ಜ.10 ರಂದು ವೈಕುಂಠ ಏಕಾದಶಿಗೆ ಸಕಲ ಸಿದ್ಧತೆ: ದೇವರಹಳ್ಳಿ ವೆಂಕಟೇಶ್

KannadaprabhaNewsNetwork | Published : Jan 9, 2025 12:45 AM

ಸಾರಾಂಶ

ಪ್ರತಿ ವರ್ಷದಂತೆ ಶ್ರೀ ವೆಂಕಟಾದ್ರಿಗೆ ಮುಂಜಾನೆ ವಿಶೇಷ ಪೂಜೆ ನಡೆಸಿದ ಬಳಿಕ 5.30ಕ್ಕೆ ವೈಕುಂಠ ದ್ವಾರ ತೆರೆಯಲಾಗುತ್ತಿದೆ. ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಲಕ್ಷ್ಮೀ ಸಮೇತ ವಿಶೇಷ ಮೂರ್ತಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಜ.10ರಂದು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶ್ರೀವೆಂಕಟೇಶ್ವರ ಸೇವಾ ಸಮಿತಿ ಸದಸ್ಯ ದೇವರಹಳ್ಳಿ ವೆಂಕಟೇಶ್ ತಿಳಿಸಿದರು.

ಸಮಿತಿಯಿಂದ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಪೈಕಿ ಅಂದು ಮುಂಜಾನೆ ವೈಕುಂಠ ದ್ವಾರ ಪ್ರವೇಶದೊಂದಿಗೆ ಶ್ರೀವೆಂಕಟೇಶ್ವರ ಸ್ವಾಮಿಯವರಿಗೆ ಅಷೇವಧಾನ ಸೇವೆ ಮತ್ತು ಮಹಾಮಂಗಳರತಿ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜ.9 ರಂದು ಗುರುವಾರ ಸಂಜೆ 6.30ಕ್ಕೆ ಶ್ರೀಮೂಲದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಆಭರಣ ಹಾಗೂ ಹೂವಿನ ಅಲಂಕಾರ ಜರುಗಲಿದೆ. ದೇವಾಲಕ್ಕೆ ತೆರಳುವ ರಸ್ತೆ ಮತ್ತು ದೇವಾಲಯ ವಿದೈತ್ ದೀಪಗಳಿಂದ ಜಗಮಗಿಸಲಿವೆ ಎಂದರು.

ಪ್ರತಿ ವರ್ಷದಂತೆ ಶ್ರೀ ವೆಂಕಟಾದ್ರಿಗೆ ಮುಂಜಾನೆ ವಿಶೇಷ ಪೂಜೆ ನಡೆಸಿದ ಬಳಿಕ 5.30ಕ್ಕೆ ವೈಕುಂಠ ದ್ವಾರ ತೆರೆಯಲಾಗುತ್ತಿದೆ. ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಲಕ್ಷ್ಮೀ ಸಮೇತ ವಿಶೇಷ ಮೂರ್ತಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ದೇವಾಲಯದ ಅರ್ಚಕರಾದ ಗೋಪಾಲ ಕೃಷ್ಣ ಭಟ್ಟರ್, ಅನಂತ ಕೃಷ್ಣ ಭಟ್ಟರ್, ಪುರೋಹಿತ ಯು.ವಿ.ಗಿರೀಶ್, ಅರ್ಚಕ ಬಿ.ಎಸ್. ಉದಯ್‌ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಕಂರ್ಯಗಳು ಜರುಗಲಿವೆ. ದೇವಾಲಯಕ್ಕೆ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಿಶೇಷವಾಗಿ ಪಂಚಕಜ್ಜಾಯ, ಹಾಲು ಮತ್ತು ಹಣ್ಣು ವಿತರಣೆ ಮಾಡಲಾಗುವುದು. ಕಜ್ಜಾಯ ತಯಾರಿಕೆ ಬರದಿಂದ ಸಾಗುತ್ತಿದೆ ಎಂದರು.

ಬೆಳಗ್ಗೆ 7.30ಕ್ಕೆ ಸೋಮು ಮತ್ತು ತಂಡದವರಿಂದ ವಾಧ್ಯಗೋಷ್ಠಿ, 10.30ಕ್ಕೆ ಮೈಸೂರಿನ ಸಂಜೀವಿನಿ ಭಜನಾ ಮಂಡಳಿಯ ಜಯಶಂಕರ್ ಮತ್ತು ನಿರ್ಮಲ ಅವರಿಂದ ಭಜನೆ ಮತ್ತು ಬೆಳಗ್ಗೆ 11.30ಕ್ಕೆ ಶಿವಾರ ಉಮೇಶ್ ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ ಹಾಗೂ ಸಂಜೆ 4 ಗಂಟೆಗೆ ಮಳವಳ್ಳಿ ಸಂಗೀತ ಶಾಲೆಯ ನಿರ್ದೇಶಕಿ ಸಿಂಧೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ಗಂಟೆಗೆ ಹರಿಕಥಾ ವಿದ್ವಾನ್ ಕಾರಸವಾಡಿ ಸಚ್ಚಿನ್ ಮತ್ತು ತಂಡದವರಿಂದ ಶ್ರೀನಿವಾಸ ಕಲ್ಯಾಣ ಹರಿಕಥೆಯನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಮಲ್ಲರಾಜು ತಂಡದವರಿಂದ ಹೆಬ್ಬೆಟ್ಟು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಕಾರ್ಯಧ್ಯಕ್ಷ ವೆಂಕಟೇಶ್, ಶೀನಕೆಂಚೇಗೌಡ, ಗುಡಿಗೆರೆ ಮೈಕಸೆಟ್ ಬಸವರಾಜು, ರವಿ, ವಿಶ್ವ, ಜವರಣ್ಣ ಇದ್ದರು.

Share this article