ಭೂಮಿ ನೀಡಿದ ಮಾಲೀಕರೇ ಇನ್ನೂ ಹೊಲಾ ಬಿತ್ತಾಕತ್ಯಾರಲ್ರೀ

KannadaprabhaNewsNetwork |  
Published : Jan 09, 2025, 12:45 AM IST
 ಮುಂಡರಗಿಯಲ್ಲಿ ಬುಧವಾರ ತಾಲೂಕಾ ಮಟ್ಟದ ಶಾಸಕರ ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು.      | Kannada Prabha

ಸಾರಾಂಶ

ಗುಮ್ಮಗೋಳದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಅಲ್ಲಿ ಇದುವರೆಗೂ ಮೂಲಭೂತ ಸೌಲಭ್ಯ ಒದಗಿಸಿಲ್ಲ.

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ಮುಳುಗಡೆಯಾಗಿರುವ ಗುಮ್ಮಗೋಳ ಗ್ರಾಮದ ಸ್ಥಳಾಂತರಕ್ಕಾಗಿ ನವಗ್ರಾಮ ನಿರ್ಮಾಣಕ್ಕೆ ನೀಡಿದ ಜಮೀನಿನಲ್ಲಿ ಮೂಲ ಮಾಲೀಕರು ಇನ್ನೂ ಆ ಹೋಲಾ ಬಿತ್ತಾಕತ್ಯಾರಲ್ರೀ ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಪ್ರಶ್ನಿಸಿದರು.

ಅವರು ಬುಧವಾರ ಪಟ್ಟಣದ ತಾಪಂ ಸಮರ್ಥ ಸೌಧದಲ್ಲಿ ಆಯೋಜಿಸಿದ್ದ ರೋಣ ಹಾಗೂ ಶಿರಹಟ್ಟಿ ಉಭಯ ಶಾಸಕರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಬಿದರಹಳ್ಳಿ,ಗುಮ್ಮಗೋಳ ಹಾಗೂ ವಿಠಲಾಪೂರ ಗ್ರಾಮಗಳು ಹಿನ್ನೀರಿನಿಂದ ಮುಳುಗಡೆಯಾಗಿದ್ದು, ಬಿದರಹಳ್ಳಿ ಗ್ರಾಮದಲ್ಲಿ ಶೇ. 60 ರಷ್ಟು ಕುಟುಂಬಗಳು ಸ್ಥಳಾಂತರಗೊಂಡಿದ್ದು ಗುಮ್ಮಗೋಳದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಅಲ್ಲಿ ಇದುವರೆಗೂ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಅಲ್ಲದೇ ಅಲ್ಲಿ ಪುನರ್ ವಸತಿಗಾಗಿ ನೀಡಿದ ಜಮೀನಿನಲ್ಲಿ ಇನ್ನೂ ಬಿತ್ತನೆ ಮಾಡಲಾಗುತ್ತಿದೆ. ನೀವೇನು ಕ್ರಮ ಕೈಗೊಂಡಿದ್ದೀರಿ ಎಂದು ಪುನರ್ ವಸತಿ ಪುನರ್ ನಿರ್ಮಾಣದ ಅಧಿಕಾರಿಗೆ ಪ್ರಶ್ನಿಸಿದರು.

ಆಗ ಪುನರ್ ವಸತಿ ನಿರ್ಮಾಣದ ಅಧಿಕಾರಿಗೆ ತಾವು ಅವರಿಗೆ ಅನೇಕ ಬಾರಿ ನೊಟೀಸ್ ಕೊಟ್ಟಿದ್ದೇವೆ.ಮತ್ತೊಂದು ಬಾರಿ ಪರಿಶೀಲಿಸುವುದಾಗಿ ತಿಳಿಸಿ ಅಲ್ಲಿ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ನೀರಾವರಿ ಇಲಾಖೆ ಪಂಪ್ ಹೌಸ್ ನಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಿಲ್ಲವೆಂದು ಅವರು, ತಮ್ಮ ಗಮನಕ್ಕೆ ತಂದಿದ್ದು, ತಕ್ಷಣವೇ ಅವರ ವೇತನ ನೀಡಬೇಕು. ಅಲ್ಲದೇ ಮುಳುಗಡೆ ಗ್ರಾಮಗಳಿಗೆ ಮನವೊಲಿಸಿ ಸ್ಥಳಾಂತರ ಕಾರ್ಯ ಚುರುಕುಗೊಳಿಸಿ ಶೀಘ್ರದಲ್ಲಿಯೇ ಸ್ಥಳಾಂತರ ಕಾರ್ಯ ಮುಗಿಯುವಂತೆ ಮಾಡಬೇಕು ಎಂದು ಇಬ್ಬರೂ ಶಾಸಕರು ಅಧಿಕಾರಿಗೆ ತಿಳಿಸಿದರು.

