ಕನ್ನಡಪ್ರಭ ವಾರ್ತೆ ಹೊಸಕೋಟೆ
ಏಪ್ರಿಲ್ 26ರಂದು ನಡೆಯಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಕಿಶನ್ ಕಲಾಲ್ ತಿಳಿಸಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ಚುನಾವಣೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 293 ಮತಗಟ್ಟೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 49, ನಗರ ಪ್ರದೇಶಗಳಲ್ಲಿ 244 ಮತಗಟ್ಟೆಗಳನ್ನು ಹೊಂದಿದೆ. ಇನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 117821 ಪುರುಷ ಮತದಾರರು, 119687 ಮಹಿಳಾ ಮತದಾರರು, ಇತರೆ 21 ಮತದಾರರು ಸೇರಿದಂತೆ ಒಟ್ಟು 237529 ಮತದಾರರಿದ್ದಾರೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 90855 ಪುರುಷ ಮತದಾರರು, 92338 ಮಹಿಳಾ ಮತದಾರರು, 21 ಇತರೆ ಮತದಾರರು ಇದ್ದಾರೆ. ನಗರ ಪ್ರದೇಶದಲ್ಲಿ 26966 ಪುರುಷ ಮತದಾರರು, 27349 ಮಹಿಳಾ ಮತದಾರರು ಇದ್ದಾರೆ. ಅಷ್ಟೇ ಅಲ್ಲದೆ ಈ ಬಾರಿ 6710 ಯುವ ಮತದಾರರಿದ್ದು 3652 ಪುರುಷ ಮತದಾರರು, 3058 ಮಹಿಳಾ ಮತದಾರರು ಒಳಗೊಂಡಿದ್ದಾರೆ ಎಂದರು.ಹಾಗೆಯೇ 2396, 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿದ್ದು 1138 ಪುರುಷ ಮತದಾರರು, 1258 ಮಹಿಳಾ ಮತದಾರರು ಇದ್ದಾರೆ ಎಂದರು.
ಇನ್ನು ಚುನಾವಣೆ ಸಂಬಂಧವಾಗಿ ಯಾವುದೇ ರೀತಿಯ ದೂರುಗಳಿದ್ದರೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 080 27931237, ಬೆಂಗಳೂರು ಗ್ರಾಮಾಂತರ ಕಂಟ್ರೋಲ್ ರೂಮ್ 080 29902025 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಚುನಾವಣಾ ಕ್ರಮ ತಡೆಗಟ್ಟಲು ಕ್ರಮ:
ಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂಲಿಬೆಲೆ, ಬೆಂಡಿಗನಹಳ್ಳಿ, ಇಂಡಿಗನಾಳ, ರಾಮಸಂದ್ರ ಗೇಟ್, ಕಟ್ಟಿಗೆನಹಳ್ಳಿ, ಬಾಗೂರು, ಹೊಸಕೋಟೆ ಟೋಲ್ ಪ್ಲಾಜಾ ಬಳಿ ಒಟ್ಟು ಏಳು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಚೆಕ್ ಪೋಸ್ಟ್ ನಲ್ಲಿ ತಲಾ ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ತಾಲೂಕಿನಲ್ಲಿ ಸೂಲಿಬೆಲೆ ಹೋಬಳಿ ನಂದಗುಡಿ ಹೋಬಳಿ ಜಡಗೇನಹಳ್ಳಿ ಹೋಬಳಿ, ಕಸಬಾ ಹೋಬಳಿ ಅನುಗೊಂಡನಹಳ್ಳಿ ಹೋಬಳಿ ಹೊಸಕೋಟೆ ಟೌನ್ ಒಟ್ಟು ಆರು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದ್ದು ಪ್ರತಿ ತಂಡದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಎಂದರು.