ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಎಚ್.ಟಿ.ಮಂಜು ಅಭಿಮಾನಿಗಳ ನೇತೃತ್ವದಲ್ಲಿ ಎಚ್ ಟಿಎಂ ಸಂಭ್ರಮೋತ್ಸವದ ಹೆಸರಿನಲ್ಲಿ ಜೆಡಿಎಸ್ ಅಭಿಮಾನಿಗಳ ಮಹಾ ಸಂಗಮ ನಡೆಯಲಿದೆ.
ಶಾಸಕರ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರೇ ಸ್ವಯಂ ಸಂಘಟಿತರಾಗಿ ಸಂಘಟಿಸಿ ಪುರಸಭಾ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿದ್ದಾರೆ. ಮಳೆ ಗಾಳಿಯಿಂದ ತೊಂದರೆಯಾಗದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಜರ್ಮನ್ ಪೆಂಡಾಲ್ ಹಾಕಿ ಅನುಕೂಲ ಕಲ್ಪಿಸಲಾಗಿದೆ. ಅಲ್ಲದೇ, ಸುಮಾರು 25 ಸಾವಿರ ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟದ ತಯಾರಿ ಮಾಡಲಾಗಿದೆ.ಪಟ್ಟಣದ ಪ್ರವಾಸಿ ಮಂದಿರ ವೃತ್ತ ಸೇರಿದಂತೆ ಎಲ್ಲಾ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಜಿಲ್ಲೆಯ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ನಾಯಕರು, ಸ್ಥಳೀಯ ಮುಖಂಡರ ಭಾವಚಿತ್ರಗಳ ಫ್ಲೆಕ್ಸ್ ಗಳಿಂದ ರಾರಾಜಿಸುತ್ತಿವೆ.
ತಾಲೂಕಿನಾದ್ಯಂತ ಶಾಸಕರ ಹುಟ್ಟುಹಬ್ಬ ಆಚರಣೆ ಸುದ್ದಿ ಕೇಳಿ ಬರುತ್ತಿದೆ. ಹುಟ್ಟುಹಬ್ಬದ ನೆಪದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣೆಗೆ ಶಾಸಕ ಎಚ್.ಟಿ.ಮಂಜು ಪೂರ್ವ ತಯಾರಿ ಆರಂಭಿಸಿದಂತಿದೆ.