ಅದ್ಧೂರಿ ಕನಕದಾಸ ಜಯಂತ್ಯುವ ಆಚರಣೆಗೆ ಸಕಲ ಸಿದ್ಧತೆ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಡಿ. 25ರಂದು ಗಜೇಂದ್ರಗಡದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೬ನೇ ಜಯಂತ್ಯುತ್ಸವನ್ನು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಗಜೇಂದ್ರಗಡ: ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೬ನೇ ಜಯಂತ್ಯುತ್ಸವನ್ನು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹಾಲುಮತ ಸಮಾಜದ ಹಿರಿಯ ಮುಖಂಡ ವಿ.ಆರ್. ಗುಡಿಸಾಗರ ಹೇಳಿದರು.ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಗುರುವಾರ ಗಜೇಂದ್ರಗಡ, ರೋಣ ತಾಲೂಕು ಹಾಲುಮತ ಸಮಾಜದಿಂದ ಡಿ. ೨೫ರಂದು ಇಲ್ಲಿನ ಬಾಬು ಜಗಜೀವನರಾಮ ಭವನದಲ್ಲಿ ನಡೆಯುವ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೬ನೇ ಜಯಂತ್ಯುತ್ಸವ ಆಮಂತಣ್ರ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ಡಿ. ೨೫ರಂದು ನಡೆಯುವ ಕನಕದಾಸರ ೫೩೬ನೇ ಜಯಂತ್ಯುತ್ಸವ ನಿಮಿತ್ತ ಕನಕದಾಸರ ಭಾವಚಿತ್ರ ಮೆರವಣಿಗೆಯು ಸ್ಥಳೀಯ ಗೌಳಿಗಲ್ಲಿಯ ಗರಡಿಮನಿ ಮುಂಭಾಗದಿಂದ ಆರಂಭವಾಗಲಿದ್ದು ಮೆರವಣಿಗೆಯಲ್ಲಿ ೫೦೦ ಕುಂಭ ಹೊತ್ತ ಮಹಿಳೆಯರು ಹಾಗೂ ರಾಜ್ಯದ ವಿವಿಧ ಭಾಗದ ಡೊಳ್ಳು ಕುಣಿತ ತಂಡಗಳು ಪಾಲ್ಗೊಳ್ಳಲಿದ್ದು ತಾಲೂಕು ಸೇರಿ ಸುತ್ತಲಿನ ಗ್ರಾಮಗಳಿಂದ ಅಂದಾಜು ೩ ಸಾವಿರಕ್ಕೂ ಅಧಿಕ ಜನತೆ ಆಗಮಿಸಲಿದ್ದಾರೆ ಎಂದ ಅವರು, ಹಿಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ ಗಜೇಂದ್ರಗಡ ಪಟ್ಟಣದ ಸಿಬಿಎಸ್‌ಸಿ ಶಾಲೆ ಎದುರಿನ ೨೫ ಗುಂಟೆ ಜಾಗೆಯಲ್ಲಿ ಕನಕ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿ ಕೊನೆ ಹಂತದಲ್ಲಿದೆ. ಕನಕ ಭವನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಲಿದ್ದು ಭವ್ಯವಾದ ಕನಕ ಭವನ ನಿರ್ಮಾಣ ಮಾಡಲಾಗುವುದು ಎಂದರು.

ವಕೀಲ ಕೆ.ಎಸ್‌. ಕೊಡತಗೇರಿ ಮಾತನಾಡಿ, ಧಾರವಾಡದ ಜ. ರೇವಣಶಿದ್ದೇಶ್ವರ ಮಠದ ಬಸವರಾಜ ದೇವರು, ಬಾದಿಮನಾಳ ಕನಕ ಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ನಿಡಗುಂದಿ ಧರ್ಮರ ಮಠದ ಷಣ್ಮುಖಪ್ಪಜ್ಜ ಧರ್ಮರ ಸಾನಿಧ್ಯ ವಹಿಸಲಿದ್ದು, ರೋಣ ಶಾಸಕ ಜಿ.ಎಸ್.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನಕದಾಸರ ಭಾವಚಿತ್ರಕ್ಕೆ ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾಲಾರ್ಪಣೆ ಮಾಡಲಿದ್ದು, ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಗಜೇಂದ್ರಗಡ ತಾಲೂಕು ಕುರುಬರ ಸಂಘದ ಗೌರವಾಧ್ಯಕ್ಷ ಎಚ್.ಎಸ್.ಸೋಂಪೂರ ಮಾಲಾರ್ಪಣೆ ಮಾಡಲಿದ್ದು ಸಮಾಜದ ಹಿರಿಯ ಮುಖಂಡ ವಿ.ಆರ್.ಗುಡಿಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಕುರುಬರ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಬಿಚ್ಚೂರ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಹೀಗಾಗಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಹಾಲುಮತ ಸಮಾಜದ ಎಲ್ಲ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕದಾಸ ಜಯಂತ್ಯುತ್ಸವವನ್ನು ಯಶಸ್ವಿಗೊಳಿಸೋಣ ಎಂದರು.

ಕುರುಬರ ಸಂಘದ ಗಜೇಂದ್ರಗಡ ತಾಲೂಕಾಧ್ಯಕ್ಷ ಅಂದಪ್ಪ ಬಿಚ್ಚೂರ, ಗೌರವಾಧ್ಯಕ್ಷ, ವಕೀಲ ಎಚ್.ಎಸ್.ಸೋಂಪೂರ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಕೊಡತಗೇರಿ, ತಾಪಂ ಮಾಜಿ ಸದಸ್ಯ ರಾಮಚಂದ್ರ ಹುದ್ದಾರ, ಅಶೋಕ ವದೇಗೋಳ ಸೇರಿ ಇತರರು ಇದ್ದರು.

Share this article