ಶಿರಸಿ: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾ. 19ರಿಂದ ಮಾ. 27ರಿಂದ 9 ದಿನಗಳ ಕಾಲ ಉತ್ಸವ ನಡೆಯಲಿದೆ.
ಬಣ್ಣ ಹಾಗೂ ಕಾವಿಯ ಕಲೆಯ ಸಾಂಪ್ರದಾಯಿಕ ಚಿತ್ರಗಳಿಂದ ಕಂಗೊಳಿಸುತ್ತಿರುವ ದೇವಸ್ಥಾನದ ಸಭಾ ಮಂಟಪದಲ್ಲಿ ಮಾರಿಕಾಂಬಾ ದೇವಿಯನ್ನು ಅಚ್ಚುಕಟ್ಟಾಗಿ ಮೂರುವರೆ ಶತಮಾನಗಳಿಂದ ನಡೆದುಬಂದ ಸಂಪ್ರದಾಯದಂತೆ ಗ್ರಾಮದೇವಿಯರಾದ ಮಾರಿಕಾಂಬೆಯ ಸಹೋದರಿಯರೆಂದು ಕರೆಯಲಾಗುವ ಶ್ರೀ ಮರ್ಕಿ-ಶ್ರೀದುರ್ಗಿಯರ ಜತೆ ಜಾತ್ರಾ ಕಲ್ಯಾಣ ಪ್ರತಿಷ್ಠೆಗಾಗಿ ಸಿದ್ಧಗೊಳಿಸುತ್ತಿದ್ದರೆ, ಮಂಗಳವಾರ ಮಧ್ಯರಾತ್ರಿಯ ಹೊತ್ತಿಗಿನ ನಿಗದಿತ ಮುಹೂರ್ತದಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳ ಪಾಲ್ಗೊಳ್ಳುವಿಕೆಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಜಾತ್ರಾ ಕಲ್ಯಾಣ ಪ್ರತಿಷ್ಠೆಯ ನಂತರ ಜಾತ್ರಾ ಗದ್ದುಗೆಗೆ ಶ್ರೀದೇವಿ ತೆರಳುವ ರಥೋತ್ಸವಕ್ಕಾಗಿ ದೇವಸ್ಥಾನದ ಎದುರು ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಥದ ಕಲಶ ಕಂಬದ ಸ್ಥಾಪನೆ, ಅಟ್ಟಣಿಗೆ ನಿರ್ಮಾಣ ಪೂರ್ಣಗೊಂಡಿದ್ದು, ಮಂಗಳವಾರ ಮಧ್ಯಾಹ್ನ ೧೨.೨೭ರಿಂದ ೧೨.೩೬ ಒಳಗಿನ ಶುಭ ಮುಹೂರ್ತದಲ್ಲಿ ರಥದ ಕಲಶ ಪ್ರತಿಷ್ಠೆ ನಡೆಯಲಿದೆ. ನಂತರ ಪತಾಕೆ ಜೋಡಣೆ ನಡೆಸಿ, ರಥವನ್ನು ಶ್ರೀದೇವಿಯ ರಥಾರೋಹಣ ಹಾಗೂ ರಥೋತ್ಸವದ ಶೋಭಾಯಾತ್ರೆಗೆ ಸಜ್ಜುಗೊಳಿಸಲಾಗುತ್ತದೆ.ಅನ್ನಪ್ರಸಾದದ ವ್ಯವಸ್ಥೆಯನ್ನು, ಜಾತ್ರಾ ಮಂಟಪದಲ್ಲಿ ಶ್ರೀದೇವಿಯ ಸಿಹಿ ಪ್ರಸಾದ, ಕುಂಕುಮ ಪ್ರಸಾದದ ತಯಾರಿಯೂ ಭರದಿಂದ ಸಾಗಿದೆ.