ಬಿ.ಪಿ. ಡಯಾಬಿಟೀಕ್, ಅನೇಮಿಯಾ ಹಾಗೂ ಗರ್ಭಿಣಿಯರಿಗೆ ಪ್ರತಿ ತಿಂಗಳು ಜರುಗಬೇಕಾದ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಅಲ್ಲದೇ ತಾಲೂಕಾಸ್ಪತ್ರೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಪ್ರಾರಂಭಿಸಲು ತಿಳಿಸಿದರೂ ಮಾಡುತ್ತಿಲ್ಲ ಏಕೆ ಎಂದು ಟಿಎಚ್ಓ ಅವರಿಗೆ ಪ್ರಶ್ನಿಸಿ, ಮುಂದಿನ 2-3 ದಿನಗಳಲ್ಲಿ ಸ್ಕ್ಯಾನಿಂಗ್ ಪ್ರಾರಂಭಿಸುವಂತೆ ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು. ಅದಕ್ಕೆ ಟಿಎಚ್ಓ ಒಪ್ಪಿಗೆ ಸೂಚಿಸಿದರು.

ಕ‍‍ಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ 17ನೇ ಸ್ಥಾನ ದೊರೆತಿದ್ದು, ಈ ಬಾರಿ ಮಕ್ಕಳಿಗೆ ವಿಶೇಷ ತರಗತಿ ನಡೆಸುವ ಮೂಲಕ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಉಭಯ ಶಾಸಕರು ಸೂಚಿಸಿದರು. ಈಗಾಗಲೇ ಸಂಜೆ 6 ಗಂಟೆಯಿಂದ ನುರಿತ ವಿಷಯ ಶಿಕ್ಷಕರಿಂದ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಬಿಇಓ ತಿಳಿಸಿದರು.

ಡಂಬಳ ಗ್ರಾಮದಲ್ಲಿ ಅನೇಕ ಬಸ್ಸುಗಳು ಒಳಗೆ ಹೋಗದೇ ಹೊರಗಿನಿಂದಲೇ ಹೋಗುತ್ತವೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿರುವ ಬಗ್ಗೆ ರೋಣ ಶಾಸಕ ಜಿ.ಎಸ್.ಪಾಟೀಲ ಮುಂಡರಗಿ ಘಟಕ ವ್ಯವಸ್ಥಾಪಕರಿಗೆ ಪ್ರಶ್ನಿಸಿದರು. ಕಳೆದ 3-4 ದಿನಗಳಿಂದ ಪ್ರಾರಂಭಿಸಲಾಗುತ್ತಿದೆ ಎಂದರು. ಆದರೆ ಬುಧವಾರ ಮತ್ತೆ ಹೋಗಿಲ್ಲವಂತೆ ಎಂದು ಶಾಸಕರು ಕೇಳಿದಾಗ ನನಗೆ ಮಾಹಿತಿ ಇಲ್ಲ. ನಾನು ಪರಿಶೀಲಿಸುವೆ ಎಂದಾಗ ಆ ಚಾಲಕ ನಿರ್ವಾಹಕ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿ, 8 ದಿನಗಳ ಕಾಲ ಡಂಬಳದಲ್ಲಿ ಒಬ್ಬ ಕಂಟ್ರೋಲರ್ ನನ್ನು ನೇಮಿಸಿ ಪರಿಶೀಲಿಸುವಂತೆ ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ, ನೀರಾವರಿ, ಕೃಷಿ, ತೋಟಗಾರಿಕೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಬರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಿಳಿಸಿದರು. ತಾಪಂ ಆಡಳಿತಾಧಿಕಾರಿ ತಾರಾಮಣಿ, ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ತಾಪಂ ಇಓ ವಿಶ್ವನಾಥ ಹೊಸಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