ಆರ್ಥಿಕ ಸದೃಢತೆಗೆ ವಾಣಿಜ್ಯ ಬೆಳೆಗಳು ಪೂರಕ

KannadaprabhaNewsNetwork | Published : Jan 9, 2025 12:45 AM

ಸಾರಾಂಶ

ಕೃಷಿ ಯಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಲು ವಾಣಿಜ್ಯ ಬೆಳೆಗಳು ಅವಶ್ಯಕವಾಗಿವೆ.

ಹೂವಿನಹಡಗಲಿ: ಕೃಷಿ ಯಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಲು ವಾಣಿಜ್ಯ ಬೆಳೆಗಳು ಅವಶ್ಯಕವಾಗಿವೆ. ಕೃಷಿಗೂ ಮತ್ತು ಕೌಟುಂಬಿಕ ಸಂಬಂಧಗಳಿಗೂ ಒಂದಕ್ಕೊಂದು ಪೂರಕವಾದ ಸಂಬಂಧವಿದೆ ಎಂ.ಪ್ರಕಾಶ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕೊಂಬಳಿ ಗ್ರಾಮದಲ್ಲಿ ಆಯೋಜಿಸಿದ್ದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ದತ್ತಿ, ಕಾಳಮ್ಮ ಸಿದ್ದಪ್ಪ ಕರಿಶೆಟ್ಟಿ ಸ್ಮಾರಕದತ್ತಿ, ಸೊಪ್ಪಿನ ವೀರಮ್ಮ, ಹುಚ್ಚಮ್ಮ ಸ್ಮರಣಾರ್ಥ ದತ್ತಿ, ಅಂಗಡಿ ವೀರಭದ್ರಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ''''''''ಕೌಟುಂಬಿಕ ಸಂಬಂಧಗಳು'''''''' ಹಾಗೂ ''''''''ಕೃಷಿ ಪ್ರಗತಿಯಲ್ಲಿ ವಾಣಿಜ್ಯ ಬೆಳೆಗಳ ಅಗತ್ಯತೆ'''''''' ವಿಷಯ ಕುರಿತು ಮಾತನಾಡಿದರು.

ಕುಟುಂಬವನ್ನು ನಮ್ಮ ಬದುಕಿನ ಬಹುಮುಖ್ಯ ಆದ್ಯತೆಯಾಗಿಸಿಕೊಳ್ಳಬೇಕಿದೆ. ಕುಟುಂಬದ ಸಂಬಂಧಗಳು ದೀರ್ಘಾಯಸ್ಸನ್ನು ನೀಡುವುದಲ್ಲದೇ ಉತ್ತಮ ಮಾನಸಿಕ ಆರೋಗ್ಯವನ್ನು ಬದುಕಿಗೆ ಅರ್ಥ ಹಾಗೂ ಉದ್ದೇಶವನ್ನು ತುಂಬ ಬಲ್ಲವು. ಭಾರತೀಯರಾದ ನಾವು ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವುದಕ್ಕಿಂತ ಕುಟುಂಬದ ಭಾಗವಾಗಿ ಹೆಚ್ಚು ಗುರುತಿಸಿಕೊಡಿರುತ್ತೇವೆ ಎಂದರು.

ಅವಿಭಕ್ತ ಕುಟುಂಬ ಆಧುನಿಕ ಜಗತ್ತಿನಲ್ಲಿ ವಿಭಕ್ತ, ಸಿಂಗಲ್ ಪೇರೆಂಟ್ ಕುಟುಂಬಗಳಾಗಿ ರೂಪಾಂತರಗೊಳ್ಳುತ್ತಿದೆ. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ, ಭಾವನಾತ್ಮಕ, ಆರ್ಥಿಕ ಬೆಂಬಲಕ್ಕೆ ಕುಟುಂಬದ ಪ್ರೀತಿ ಮತ್ತು ಪ್ರೋತ್ಸಾಹ ಬಹುಮುಖ್ಯವಾದದ್ದು. ಕುಟುಂಬದ ಏಳಿಗೆಯಲ್ಲಿ ಮನುಷ್ಯನ ಏಳಿಗೆ ಇದೆ, ಕೌಟುಂಬಿಕ ವ್ಯವಸ್ಥೆಯ ಅವಸಾನದಲ್ಲಿ ಮನುಷ್ಯನ ಅವಸಾನವೂ ಇದೆ ಎಂದರು.

ವೈಜ್ಞಾನಿಕ ವಿಧಾನ ಕೃಷಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಪ್ರಗತಿ ಸಾಧಿಸಬಹುದು. ವಾಣಿಜ್ಯ ಕೃಷಿಯು ದೇಶದ ಆರ್ಥಿಕತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಮೂಲಕ ಬೃಹತ್ ಪ್ರಮಾಣದ ಕೊಡುಗೆ ನೀಡುವುದು ಹಾಗೂ ರೈತನನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಎಂದರು.

ನಿವೃತ್ತ ಯೋಧ ಕರಿಶೆಟ್ಟಿ ಮಹಾಬಲೇಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕಾರ ಬೆಳಸಲು ಸಹಾಯಕವೆಂದರು.

ಕಸಾಪ ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ್, ಟಿ.ಬಸವನಗೌಡ, ಪಿ.ಕೆ.ಎಂ.ರೇಣುಕಸ್ವಾಮಿ ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಬಿ.ಯುವರಾಜಗೌಡ ಪ್ರಾರ್ಥಿಸಿದರು. ಉಪನ್ಯಾಸಕ ಕರಿಶೆಟ್ಟಿ ಜಯಪ್ರಕಾಶ್ ಸ್ವಾಗತಿಸಿದರು. ದತ್ತಿ ದಾನಿಗಳು,ತಾಲೂಕು ಕಸಾಪ ಪ್ರಥಮ ಅಧ್ಯಕ್ಷ ಡಾ.ಕೆ. ರುದ್ರಪ್ಪ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಜಿ.ಪರಮೇಶ್ವರಪ್ಪ ಕತ್ತಿಗೆ ಹಾಗೂ ಯುವರಾಜಗೌಡ, ಎ.ಕೃಷ್ಣ ಇವರ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಕಸಾಪ ಗೌರವ ಕಾರ್ಯದರ್ಶಿ ಎ.ಎಂ.ಚನ್ನವೀರಸ್ವಾಮಿ ವಂದಿಸಿದರು. ಪ್ರಭು ಸೊಪ್ಪಿನ ನಿರ್ವಹಿಸಿದರು.

Share this article