ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಕನ್ನಡಪ್ರಭ ವಾರ್ತೆ ಶಿರಸಿ
ಮಂಗಳವಾರ ನಗರದ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜಾತ್ರೆಯ ಪ್ರಯುಕ್ತ ಗದ್ದುಗೆಯಲ್ಲಿ ಮಂಟಪ ನಿರ್ಮಾಣ ಪ್ರಾರಂಭಿಸಲಾಗಿದ್ದು, ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲವಾಗಲು ನೆರಳಿಗಾಗಿ ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರಿಗೆ ವಸತಿ ಸೌಲಭ್ಯಕ್ಕಾಗಿ ಮಾರಿಕಾಂಬಾ ಕಲ್ಯಾಣ ಮಂಟಪ ಹಾಗೂ ಯಾತ್ರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಮಾರಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ದೇವಸ್ಥಾನದ ವತಿಯಿಂದ ಫೆ.25 ರಿಂದ ಮಾ. 4 ವರೆಗೆ (ಮಾ.3 ಚಂದ್ರ ಗ್ರಹಣ ದಿನ ಹೊರತುಪಡಿಸಿ) ಸಾರ್ವಜನಿಕ ಅನ್ನಸಂತರ್ಪಣೆ ನಡೆಲಿದ್ದು, ಭಕ್ತರಿಗೆ ಪ್ರಸಾದ ಭೋಜನ ಸ್ವೀಕರಿಸಲು ಈ ವರ್ಷ ಜರ್ಮನ್ ಟೆಂಟ್ ಹಾಕಲಾಗುತ್ತದೆ. ಆರೋಗ್ಯ, ಸಾರಿಗೆ, ಕಂದಾಯ, ನಗರಸಭೆ, ಪೊಲೀಸ್ ಇತರ ಇಲಾಖೆಯ ಸಹಕಾರದಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತದೆ. ಸುರಕ್ಷತೆ ದೃಷ್ಟಿಯಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದರ ಜತೆ ಅಗತ್ಯ ಪೊಲೀಸ್ ಸಿಬ್ಬಂದಿ ನೇಮಿಸಲು ವಿನಂತಿಸಲಾಗಿದೆ ಎಂದರು.
ದೇವಿಗೆ ಉಡಿ ಸಮರ್ಪಣೆ ಸೇವೆಗೆ 8 ಕೇಂದ್ರ ತೆರೆಯಲಾಗುತ್ತದೆ. ಫೆ. 24ರಂದು ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ 11.36ರ ನಂತರ 11.45ರೊಳಗೆ ದೇವಸ್ಥಾನದ ಸಭಾಮಂಟಪದಲ್ಲಿ ನಡೆಯಲಿದ್ದು, ಫೆ. 25ರಂದು ಬೆಳಗ್ಗೆ 7.27ರಿಂದ ದೇವಿಯ ರಥಾರೋಹಣ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ಮಧ್ಯಾಹ್ನ ನಗರದ ಬಿಡ್ಕಿಬೈಲ್‌ನ ಜಾತ್ರಾ ಸ್ಥಳದ ಪೀಠದಲ್ಲಿ ದೇವಿಯು ಪ್ರತಿಷ್ಠಾಪನೆಗೊಳ್ಳಲಿದೆ. ಫೆ. 26ರಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ಹಣ್ಣುಕಾಯಿ, ಕಾಣಿಕೆ, ಹರಕೆ, ತುಲಾಭಾರ ಇನ್ನಿತರ ಸೇವೆಗಳು ನಡೆಯಲಿದೆ. ಮಾ. 2ರಂದು ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ಉಡಿಗೆ ಸೇವೆ, ಮಾ. 4ರಂದು ಜಾತ್ರೆಯ ಮುಕ್ತಾಯದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಆ ದಿನ ಬೆಳಗ್ಗೆ 10.47ರವರೆಗೆ ಮಾತ್ರ ಸೇವೆ ಸ್ವೀಕರಿಸಲಾಗುತ್ತದೆ ಎಂದರು.ಧರ್ಮದರ್ಶಿ ಸುಧೀರ ಹಂದ್ರಾಳ ಮಾತನಾಡಿ, ದೇವಸ್ಥಾನದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಿದ್ಧತೆ ಮಾಡಿ ಅನುಮತಿಗಾಗಿ ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಲಾಗಿದೆ. ದೇವಸ್ಥಾನದಲ್ಲಿ ಶಾಶ್ವತ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಚಂದ್ರಶಾಲೆ, ಗಂಟೆ ಮಂಟಪಕ್ಕೆ ತಾಮ್ರದ ಹೊದಿಕೆ ಮಾಡಲಾಗಿದೆ. ನಮ್ಮ ಅವಧಿಯಲ್ಲಿ ₹7ರಿಂದ 8 ಕೋಟಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಜಾತ್ರಾ ಪರಿಕರ ಇಡಲು ದಾಸ್ತಾನು ಕೊಠಡಿಯೂ ನಿರ್ಮಾಣ ಹಂತದಲ್ಲಿದೆ ಎಂದರು.
ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ವ್ಯವಸ್ಥಾಪಕ ಚಂದ್ರಕಾಂತ, ಬಾಬುದಾರ ಪ್ರಮುಖರಾದ ಜಗದೀಶ ಗೌಡ, ರಮೇಶ ದಬ್ಬೆ, ಬಸವರಾಜ ಚಕ್ರಸಾಲಿ ಮತ್ತಿತರರು ಇದ್ದರು.ಚಂದ್ರ ಗ್ರಹಣವಿದ್ದರೂ ದರ್ಶನ, ಸೇವೆಗೆ ಅವಕಾಶಮಾ.3ರಂದು ಚಂದ್ರ ಗ್ರಹಣವಿದ್ದರೂ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಅನ್ನಪ್ರಸಾದ ಹಾಗೂ ಹಣ್ಣುಕಾಯಿ ಸೇವೆಯೂ ಇಲ್ಲ. ಭಕ್ತರಿಗೆ ನೀಡಲು 4 ಲಕ್ಷ ಲಡ್ಡು ತಯಾರಿಸಲಾಗುತ್ತದೆ. ಈ ವರ್ಷ ಪ್ರತಿ ಲಡ್ಡಿಗೆ ₹30 ಹಾಗೂ ₹50 ಉಡಿಗೆ ನಿಗದಿ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ತಿಳಿಸಿದರು.