ಧಾರವಾಡ:
ಇಲ್ಲಿಯ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ದೇವರಾಜ ಶಿಗ್ಗಾಂವಿ ಅವರನ್ನು ಗುತ್ತಿಗೆದಾರರ ದೂರಿನ ಅನ್ವಯ, ನ್ಯಾಯಾಲಯದ ಆದೇಶದಂತೆ ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?30 ವರ್ಷಗಳ ಹಿಂದೆ ಹುಬ್ಬಳ್ಳಿ ಮೂಲದ ಆರ್.ಎನ್. ನಾಯಕ ಎಂಬ ಸಿವಿಲ್ ಗುತ್ತಿಗೆದಾರರು ಅಖಂಡ ಧಾರವಾಡ ಜಿಲ್ಲಾ ವ್ಯಾಪ್ತಿಯ ಗದಗನಲ್ಲಿ ಸಿವಿಲ್ ಕಾಮಗಾರಿ ನಿರ್ವಹಿಸಿದ್ದರು. ಆಗ ಅದರ ಬಿಲ್ ₹ 18 ಲಕ್ಷ ಆಗಿತ್ತು. ಬಾಕಿ ಬಿಲ್ ನೀಡದೇ ಕಚೇರಿ ಅಧಿಕಾರಿಗಳು ಸತಾಯಿಸುತ್ತಲೇ ಬಂದಿದ್ದರು. ಇದನ್ನು ಪ್ರಶ್ನಿಸಿ ಗುತ್ತಿಗೆದಾರ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಕೋರ್ಟ್ ಅಂದಿನಿಂದ ಇಂದಿನ ವರೆಗೆ ಬಡ್ಡಿ ಸೇರಿಸಿ ನಾಯಕ ಅವರಿಗೆ ಇಲಾಖೆಯು ₹ 3.34 ಕೋಟಿ ನೀಡುವಂತೆ ಆದೇಶಿಸಿತ್ತು. ಆದೇಶ ನೀಡಿ ಹಲವು ದಿನಗಳಾದರೂ ಗುತ್ತಿಗೆದಾರರಿಗೆ ಹಣ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಗುತ್ತಿಗೆದಾರರ ಪರ ನ್ಯಾಯವಾದಿ ಎಂ.ವಿ. ಸೋಮಣ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಒಟ್ಟಿನಲ್ಲಿ ಮಾಡಿದ ಕೆಲಸಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಲಕ್ಷದ ಲೆಕ್ಕದಲ್ಲಿದ್ದ ಮೊತ್ತ ಕೋಟಿ ಮುಟ್ಟಿದ್ದು ಒಂದೆಡೆಯಾದರೆ, ಮತ್ತೊಂದೆಡೆ ನಿರ್ಲಕ್ಷ ತೋರಿದ ಅಧಿಕಾರಿಯನ್ನು ಜೈಲಿಗೆ ಕಳಿಸಿದ್ದು ಉಳಿದೆಲ್ಲ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.