಿದೆ. ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಗಿದೆ. ಆದರೂ, ಸರ್ಕಾರದ ನಿರ್ಧಾರದ ಕುರಿತು ಹಾಗೂ ಮುಂದಿನ ನಡೆಯ ಬಗ್ಗೆ ಕೇಂದ್ರ ಸಚಿವರು, ಸಂಸದರು, ಶಾಸಕರೊಂದಿಗೆ ಚರ್ಚಿಸಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಸಭೆಯಲ್ಲಿ ನೀರಿನ ಕೊರತೆ, ಕಾವೇರಿ ನೀರು ಬಿಡುಗಡೆಯನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.

ಸಚಿವರ ಹಾಗೂ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಿದೆ. ಆದರೂ, ಕಾವೇರಿ ಕೊಳ್ಳದ ಜಲಾಶಯಗಳಿಗೆ ಶೇ. 28ರಷ್ಟು ಒಳಹರಿವಿನ ಕೊರತೆಯಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟವಾಗಲಿದೆ. ಈ ಕುರಿತಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೂ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಜತೆಗೆ ಜುಲೈ ಅಂತ್ಯದವರೆಗೆ ಯಾವುದೇ ತೀರ್ಮಾನ ಮಾಡದಂತೆಯೂ ಸಮಿತಿಗೆ ಈ ಹಿಂದೆಯೇ ಮನವಿ ಮಾಡಿದ್ದೆವು. ಆದರೂ, ಜುಲೈ 12ರಿಂದ ಪ್ರತಿದಿನ 1 ಟಿಎಂಸಿ ನೀರು ಬಿಡುಗಡೆಗೆ ಸಮಿತಿ ಸೂಚಿಸಿದೆ. ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲಾಗುವುದು. ಆ ಬಗ್ಗೆ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.

ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಹಾಗೂ ರಾಜ್ಯದ ಮುಂದಿನ ನಡೆಯ ಕುರಿತಂತೆ ಚರ್ಚಿಸಲು ಮತ್ತು ಅಭಿಪ್ರಾಯ ಸಂಗ್ರಹಿಸಲು ಜು. 14ರಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ನಡೆಸಲಾಗುವುದು. ಕಾವೇರಿ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಗ್ಗಟ್ಟಾಗಿದ್ದೇವೆ. ಆದ್ದರಿಂದ ಸರ್ವಪಕ್ಷ ಸಭೆ ನಡೆಸಲಾಗುತ್ತಿದೆ. ಕೇಂದ್ರ ಸಚಿವರು, ಕಾವೇರಿ ಕೊಳ್ಳ ವ್ಯಾಪ್ತಿಯ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಹಾಗೂ ಶಾಸಕರನ್ನು ಸಭೆಗೆ ಆಹ್ವಾನಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಹೇಳಿದರು.

ಕಾವೇರಿ ಜಲಾನಯನ ಪ್ರದೇಶದ ಎಲ್ಲ 4 ಜಲಾಶಯಗಳಲ್ಲಿ ಒಟ್ಟು 60 ಟಿಎoಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅoತ್ಯದವರೆಗೆ ಯಾವುದೇ ತೀರ್ಮಾನ ಮಾಡದಂತೆಯೂ ಸಮಿತಿಗೆ ಮನವಿ ಮಾಡಿದ್ದೇವೆ. ಸದ್ಯ ತಮಿಳುನಾಡಿನ ಬಿಳಿಗುಂಡ್ಲುವಿಗೆ ಕಬಿನಿ ಅಣೆಕಟ್ಟಿನ ಒಳಹರಿವಿನಷ್ಟು ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಎಚ್‌. ಮುನಿಯಪ್ಪ, ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ ಇತರರಿದ್ದರು.

ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದೇವೆ: ಡಿಕೆಶಿ

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಆಣೆಕಟ್ಟುಗಳಲ್ಲಿ ಸುಮಾರು 19 ಟಿಎಂಸಿಯಷ್ಟು ನೀರಿನ ಕೊರತೆಯಿದೆ. ಸದ್ಯ ಸರಾಸರಿ ಶೇ. 62ರಷ್ಟು ಮಾತ್ರ ನೀರಿನ ಲಭ್ಯತೆಯಿದ್ದು, ಶೇ. 28ರಷ್ಟು ನೀರಿನ ಕೊರತೆಯಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶ ಪಾಲನೆ ಕಷ್ಟವಾಗಲಿದೆ. ಸದ್ಯ ಕಬಿನಿ ಜಲಾಶಯವು ಶೇ. 96ರಷ್ಟು ಭರ್ತಿಯಾಗಿದ್ದು, ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಕುರಿತಂತೆ ರಾಜ್ಯದ ಪರ ವಕೀಲರಾದ ಮೋಹನ್‌ ಕಾತರಕಿ, ಶ್ಯಾಮ್‌ ದಿವಾನ್‌ ಅವರ ಬಳಿಯಲ್ಲೂ ಮಾತನಾಡಿದ್ದು, ಅವರು ಸಲಹೆಗಳನ್ನು ನೀಡಿದ್ದಾರೆ. ಜತೆಗೆ ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನಾಧರಿಸಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Share this article